Site icon Vistara News

Kidney Transplant: 30 ವರ್ಷದ ವ್ಯಕ್ತಿಗೆ, 13 ತಿಂಗಳ ಮೃತ ಮಗುವಿನ ಮೂತ್ರ ಪಿಂಡಗಳ ಯಶಸ್ವಿ ಕಸಿ!

Man who underwent a kidney transplant with doctors at Fortis Hospital

#image_title

ಬೆಂಗಳೂರು: ನಗರದ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಕೇವಲ 13 ತಿಂಗಳ ಮಗುವಿನ ಎರಡೂ ಮೂತ್ರಪಿಂಡಗಳನ್ನು 30 ವರ್ಷದ ವ್ಯಕ್ತಿಗೆ ಯಶಸ್ವಿಯಾಗಿ “ರೋಬೋಟಿಕ್‌ ಎನ್‌-ಬ್ಲಾಕ್‌” ವಿಧಾನದ ಮೂಲಕ ಕಸಿ ಮಾಡಲಾಗಿದೆ. ಈ ಶಸ್ತ್ರ ಚಿಕಿತ್ಸೆ (Kidney Transplant) ವಿಶ್ವದಲ್ಲಿಯೇ ಅತಿ ಅಪರೂಪದ ಪ್ರಕರಣವಾಗಿದೆ.

ಫೋರ್ಟಿಸ್‌ ಆಸ್ಪತ್ರೆಯ ಮೂತ್ರಶಾಸ್ತ್ರ, ಯುರೋ-ಆಂಕೊಲಾಜಿ ಮತ್ತು ರೋಬೋಟಿಕ್ ಸರ್ಜರಿ ಹಿರಿಯ ನಿರ್ದೇಶಕ ಮೋಹನ್ ಕೇಶವಮೂರ್ತಿ, ಡಾ. ಶ್ರೀಹರ್ಷ ಹರಿನಾಥ್‌ ಅವರ ತಂಡವು ಈ ಅಪರೂಪದ ಸಂಕೀರ್ಣ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.

ಈ ಕುರಿತು ಮಾತನಾಡಿದ ಡಾ. ಕೇಶವಮೂರ್ತಿ, 30 ವರ್ಷದ ವ್ಯಕ್ತಿಯು ದೀರ್ಘಕಾಲದಿಂದ ಮೂತ್ರಪಿಂಡದ ವೈಫಲ್ಯಕ್ಕೆ ಒಳಗಾಗಿ ಹಿಮೋಡಯಾಲಿಸಿಸ್‌ ಮಾಡಿಕೊಳ್ಳುತ್ತಿದ್ದರು. ಇವರಿಗೆ ಕಿಡ್ನಿ ಕಸಿ ಮಾಡುವುದು ಅನಿವಾರ್ಯವಾಗಿತ್ತು. ಈ ಮಧ್ಯೆ, 13 ತಿಂಗಳ ಮಗುವೊಂದು ಉಸಿರುಗಟ್ಟಿ ಮೃತಪಟ್ಟಿದ್ದರಿಂದ ಅವರ ಪೋಷಕರ ಒಪ್ಪಿಗೆ ಮೇರೆಗೆ ಆ ಸಣ್ಣ ಮಗುವಿನ ಕಿಡ್ನಿಯನ್ನು ದಾನವಾಗಿ ಪಡೆಯಲಾಯಿತು. ಆ ಮಗು ಕೇವಲ 7.3 ಕೆ.ಜಿ ಹೊಂದಿತ್ತು. 30 ವರ್ಷದ ವ್ಯಕ್ತಿಯೂ 50 ಕೆ.ಜಿ ತೂಕವಿದ್ದರು. ಅವರಿಗೆ ಮಗುವಿನ ಕಿಡ್ನಿ ಕಸಿ ಮಾಡುವುದು ಸವಾಲಿನ ಕೆಲಸವೇ ಸರಿ. ಆದರೆ, ಇದನ್ನು ಸವಾಲಾಗಿ ಸ್ವೀಕರಿಸಿ ರೋಬೋಟಿಕ್ ಎನ್-ಬ್ಲಾಕ್ ಮೂಲಕ ಕಿಡ್ನಿಯನ್ನು ಕಸಿ ಮಾಡಲಾಯಿತು ಎಂದು ತಿಳಿಸಿದರು.

ಇದನ್ನೂ ಓದಿ | Yoga Day 2023: ಸೂರ್ಯ ನಮಸ್ಕಾರ… ಎಷ್ಟೊಂದು ಸಮಸ್ಯೆಗಳಿಗೆ ಪರಿಹಾರ!

ರೋಬೋಟಿಕ್‌ ಎನ್‌-ಬ್ಲಾಕ್‌ ಎಂಬ ನವೀನ ತಂತ್ರವು ಕಸಿ ಮಾಡಿದ ಮೂತ್ರಪಿಂಡಗಳನ್ನು ಸ್ವೀಕರಿಸುವವರ ದೇಹದ ತೂಕಕ್ಕೆ ಅನುಗುಣವಾಗಿ ಗಾತ್ರವನ್ನು ಹೆಚ್ಚಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಶಸ್ತ್ರಚಿಕಿತ್ಸೆಯು ಸುಮಾರು ನಾಲ್ಕು ಗಂಟೆಗಳವರೆಗೆ ಸುದೀರ್ಘವಾಗಿ ಸಾಗಿತು. ಈ ಸಂಕೀರ್ಣ ಶಸ್ತ್ರಚಿಕಿತ್ಸೆಯ ನಂತರ ರೋಗಿಯನ್ನು ತೀವ್ರ ನಿಗಾಘಟಕದಲ್ಲಿ ಇರಿಸಿ ಆರೈಕೆ ಮಾಡಲಾಯಿತು. 12 ದಿನಗಳ ಬಳಿಕ ಅವರನ್ನು ಡಿಸ್ಚಾರ್ಜ್‌ ಮಾಡಲಾಯಿತು ಎಂದು ವಿವರಣೆ ನೀಡಿದರು.

ಇದನ್ನೂ ಓದಿ | Yoga For Senior Citizens: ಹಿರಿಯರೂ ಯೋಗ ಮಾಡಬಹುದೇ? ಯಾವ ಆಸನಗಳು ಸೂಕ್ತ?

ಫೋರ್ಟಿಸ್ ಆಸ್ಪತ್ರೆಯ ಬಿಸಿನೆಸ್ ಹೆಡ್ ಅಕ್ಷಯ್ ಒಲೇಟಿ ಮಾತನಾಡಿ, ಮೂತ್ರಪಿಂಡ ಕಸಿಯಲ್ಲಿ ರೋಬೋಟಿಕ್‌ ತಂತ್ರಜ್ಞಾನ ಅಳವಡಿಕೆಯಿಂದ ಯಾವುದೇ ಕಷ್ಟಕರ ಶಸ್ತ್ರಚಿಕಿತ್ಸೆಯಾದರೂ ಸುಲಭವಾಗಿ ನಿಭಾಯಿಸಲು ಸಾಧ್ಯವಾಗುತ್ತಿದೆ. ಅದರಲ್ಲೂ ಸಣ್ಣ ಮಗುವಿನ ಕಿಡ್ನಿಯನ್ನು ದೊಡ್ಡವರಿಗೆ ಅಳವಡಿಸುವುದು ಒಂದು ಸವಾಲೆ ಸರಿ. ಈ ವಿನೂತನ ಪ್ರಯತ್ನವನ್ನು ನಮ್ಮ ವೈದ್ಯರ ತಂಡ, ನೂತನ ಟೆಕ್ನಾಲಜಿ ಬಳಸಿಕೊಂಡು ಯಶಸ್ವಿಯಾಗಿ ನಿಭಾಯಿಸಿದೆ. ಈ ಮೂಲಕ ಇದು ವಿಶ್ವದಲ್ಲಿಯೇ ಅಪರೂಪದ ಪ್ರಕರಣ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಎಂದು ಹೇಳಿದರು.

Exit mobile version