Site icon Vistara News

ಕೈಗಾರಿಕಾ ಭೂಮಿ ಅನುಮೋದನೆ ಪ್ರಕ್ರಿಯೆ ಸರಳೀಕರಣ, ರಾಜ್ಯ ಸರ್ಕಾರಕ್ಕೆ ಎಫ್‌ಕೆಸಿಸಿಐ ಅಧ್ಯಕ್ಷ ಅಭಿನಂದನೆ

FKCCI

ಬೆಂಗಳೂರು: ರಾಜ್ಯ ಸರ್ಕಾರವು ಕೈಗಾರಿಕಾ ಭೂಮಿ ಅನುಮೋದನೆ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವ ದಿಸೆಯಲ್ಲಿ ಮಹತ್ವದ ನಿರ್ಣಯ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ.ಮುರುಗೇಶ್‌ ನಿರಾಣಿ ಅವರಿಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಅಧ್ಯಕ್ಷ ಡಾ.ಸಿ.ಎ.ಐ.ಎಸ್‌.ಪ್ರಸಾದ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

“ಈಸ್‌ ಆಫ್‌ ಡೂಯಿಂಗ್‌ ಬಿಸಿನೆಸ್‌ನಲ್ಲಿ ಕರ್ನಾಟಕ ಈಗಾಗಲೇ ಮುಂಚೂಣಿ ಸ್ಥಾನದಲ್ಲಿದೆ. ಈ ಸರಳೀಕರಣ ಕ್ರಮವು ಇನ್ನೂ ಹೆಚ್ಚಿನ ಶ್ರೇಣಿಯನ್ನು ಪಡೆಯಲು ಅನುಕೂಲವಾಗುತ್ತದೆ. ವಿಶೇಷವಾಗಿ ಕ್ರಮವು ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರಿಗೆ (ಎಂಎಸ್‌ಎಂಇ) ಬಹಳ ಸಹಕಾರಿಯಾಗುತ್ತದೆ. ಆವರು ಕೈಗಾರಿಕಾ ನಿವೇಶನ ಪಡೆಯಲು ಇನ್ನು ಮುಂದೆ ಹೆಚ್ಚಿನ ಕಾಲ ಕಾಯುವ ಅವಶ್ಯಕತೆ ಇರುವುದಿಲ್ಲ. ಇದರಿಂದ ಇನ್ನೂ ಹೆಚ್ಚಿನ ಕೈಗಾರಿಕೆಗಳನ್ನು ಕರ್ನಾಟಕದಲ್ಲಿ ಸ್ಥಾಪಿಸಲು ಪ್ರೋತ್ಸಾಹ ಸಿಗುತ್ತದೆ ಮತ್ತು ಉದ್ಯೋಗಾವಕಾಶಗಳೂ ಹೆಚ್ಚಾಗುತ್ತವೆ” ಎಂದು ಪ್ರಸಾದ್‌ ತಿಳಿಸಿದ್ದಾರೆ.

ಇದುವರೆಗೆ ಕೈಗಾರಿಕಾ ಭೂಮಿ ಅನುಮೋದನೆ ಇಚ್ಛಿಸುವ ಕೈಗಾರಿಕೋದ್ಯಮಿಗಳು “ಭೂಮಿ ಪರಿಶೀಲನಾ ಸಮಿತಿ”ಗೆ ಪ್ರಸ್ತಾವನೆ ಸಲ್ಲಿಸಿ, ಅನುಮೋದನೆ ಪಡೆಯಬೇಕಿತ್ತು. ಇದಾದ ನಂತರ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಅಥವಾ ರಾಜ್ಯಮಟ್ಟದ ಉನ್ನತ ಸಮಿತಿಯಿಂದ ಕೈಗಾರಿಕೆ ಸ್ಥಾಪನೆಗೆ ಅನುಮೋದನೆ ಪಡೆಯಬೇಕಾಗಿತ್ತು.

ನೂತನ ಸರಳೀಕರಣ ಪದ್ಧತಿಯಿಂದ ಈಗ ಕೈಗಾರಿಕೋದ್ಯಮಗಳು “ಭೂಮಿ ಪರಿಶೀಲನಾ ಸಮಿತಿ”ಯ ಅನುಮೋದನೆ ಪಡೆಯುವ ಅವಶ್ಯಕತೆ ಇರುವುದಿಲ್ಲ. ಅವರು ನೇರವಾಗಿ ಸಂಬಂಧಿಸಿದ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಅಥವಾ ರಾಜ್ಯಮಟ್ಟದ ಉನ್ನತ ಸಮಿತಿಗೆ ಯೋಜನೆಯ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಬಹುದಾಗಿದೆ.

ಹಾಗಾಗಿ ಎಫ್‌ಕೆಸಿಸಿಐ ಅಧ್ಯಕ್ಷರು ಸರಳೀಕರಣ ಪದ್ಧತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಸುಧಾರಣಾ ಪ್ರಕ್ರಿಯೆಯಿಂದ ನವೆಂಬರ್‌ ೨, ೩ ಹಾಗೂ ೪ರಂದು ಜರುಗಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಹೆಚ್ಚಿನ ಒತ್ತು ದೊರೆಯುತ್ತದೆ. ಅಲ್ಲದೆ, “ನವಭಾರತ ನಿರ್ಮಾಣಕ್ಕಾಗಿ ನವ ಕರ್ನಾಟಕ” ನಿರ್ಮಿಸಲು ಮತ್ತು ಕರ್ನಾಟಕ ರಾಜ್ಯವನ್ನು ಬರುವ ೨೦೨೫ರ ಹೊತ್ತಿಗೆ ೧.೫ ಲಕ್ಷ ಕೋಟಿ ಡಾಲರ್‌ ಆರ್ಥಿಕತೆ ಹೊಂದಿದ ರಾಜ್ಯವನ್ನಾಗಿ ಮಾಡುವಲ್ಲಿ ಹೆಚ್ಚಿನ ಕೊಡುಗೆ ನೀಡುತ್ತದೆ” ಎಂದು ಪ್ರಸಾದ್ ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ | Flagship event | ಎಫ್‌ಕೆಸಿಸಿಐ ಮಂಥನ, ಎಕ್ಸ್‌ಪೋ ಅವಾರ್ಡ್‌ ಕಾರ್ಯಕ್ರಮಕ್ಕೆ ಕೇಂದ್ರ ವಿತ್ತ ಸಚಿವೆಗೆ ಆಹ್ವಾನ

Exit mobile version