Site icon Vistara News

Lalbagh Flower Show: ಆ.4 ರಿಂದ ಲಾಲ್‌ಬಾಗ್‌ ಫ್ಲವರ್ ಶೋ; ಸಂಚಾರ ಮಾರ್ಗ, ಪಾರ್ಕಿಂಗ್‌ನಲ್ಲಿ ಬದಲಾವಣೆ

lalbagh flower show

ಬೆಂಗಳೂರು: ನಗರದ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಆಗಸ್ಟ್ 4ರಂದು ಫಲಪುಷ್ಪ ಪ್ರದರ್ಶನ-2023 (Lalbagh Flower Show) ಆರಂಭವಾಗಲಿದೆ. ಆಗಸ್ಟ್ 15ರವರೆಗೆ‌ 10 ದಿನಗಳ ಕಾಲ ಫ್ಲವರ್ ಶೋ ಇರಲಿದ್ದು, ಹೂವಿನ ಲೋಕವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಬರಲಿದ್ದಾರೆ. ಇದರಿಂದ ಲಾಲ್‌ಬಾಗ್‌ ಮಾರ್ಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಲಿದೆ. ಹೀಗಾಗಿ ಸುಗಮ ಸಂಚಾರಕ್ಕೆ ಅನುವಾಗಲು ಸಂಚಾರ ಮಾರ್ಗ ಹಾಗೂ ವಾಹನ ನಿಲುಗಡೆಯಲ್ಲಿ ಸಂಚಾರ ಪೊಲೀಸ್‌ ವಿಭಾಗ ಕೆಲ ಬದಲಾವಣೆಗಳನ್ನು ಮಾಡಿದೆ.

ಫ್ಲವರ್‌ ಶೋಗೆ ಬರು ಸಾರ್ವಜನಿಕರು ಸಾಧ್ಯವಾದಷ್ಟು ಸಮೂಹ ಸಾರಿಗೆ ವ್ಯವಸ್ಥೆ ಬಳಸಲು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ಡಾ.ಮರೀಗೌಡ ರಸ್ತೆ, ಲಾಲ್‌ ಬಾಗ್ ರಸ್ತೆ, ಕೆ.ಎಚ್. ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಸಮೂಹ ಸಾರಿಗೆಗಳಾದ ಬಿಎಂಟಿಸಿ ಬಸ್‌, ಮೆಟ್ರೋ ಹಾಗೂ ಕ್ಯಾಬ್‌ಗಳನ್ನು ಬಳಸಲು ಪೊಲೀಸರು ಮನವಿ ಮಾಡಿದ್ದಾರೆ.

ಇದನ್ನೂ ಓದಿ | Lalbagh Tour : ಸಸ್ಯಕಾಶಿ ಲಾಲ್‌ಬಾಗ್‌ನೊಳಗೆ ಏನೇನಿದೆ? ಮರೆಯದೆ ನೋಡಿ…

ವಾಹನಗಳ ನಿಲುಗಡೆ ನಿಷೇಧಿಸಿರುವ ರಸ್ತೆಗಳು

  1. ಡಾ. ಮರಿಗೌಡ ರಸ್ತೆ, ಲಾಲ್ ಬಾಗ್ ಮುಖ್ಯ ದ್ವಾರದಿಂದ ನಿಮ್ಹಾನ್ಸ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ
  2. ಕೆ.ಎಚ್.ರಸ್ತೆ, ಕೆ.ಎಚ್.ವೃತ್ತದಿಂದ ಶಾಂತಿನಗರ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ
  3. ಲಾಲ್‌ ಬಾಗ್ ರಸ್ತೆ, ಸುಬ್ಬಯ್ಯ ವೃತ್ತದಿಂದ ಲಾಲ್‌ ಬಾಗ್ ಮುಖ್ಯದ್ವಾರದವರೆಗೆ
  4. ಸಿದ್ದಯ್ಯ ರಸ್ತೆ, ಊರ್ವಶಿ ಥಿಯೇಟರ್ ಜಂಕ್ಷನ್‌ನಿಂದ ವಿಲ್ಸನ್ ಗಾರ್ಡನ್ 12ನೇ ಕ್ರಾಸ್‌ವರೆಗೆ
  5. ಬಿ.ಎಂ.ಟಿ.ಸಿ ರಸ್ತೆಯಲ್ಲಿ, ರಸ್ತೆಯ ಎರಡೂ ಬದಿಗಳಲ್ಲಿ
  6. ಲಾಲ್ ಬಾಗ್ ವೆಸ್ಟ್ ಗೇಟ್‌ನಿಂದ ಆರ್.ವಿ. ಟೀಚರ್ಸ್ ಕಾಲೇಜಿನವರೆಗೆ
  7. ಆರ್ ವಿ ಟೀಚರ್ಸ್‌ ಕಾಲೇಜಿನಿಂದ ಆಶೋಕ ಪಿಲ್ಲರ್‌ವರೆಗೆ
  8. ಅಶೋಕ ಪಿಲ್ಲರ್‌ನಿಂದ ಸಿದ್ದಾಪುರ ಜಂಕ್ಷನ್‌ವರೆಗೆ

ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿರುವ ಸ್ಥಳಗಳು

  1. ಡಾ.ಮರಿಗೌಡ ರಸ್ತೆ, ಆಲ್ ಅಮೀನ್ ಕಾಲೇಜ್ ಆವರಣದಲ್ಲಿ ದ್ವಿಚಕ್ರ ವಾಹನ ನಿಲುಗಡೆ
  2. ಕೆ.ಎಚ್.ರಸ್ತೆ, ಶಾಂತಿನಗರ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದ ಮೇಲೆ ನಾಲ್ಕು ಚಕ್ರದ ವಾಹನ ನಿಲುಗಡೆ
  3. ಡಾ.ಮರಿಗೌಡ ರಸ್ತೆ- ಹಾಪ್ ಕಾಮ್ಸ್‌ನಲ್ಲಿ ದ್ವಿ ಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ನಿಲುಗಡೆ
  4. ಜೆ.ಸಿ. ರಸ್ತೆ ಕಾರ್ಪೊರೇಷನ್ ಪಾರ್ಕಿಂಗ್ ಸ್ಥಳದಲ್ಲಿ ದ್ವಿ ಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ನಿಲುಗಡೆ

10-12 ಲಕ್ಷ ಜನರು ಬರುವ ಸಾಧ್ಯತೆ

    ಸಿಲಿಕಾನ್ ಸಿಟಿಯ ಚಂದದ ತಾಣ ಲಾಲ್‌ಬಾಗ್‌ನಲ್ಲಿ ಶುಕ್ರವಾರ ಸಂಜೆ 6 ಗಂಟೆಗೆ ಸಿಎಂ ಸಿದ್ದರಾಮಯ್ಯ 214ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದು, ಲಾಲ್‌ಬಾಗ್‌ನ ಗಾಜಿನಮನೆ ಮಧುವನಗಿತ್ತಿಯಂತೆ ಶೃಂಗಾರವಾಗಿದೆ. ಈ ಬಾರಿ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯಗೆ ಗೌರವ ಅರ್ಪಣೆ ಮಾಡಲಾಗಿದೆ. ಬರೋಬ್ಬರಿ 2 ಕೋಟಿ ರೂ. ವೆಚ್ಚದಲ್ಲಿ 69 ಬಗೆಯ ಹೂಗಳು ಈ ಬಾರಿ ಫ್ಲವರ್ ಶೋ ಅಂದವನ್ನು ಹೆಚ್ಚಿಸಲಿವೆ. ಈ ವರ್ಷ 10 ರಿಂದ 12 ಲಕ್ಷದಷ್ಟು ಜನರು ಬರುವ ಸಾಧ್ಯತೆ ಇದ್ದು, ಫಲಪುಷ್ಪ ಪ್ರದರ್ಶನದಲ್ಲಿ ಹಲವು ಕಲೆಗಳ ಸಾರುವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಒಟ್ಟು 10 ದಿನಗಳ ಕಾಲ ಫ್ಲವರ್ ಶೋ ಇರಲಿದೆ.

    ಹೂವಿನಿಂದ ಅರಳಿರುವ ವಿಧಾನಸೌಧದ ಮಾದರಿ ಈ ಬಾರಿಯ ಪ್ರಮುಖ ಆಕರ್ಷಣೆಯಾಗಿದ್ದು, ಫ್ಲವರ್ ಶೋಗೆ ಅಂದಾಜು 13 ರಿಂದ 15 ಲಕ್ಷದಷ್ಟು ಹೂಗಳು ಬೇಕಾಗಿವೆ. ಸುಮಾರು 8 ಲಕ್ಷ ಹೂಗಳನ್ನು ರಾಜ್ಯದ ನಂದಿಗಿರಿಧಾಮ, ಕೆಮ್ಮಣ್ಣುಗುಂಡಿ ಗಿರಿಧಾಮ ಸೇರಿ ತಮಿಳುನಾಡು, ಆಂಧ್ರ ಪ್ರದೇಶ, ಊಟಿಯಿಂದ ಹೂಗಳನ್ನ ತರಿಸಿಕೊಳ್ಳಲಾಗಿದೆ. ಸದ್ಯ ಸುಮಾರು 60 ಕಲಾವಿದರು ವಿಧಾನಸೌಧದ ಭವ್ಯ ಕಲಾಕೃತಿ ನಿರ್ಮಿಸಿದ್ದು, ಶುಕ್ರವಾರದಿಂದ ಜನರ ವೀಕ್ಷಣೆಗೆ ಸಿಗಲಿದೆ.

    ಇದನ್ನೂ ಓದಿ | lalbagh flower show 2023 : ಆ.4ಕ್ಕೆ ಲಾಲ್‌ಬಾಗ್‌ ಫ್ಲವರ್‌ ಶೋ; ಹೂವಲ್ಲಿ ಅರಳುವ ಕೆಂಗಲ್ ಹನುಮಂತಯ್ಯ

    ಇನ್ನು ಫ್ಲವರ್ ಶೋಗೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಇರಲಿದ್ದು, ದೊಡ್ಡವರಿಗೆ 70 ರೂ. ಹಾಗೂ ಮಕ್ಕಳಿಗೆ 30 ರೂಪಾಯಿ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಸದ್ಯ ಹೂಗಳ ಲೋಕದ ಅನಾವರಣಕ್ಕೆ ಸಕಲ ಸಿದ್ಧತೆ ನಡೆದಿದ್ದು, ನಾಳೆ ನೋಡುಗರ ಕಣ್ಣಿಗೆ ಹಬ್ಬ ನೀಡಲಿದೆ.

    Exit mobile version