ಲೋಹಿತ್ ಮಡಿಕೇರಿ
ಕಳೆದ ವರ್ಷ ಸಾಕಷ್ಟು ಮಳೆ ಸುರಿದಿದ್ದರೂ ಜಿಲ್ಲೆಯಲ್ಲಿ ಎಲ್ಲೂ ದೊಡ್ಡ ಮಟ್ಟದ ಹಾನಿ ಸಂಭವಿಸಿರಲಿಲ್ಲ. ಹೀಗಾಗಿ ಮಳೆಗಾಲ ಮುಗಿಯುತ್ತಿದ್ದಂತೆ ಜಿಲ್ಲೆಯ ಜನರು ಕಂಟಕ ಮುಗಿಯಿತು ಎಂದು ನಿಟ್ಟುಸಿರು ಬಿಟ್ಟಿದ್ದರು. ಆದರೆ ಇದೀಗ ಜಿಲ್ಲಾಡಳಿತ ಕೊಟ್ಟಿರುವ ಶಾಕಿಂಗ್ ಸುದ್ದಿ ಜಿಲ್ಲೆಯ ಜನರಲ್ಲಿ ಆತಂಕ ಉಂಟುಮಾಡಿದೆ.
ಈಗಾಗಲೇ ಮಳೆಗಾಲಕ್ಕೂ ಮುನ್ನವೇ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದೆ. ಇನ್ನೂ ಕೆಲವೇ ದಿನಗಳಲ್ಲಿ ಮುಂಗಾರು ಎಂಟ್ರಿಯಾಗಲಿದ್ದು, ಜಿಲ್ಲೆಗೆ ಅಪಾಯ ತಂದೊಡ್ಡುತ್ತಾ ಎನ್ನುವ ಆತಂಕ ಶುರುವಾಗಿದೆ. ಹೌದು, ಜಿಲ್ಲೆಯಲ್ಲಿ ಈ ಬಾರಿ ಪ್ರವಾಹ ಮತ್ತು ಭೂಕುಸಿತ ಎದುರಾಗುವ ಸಾಧ್ಯತೆ ಇದೆ ಎಂದು ಸ್ವತಃ ಜಿಲ್ಲಾಡಳಿತ ಹೇಳಿದೆ. 44 ಗ್ರಾಮಗಳು ಪ್ರವಾಹ, 43 ಗ್ರಾಮಗಳು ಭೂಕುಸಿತದಿಂದ ಸಮಸ್ಯೆ ಎದುರಿಸಲಿವೆ ಎಂದು ಹೇಳಲಾಗಿದೆ.
ಇದಕ್ಕಾಗಿಯೇ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗೆ ಎಲ್ಲ ಅಧಿಕಾರಿಗಳು ಫುಲ್ ಅಲರ್ಟ್ ಆಗಿರುವಂತೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ಹೇಳಿದ್ದಾರೆ. ಜಿಲ್ಲೆಯಲ್ಲಿ 44 ಗ್ರಾಮಗಳಲ್ಲಿ ಪ್ರವಾಹವಾಗುವ ಸಾಧ್ಯತೆ ಇದ್ದು, 43 ಗ್ರಾಮಗಳಲ್ಲಿ ಭೂಕುಸಿತ ಆಗುವ ಸಾಧ್ಯತೆಗಳಿವೆ. ಅಂತಹ ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಅಂತಹ ಗ್ರಾಮಗಳ ಜನರಿಗೆ ಮಳೆಗಾಲ ಆರಂಭವಾಗುವಷ್ಟರಲ್ಲಿ ನೊಟೀಸ್ ನೀಡಲಾಗುವುದು. ಕಳೆದ ವರ್ಷಗಳಂತೆ ಕಾಳಜಿ ಕೇಂದ್ರಗಳನ್ನು ತೆರೆದು ಅಲ್ಲಿ ರಕ್ಷಣೆ ನೀಡಲಾಗುವುದು ಎಂದು ಹೇಳಿದ್ದಾರೆ. ಇದು ಜಿಲ್ಲೆಯ ಜನರು ಮತ್ತೆ ದಂಗು ಬಡಿಯುವಂತೆ ಮಾಡಿದೆ.
ಇದನ್ನೂ ಓದಿ | Heavy Rains | ಮಳೆಗೆ ಬೆಳೆ ನಷ್ಟ; ಮನೆಗಳಿಗೆ ನೀರು ನುಗ್ಗಿ ಜನರ ಪರದಾಟ
2018ರಲ್ಲಿ ನಡೆದ ಜಲಪ್ರಳಯದಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿತು. ಆಗ ಎಲ್ಲೆಡೆಯಿಂದ 1000 ಕೋಟಿ ರೂ.ಗಳಿಗಿಂತ ಹೆಚ್ಚಿನ ನೆರವು ಹರಿದೆ ಬಂದಿದೆ. ಆದರೆ ರಾಜ್ಯ ಸರ್ಕಾರ ಕೊಡಗಿನ ಜನರನ್ನು ನಿರ್ಲಕ್ಷ್ಯ ಮಾಡಿದೆ, ಪರಿಹಾರ ಕಾರ್ಯ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಈಗಲಾದರೂ ಸರ್ಕಾರ ಪ್ರವಾಹ ಸಂತ್ರಸ್ತರ ನೆರವಿಗೆ ಬರಬೇಕು ಎಂದು ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ಒತ್ತಾಯಿಸಿದ್ದಾರೆ.
ಜಿಲ್ಲಾಡಳಿತವೇನೋ ಪ್ರವಾಹ ಮತ್ತು ಭೂಕುಸಿತದ ಸಾಧ್ಯತೆ ಇರುವ ಗ್ರಾಮಗಳ ಜನರನ್ನು ಸ್ಥಳಾಂತರ ಮಾಡುವುಕ್ಕೆ ಚಿಂತಿಸುತ್ತಿದೆ. ಆದರೆ ಕಳೆದ ನಾಲ್ಕು ವರ್ಷಗಳ ಹಿಂದೆ ಭೂಕುಸಿತ ಮತ್ತು ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡಿದ್ದ ನೂರಾರು ಸಂತ್ರಸ್ತರಿಗೆ ಇಂದಿಗೂ ಮನೆ, ಪರಿಹಾರವನ್ನು ಕೊಟ್ಟಿಲ್ಲ. 2018ರಲ್ಲಿ ಮನೆ ಕಳೆದುಕೊಂಡಿದ್ದ ಕುಟುಂಬಗಳ ಪೈಕಿ 70ಕ್ಕೂ ಹೆಚ್ಚು ಕುಟುಂಬಗಳಿಗೆ ಮನೆ ವಿತರಣೆ ಮಾಡಿಲ್ಲ. ಕೆ. ನಿಡುಗಣೆ ಪಂಚಾಯಿತಿಯ ಆರ್‌ಟಿಒ ಕಚೇರಿ ಬಳಿ ಇಂದಿಗೂ ಮನೆ ಕಾಮಗಾರಿ ಮುಂದುವರಿದಿದೆ. ಮತ್ತೊಂದೆಡೆ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 80 ಕ್ಕೂ ಹೆಚ್ಚು ಸಂತ್ರಸ್ಥ ಕುಟುಂಬಗಳಿಗೆ ಅಭ್ಯತ್ ಮಂಗಲ ಬಳಿ ನಿವೇಶನ ಗುರುತಿಸಿ ಎರಡು ವರ್ಷಗಳಾದರೂ ಇಂದಿಗೂ ಹಂಚಿಕೆ ಮಾಡಿಲ್ಲ. ಆದರೆ ಮತ್ತೆ ಪ್ರವಾಹ ಭೂಕುಸಿತ ಆಗುವ ಸಾಧ್ಯತೆ ಇದ್ದು ಮನೆ ಖಾಲಿ ಮಾಡಿಸುತ್ತೇವೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಹೀಗಾದರೆ ಜನರು ಎಲ್ಲಿಗೆ ಹೋಗಬೇಕು, ಅವರಿಗೆ ಶಾಶ್ವತ ಸೂರು ಬೇಡವೆ. ಸರ್ಕಾರಕ್ಕೆ ಅಥವಾ ಜಿಲ್ಲಾಡಳಿತಕ್ಕೆ ಮಾನವೀಯತೆ ಎನ್ನುವುದು ಇಲ್ಲವೇ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ ಗಣೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ಮಳೆಯಿಂದ ಬೆಂಗಳೂರಿನ 3,453 ಮನೆಗಳಿಗೆ ಹಾನಿ: 60% ಪರಿಹಾರ ಬಾಕಿ