ತುಮಕೂರು: ಪ್ರತ್ಯೇಕ ಕಡೆಗಳಲ್ಲಿ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಬಿಸಿಯೂಟ ಸೇವಿಸಿದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಬ್ಬರು (Food Poisoning) ಅಸ್ವಸ್ಥಗೊಂಡಿದ್ದಾರೆ. ತುಮಕೂರಿನ ಕುಣಿಗಲ್ ತಾಲೂಕಿನ ಸೀನಪ್ಪನಹಳ್ಳಿಯಲ್ಲಿ ಘಟನೆ ನಡೆದಿದೆ. ಅಂಬಾಭವಾನಿ ಅನುದಾನಿತ ಶಾಲೆಯ ಹೈಸ್ಕೂಲ್ ವಿದ್ಯಾರ್ಥಿಗಳು ನಿನ್ನೆ ಬುಧವಾರ ಮಧ್ಯಾಹ್ನ ಮೊಸರನ್ನ ಸೇವಿಸಿದ್ದರು.
ಶಾಲೆ ಮುಗಿಸಿ ಮನೆಗೆ ಹೋದಾಗ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಎಲ್ಲರಿಗೂ ವಾಂತಿ ಭೇದಿಯಿಂದಾಗಿ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅಸ್ವಸ್ಥಗೊಂಡವರನ್ನು ಇಪ್ಪಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ.
12 ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆಗೆ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕುಣಿಗಲ್ ಟಿಹೆಚ್ಓ ಡಾ.ಮರಿಯಪ್ಪ ಹಾಗೂ ಬಿಇಒ ಬೋರೆಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ 13 ವಿದ್ಯಾರ್ಥಿಗಳಿಗೆ ಕುಣಿಗಲ್ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಇದನ್ನೂ ಓದಿ: Viral fever : ಊರೋರಿಗೆಲ್ಲ ಮೈಕೈ ನೋವು; ದೇವಸ್ಥಾನವೇ ಈಗ ಆಸ್ಪತ್ರೆ!
ಮಂಗಳೂರಲ್ಲೂ ಹೊಟ್ಟೆ ನೋವಿನಿಂದ ನರಳಾಡಿದ ವಿದ್ಯಾರ್ಥಿಗಳು
ಮಂಗಳೂರು ಹೊರವಲಯದ ವಲಚ್ಚಿಲ್ ಬಳಿಯ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಕಾಲೇಜಿನ ಹಾಸ್ಟೆಲ್‌ನಲ್ಲಿ ರಾತ್ರಿ ಊಟ ಮಾಡಿದ ಬಳಿಕ ನೂರಾರು ವಿದ್ಯಾರ್ಥಿಗಳಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಹೊಟ್ಟೆ ನೋವಿನಿಂದ ನರಳಾಡಿದ ಕಾರಣ ಸ್ಥಳೀಯ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.
ಮಂಗಳೂರು ಮತ್ತು ತುಂಬೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಊಟದಲ್ಲಿ ಹುಳ ಬಿದ್ದು ಫುಡ್ ಪಾಯ್ಸನ್ ಆಗಿರುವ ಶಂಕೆ ವ್ಯಕ್ತವಾಗಿದೆ. ಕಾಲೇಜಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ