Site icon Vistara News

Flex Controversy | ತುಮಕೂರಿನಲ್ಲಿ ಮತ್ತೆ ಸಾವರ್ಕರ್‌ ಚಿತ್ರವಿರುವ ಫ್ಲೆಕ್ಸ್‌ ಅಳವಡಿಸಿದ ಹಿಂದೂ ಕಾರ್ಯಕರ್ತರು

Flex Controversy

ತುಮಕೂರು: ಶಿವಮೊಗ್ಗದಲ್ಲಿ ಹುಟ್ಟಿಕೊಂಡ ವೀರ ಸಾವರ್ಕರ್‌ ಫ್ಲೆಕ್ಸ್‌ ವಿವಾದ (Flex Controversy) ಇನ್ನು ಜೀವಂತವಾಗಿರುವಾಗಲೇ ತುಮಕೂರಿನಲ್ಲಿ ಈ ವಿವಾದ ಹೊಸ ರೂಪ ಪಡೆದುಕೊಳ್ಳುತ್ತಿದೆ. ಕಳೆದ ಸೋಮವಾರ ರಾತ್ರಿ ನಗರದಲ್ಲಿ ಅಳವಡಿಸಲಾಗಿದ್ದ ಸಾವರ್ಕರ್‌ ಚಿತ್ರವಿದ್ದ ಫ್ಲೆಕ್ಸ್‌ನ್ನು ಹರಿದು ಹಾಕಲಾಗಿತ್ತು. ಇಂದು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರು ಮತ್ತೆ ಸಾವರ್ಕರ್‌ ಚಿತ್ರವಿರುವ ಫ್ಲೆಕ್ಸ್‌ ಗಳನ್ನು ಅಳವಡಿಸಿದ್ದಾರೆ.

ನಗರದ ಟೌನ್ ಹಾಲ್ ಸರ್ಕಲ್ ನಲ್ಲಿರುವ ಗಣಪತಿ ದೇವಸ್ಥಾನದ ಎದುರು ಸಾವರ್ಕರ್ ಫ್ಲೆಕ್ಸ್ ಅಳವಡಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ತುಮಕೂರು ನಗರದ ರಸ್ತೆಯ ಉದ್ದಕ್ಕೂ 80 ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವಿರುವ ಫ್ಲೆಕ್ಸ್‌ ಹಾಕಲಾಗಿತ್ತು. ತುಮಕೂರು ನಗರ ಬಿಜೆಪಿ ಶಾಸಕ ಜ್ಯೋತಿ ಗಣೇಶ್‌ ಅವರು ಇದನ್ನು ಹಾಕಿಸಿದ್ದರು. ಎಂಪ್ರೆಸ್ ಕಾಲೇಜಿನ ಮುಂಭಾಗದಲ್ಲಿ ಹಾಕಲಾಗಿದ್ದ ಫ್ಲೆಕ್ಸ್‌ನಲ್ಲಿ ಸಾವರ್ಕರ್‌ ಚಿತ್ರವಿತ್ತು. ಕಿಡಿಗೇಡಿಗಳು ಈ ಬ್ಯಾನರನ್ನೇ ಹುಡುಕಿ ಚಿತ್ರಕ್ಕೆ ಹನಿ ಮಾಡಿದ್ದರು.

ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ ಫ್ಲೆಕ್ಸ್‌ ಗಲಾಟೆ ಜೋರಾಗುತ್ತಿದ್ದಂತೆಯೇ ತುಮಕೂರು ಮಹಾನಗರ ಪಾಲಿಕೆ ವತಿಯಿಂದ ಫ್ಲೆಕ್ಸ್‌ಗಳ ತೆರವು ಕಾರ್ಯಾಚರಣೆ ಆರಂಭಗೊಂಡಿತ್ತು. ಇನ್ನು ಉಳಿದ ಫ್ಲೆಕ್ಸ್‌ಗಳಿಗೆ ಹಾನಿ ಮಾಡಿ ಪರಿಸ್ಥಿತಿ ನಿಯಂತ್ರಣ ತಪ್ಪುವ ಮೊದಲೇ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿತ್ತು. ಈಗ ಹೊಸದಾಗಿ ಅಳವಡಿಸಿರುವ ಫ್ಲೆಕ್ಸ್‌ ಅನ್ನು ಏನು ಮಾಡಲಾಗುತ್ತದೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ | Shimogga tense | ಶಿವಮೊಗ್ಗ ಪ್ರಕರಣದ ಎಫೆಕ್ಟ್‌ ಬೆಂಗಳೂರಿಗೆ ತಟ್ಟದಂತೆ ಕಟ್ಟೆಚ್ಚರ

Exit mobile version