ಚಿಕ್ಕಬಳ್ಳಾಪುರ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ವಿಭೂಷಣ, ಪದ್ಮ ಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಈ ಪೈಕಿ ರಾಜ್ಯದ ಐವರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದ್ದು, ಅವರಲ್ಲಿ ಜಿಲ್ಲೆಯ ತಮಟೆ ಕಲಾವಿದ ಮುನಿವೆಂಕಟಪ್ಪ (72) ಅವರು ಜಾನಪದ ಸಂಗೀತ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪಿಂಡಿಪಾಪನಹಳ್ಳಿ ಗ್ರಾಮದ ದಲಿತ ಕುಟುಂಬದಲ್ಲಿ 1947ರ ಜೂನ್ 2ರಂದು ಮುನಿಗಂಗಮ್ಮ, ಲೇಟ್ ಪಾಪಣ್ಣ ದಂಪತಿಗೆ ಜನಿಸಿದ ಮುನಿವೆಂಕಟಪ್ಪ ಅವರು, 16ನೇ ವಯಸ್ಸಿಗೇ ಜಾನಪದ ಕಲೆ ತಮಟೆ ನುಡಿಸುವುದನ್ನು ಆರಂಭಿಸಿದ್ದರು. ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಸಾಂಪ್ರದಾಯಿಕ ತಮಟೆ ವಾದನ ಮಾಡಿದ್ದಾರೆ.
ಕರ್ನಾಟಕ ಸರ್ಕಾರ 1992ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಜಪಾನ್‌ನಲ್ಲಿ ತಮ್ಮ ಕಲೆ ಪ್ರದರ್ಶನ ಮಾಡಿದ್ದರು. ಕರ್ನಾಟಕ ಸರ್ಕಾರ 1992ರಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. 2014ರಲ್ಲಿ ಅಮೆರಿಕದ ಅಕ್ಕ ಸಮ್ಮೇಳನದಲ್ಲಿ ಇವರು ಭಾಗವಹಿಸಿದ್ದರು. ಜಾನಪದ ಕ್ಷೇತ್ರಕ್ಕೆ ಮುನಿವೆಂಕಟಪ್ಪ ಅವರ ಕೊಡುಗೆ ಪರಿಗಣಿಸಿ ಹಂಪಿ ಉತ್ಸವದಲ್ಲಿ ನಾಡೋಜ ಪ್ರಶಸ್ತಿ ನೀಡಲಾಗಿತ್ತು. ಇದೀಗ ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಇದನ್ನೂ ಓದಿ | Padma Awards 2023: ಎಸ್.ಎಂ.ಕೃಷ್ಣ ಪದ್ಮವಿಭೂಷಣ, ಸುಧಾಮೂರ್ತಿ, ಎಸ್ಎಲ್ ಭೈರಪ್ಪ ಪದ್ಮಭೂಷಣ
ತಮಟೆ ಎಂಬುದು ಹಳೆಯ ಮೈಸೂರು ಪ್ರದೇಶದ ಒಂದು ತಾಳವಾದ್ಯವಾಗಿದೆ. ಈ ಜಾನಪದ ಕಲೆ ಉಳಿವಿಗೆ ಶ್ರಮಿಸುತ್ತಿರುವ ಮುನಿವೆಂಕಟಪ್ಪ ಅವರು ಯುವ ಕಲಾವಿದರಿಗೆ ತರಬೇತಿ ನೀಡುತ್ತಿದ್ದಾರೆ. ಹೀಗಾಗಿ ಇವರು ʼತಮಟೆಯ ತಂದೆʼ (Father of Thamate) ಎಂದೇ ಪ್ರಸಿದ್ಧಿಯಾಗಿದ್ದಾರೆ.