ಶಿವಮೊಗ್ಗ: ನಗರದಲ್ಲಿ ಹಾಕಿರುವ ಕಾರ್ಮಿಕ ಇಲಾಖೆಗೆ ಸಂಬಂಧಿಸಿ ಹಾಕಲಾಗಿರುವ ಫ್ಲೆಕ್ಸ್‌ಗಳಲ್ಲಿ (Flex controversy) ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಇ. ಕಾಂತೇಶ್ ಅವರ ಫೋಟೊವನ್ನು ದೊಡ್ಡದಾಗಿ ಹಾಕಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಫ್ಲೆಕ್ಸ್‌ನ ಎರಡೂ ಬದಿಯಲ್ಲಿ ಕೆ.ಎಸ್. ಈಶ್ವರಪ್ಪ ಮತ್ತು ಕಾಂತೇಶ್ ಅವರ ಫೋಟೊವನ್ನು ದೊಡ್ಡದಾಗಿ ಹಾಕಲಾಗಿದೆ. ಜನಪ್ರತಿನಿಧಿಗಳ ಫೋಟೊವನ್ನು ಚಿಕ್ಕದಾಗಿ ಹಾಕಲಾಗಿದೆ.
ಮಂಗಳವಾರ ಕಾರ್ಮಿಕ ಇಲಾಖೆ ವತಿಯಿಂದ ಕಿಟ್ ವಿತರಿಸುವ ಕಾರ್ಯಕ್ರಮ ಆಯೋಜನೆಗೊಂಡಿದೆ. ನಗರದ ಶುಭ ಮಂಗಳ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಪೂರಕವಾಗಿ ನಗರದ ವಿವಿಧೆಡೆ ಅಳವಡಿಸಿರುವ ಫ್ಲೆಕ್ಸ್ ಹಾಕಲಾಗಿದೆ. ಇದಕ್ಕೆ ಎಮ್ಮೆಲ್ಸಿಗಳಾದ ಆಯನೂರು ಮಂಜುನಾಥ್, ರುದ್ರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಆಯನೂರು ಮಂಜುನಾಥ್ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸರಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡಿರುವುದು ಸರಿಯಲ್ಲ ಎಂದು ಹಲವು ಬಿಜೆಪಿ ನಾಯಕರು, ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. ಫ್ಲೆಕ್ಸ್ ತೆರವುಗೊಳಿಸದಿದ್ದರೆ ಕಾರ್ಯಕ್ರಮ ಬಹಿಷ್ಕರಿಸುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಆದರೂ ಫ್ಲೆಕ್ಸ್ ತೆಗೆದಿಲ್ಲ. ಹೀಗಾಗಿ ಅವರು ಕಾರ್ಯಕ್ರಮಕ್ಕೆ ಗೈರುಹಾಜರಾಗುತ್ತಾರಾ ಎಂದು ಕಾದು ನೋಡಬೇಕಾಗಿದೆ.
ಮುಂದಿನ ಚುನಾವಣೆಗೆ ಸಿದ್ಧತೆ
ಕೆ.ಇ. ಕಾಂತೇಶ್ ಅವರು ಮುಂದಿನ ಚುನಾವಣೆಯಲ್ಲಿ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರು ಎಲ್ಲಿ ಸಾಧ್ಯವೋ ಅಲ್ಲೆಲ್ಲ ಪ್ರಚಾರ ಪಡೆಯಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಉಗ್ರರನ್ನು ಗುಂಡು ಹೊಡೆದು ಸಾಯಿಸಬೇಕು: ಗುಡುಗಿದ ಕೆ.ಎಸ್. ಈಶ್ವರಪ್ಪ