Site icon Vistara News

Droupadi Murmu: ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಭೇಟಿಯಾದ ಎಫ್‍ಕೆಸಿಸಿಐ ನಿಯೋಗ

Droupadi Murmu

ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‍ಕೆಸಿಸಿಐ) ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಮತ್ತು ನಿಯೋಗವು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರನ್ನು ಭೇಟಿ ಮಾಡಿತು. ಈ ನಿಯೋಗದಲ್ಲಿ ಹಿರಿಯ ಉಪಾಧ್ಯಕ್ಷ ಎಂ.ಜಿ. ಬಾಲಕೃಷ್ಣ, ಉಪಾಧ್ಯಕ್ಷರಾದ ಉಮಾ ರೆಡ್ಡಿ ಮತ್ತು ಲೀಲಾ ಲಹೋಟಿ ಅವರು ಇದ್ದರು.

ಎಫ್‍ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಅವರು ಕರ್ನಾಟಕದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ಎಫ್‍ಕೆಸಿಸಿಐನ ಪಾತ್ರ ಮತ್ತು ಮಹಾಸಂಸ್ಥೆಯು ಕೈಗೊಂಡಿರುವ ಚಟುವಟಿಕೆಗಳು ಮತ್ತು ಪ್ರಮುಖ ಕಾರ್ಯಕ್ರಮಗಳ ಬಗ್ಗೆ ಭಾರತದ ರಾಷ್ಟ್ರಪತಿಗಳಿಗೆ ವಿವರಿಸಿದರು.

ಮಹಿಳಾ ಉದ್ಯಮಿಗಳು ಮತ್ತು ಉದ್ಯಮಗಳ ಅಭಿವೃದ್ಧಿಯಲ್ಲಿ ಮಹಿಳೆಯರಿಗೆ ಬೆಂಬಲ ನೀಡುವ ಮತ್ತು ಸಹಾಯ ಮಾಡುವ ಸಂಸ್ಥೆಗಳನ್ನು ಉತ್ತೇಜಿಸುವಲ್ಲಿ ಎಫ್‍ಕೆಸಿಸಿಐ ಮುಂದಾಳತ್ವ ವಹಿಸುತ್ತಿರುವ ಬಗ್ಗೆ ವಿಶ್ಲೇಷಿಸಿದರು. 2024ರ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ಎಫ್‍ಕೆಸಿಸಿಐ ಆಯೋಜಿಸುತ್ತಿರುವ ಎಫ್‍ಕೆಸಿಸಿಐನ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2024 ಮುಖ್ಯ ಅತಿಥಿಗಳಾಗಿ ಭಾಗವಹಿಸುವಂತೆ ಎಫ್‍ಕೆಸಿಸಿಐ ಅಧ್ಯಕ್ಷರು ಆಹ್ವಾನಿಸಿದರು.

ಇದನ್ನೂ ಓದಿ | Mukesh Ambani: 100 ಶತಕೋಟಿ ಡಾಲರ್‌ ಕ್ಲಬ್‌ ಸೇರಿದ ಅಂಬಾನಿ; ಮತ್ತೆ ಏಷ್ಯಾದ ಶ್ರೀಮಂತ ಗರಿ!

ಈ ವೇಳೆ ರಾಷ್ಟ್ರಪತಿಗಳು ಎಫ್‌ಕೆಸಿಸಿಐ ಆಹ್ವಾನವನ್ನು ತಕ್ಷಣ ಒಪ್ಪಿಕೊಂಡರು ಮತ್ತು ಉದ್ಯೋಗಾಕಾಂಕ್ಷಿಗಳ ಬದಲು ಮಹಿಳಾ ಉದ್ಯಮಗಳಿಗೆ ಉದ್ಯೋಗ ಒದಗಿಸುವವರಾಗಲು ಅವಕಾಶಗಳನ್ನು ಸೃಷ್ಟಿಸುವಲ್ಲಿ ಎಫ್‍ಕೆಸಿಸಿಐನ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳೆಯರ ಸಬಲೀಕರಣಕ್ಕಾಗಿ ಇಂತಹ ಅನೇಕ ಕಾರ್ಯಕ್ರಮಗಳನ್ನು ನಡೆಸಲು ಸಲಹೆ ನೀಡಿದರು. ಎಫ್‍ಕೆಸಿಸಿಐ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಕರ್ನಾಟಕದಲ್ಲಿ ವ್ಯಾಪಾರ, ಕೈಗಾರಿಕೆ ಮತ್ತು ಸೇವಾ ವಲಯದ ಅಭಿವೃದ್ಧಿಗೆ ಅತ್ಯುನ್ನತ ಸಂಸ್ಥೆಯಾಗಿರುವುದಕ್ಕೆ ಗೌರವಾನ್ವಿತ ರಾಷ್ಟ್ರಪತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version