ವಿಜಯನಗರ : ಇಲ್ಲಿನ ಹೊಸಪೇಟೆಯ ಜಂಬುನಾಥ ರಸ್ತೆಯಲ್ಲಿರುವ ಬಾಲಕಿಯರ ಮೆಟ್ರಿಕ್ ಎಸ್‌ಟಿ ಹಾಸ್ಟೆಲ್‌ನ (Girls Hostel) ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ. ವಿದ್ಯಾರ್ಥಿನಿಯರು ನಿನ್ನೆ ಬುಧವಾರ ರಾತ್ರಿ ಚಿಕನ್ (Chicken Food) ಊಟ ಮಾಡಿದ್ದರು. ಆದರೆ ಮಧ್ಯರಾತ್ರಿಯಂದು ವಿದ್ಯಾರ್ಥಿನಿಯರಲ್ಲಿ ಹೊಟ್ಟೆ ನೋವು, ವಾಂತಿ-ಭೇದಿ (Food Poisoning) ಕಾಣಿಸಿಕೊಂಡಿದೆ.
ಅಸ್ವಸ್ಥಗೊಂಡ ವಿದ್ಯಾರ್ಥಿನಿಯರನ್ನು ಕೂಡಲೇ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಅಸ್ವಸ್ಥಗೊಂಡವರ ಸಂಖ್ಯೆ 34ಕ್ಕೆ ಏರಿಕೆ ಆಗಿದೆ. ವಿಷಯ ತಿಳಿಯುತ್ತಿದ್ದಂತೆ ಗುರುವಾರ (ಆ.10) ವಿಜಯನಗರ ಜಿಲ್ಲಾಧಿಕಾರಿ ದಿವಾಕರ್, ಸಿಇಒ ಸದಾಶಿವ ಪ್ರಭು, ಡಿಎಚ್ಓ ಡಾ. ಸಲೀಂ ಸೇರಿ ಎಸಿ ಅಕ್ರಂಪಾಷ, ತಹಶಿಲ್ದಾರ್ ವಿಶ್ವಜೀತ್ ಮೆಹತಾ, ನಗರಸಭೆ ಆಯುಕ್ತ ಮನೋಹರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Viral Video : ತನ್ನ ಪ್ರಯಾಣಿಕರಿಗೆಂದು ವಿಶೇಷ ಆಟಗಳನ್ನು ಪರಿಚಯಿಸಿದ ಉಬರ್ ಡ್ರೈವರ್!
ಮೊದಲು 28 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಇದೀಗ 34ಕ್ಕೆ ಏರಿಕೆ ಆಗಿದೆ. ಆರು ಮಕ್ಕಳು ಬಹಳ ಗಾಬರಿಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರು ಆರಾಮಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ವಿಜಯನಗರ ಜಿಲ್ಲಾಧಿಕಾರಿ ದಿವಾಕರ್ ಪ್ರತಿಕ್ರಿಯಿಸಿದ್ದಾರೆ. ಹೊಸಪೇಟೆಯ ಎಸ್‌ಟಿ ಹಾಸ್ಟೆಲ್‌ನಲ್ಲಿ 148 ಮಕ್ಕಳಿದ್ದಾರೆ. ಇದರಲ್ಲಿ 17 ವಿದ್ಯಾರ್ಥಿಗಳು ವೆಜ್ ಊಟ ಮಾಡಿದ್ದರೆ, 131 ವಿದ್ಯಾರ್ಥಿಗಳು ಚಿಕನ್ ಊಟ ಮಾಡಿದ್ದರು.
ಚಿಕನ್ ಊಟ ಮಾಡಿದ ಬಳಿಕ ರಾತ್ರಿ 2 ಗಂಟೆಗೆ ಕೆಲವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಜತೆಗೆ ಜ್ವರ, ವಾಂತಿ-ಭೇದಿ ಶುರು ಆಗಿದೆ. ಕೂಡಲೇ ಹಾಸ್ಟೆಲ್ ವಾರ್ಡನ್ ವಿದ್ಯಾರ್ಥಿಗಳನ್ನು ಮಾತಾಡಿಸಿದ್ದಾರೆ. ನೀರಿನಿಂದ ಅಥವಾ ಚಿಕನ್‌ನಿಂದ ಈ ರೀತಿ ಆಯಿತಾ ಎಂದು ಮಾಹಿತಿ ಕಲೆಹಾಕಲಾಗುತ್ತಿದೆ. ಸದ್ಯ ವಿದ್ಯಾರ್ಥಿಗಳ ರಕ್ತ ಪರೀಕ್ಷೆ ಮಾಡಿಸಲು ಸೂಚಿಸಲಾಗಿದೆ. ಚಿಕನ್ ಕೂಡಾ ಟೆಸ್ಟ್ ಮಾಡಿಸಲು ಹೇಳಿದ್ದೇನೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ದಿವಾಕರ್ ತಿಳಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ