Site icon Vistara News

Forest Fire: ಚಂದ್ರಗುತ್ತಿಯ ಶ್ರೀ ರೇಣುಕಾಂಬ ಗುಡ್ಡದಲ್ಲಿ ಕಾಡ್ಗಿಚ್ಚು; ವನ್ಯ ಸಂಪತ್ತು, ಪ್ರಾಣಿ ಸಂಕುಲಕ್ಕೆ ಸಂಚಕಾರ

Forest Fire ri Renukamba Hill Chandragutti soraba

#image_title

ಸೊರಬ: ತಾಲೂಕಿನ ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ಧ ಚಂದ್ರಗುತ್ತಿಯ (Chandragutti) ಶ್ರೀ ರೇಣುಕಾಂಬ ಗುಡ್ಡದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಕಾಣಿಸಿಕೊಂಡಿರುವ ಕಾಡ್ಗಿಚ್ಚು ಅಮೂಲ್ಯ ವನ್ಯ ಸಂಪತ್ತು ಮತ್ತು ಪ್ರಾಣಿ ಸಂಕುಲಕ್ಕೆ ಸಂಚಕಾರ ಒಡ್ಡುತ್ತಿದೆ.

ಚಂದ್ರಗುತ್ತಿ ಹೋಬಳಿಯ ಬಹುತೇಕ ಪ್ರದೇಶದಗಳಲ್ಲಿ ಬೆಟ್ಟ ಗುಡ್ಡಗಳಲ್ಲಿ ಅಪಾರವಾದ ಜೀವ ಸಂಕುಲ ಮತ್ತು ಔಷಧೀಯ ಗುಣ ಇರುವ ಸಸ್ಯಗಳಿವೆ. ವಿಶೇಷವಾಗಿ ಮಳೆ ತರುವ ವಿಶೇಷ ಕರಿಕಲ್ಲು ಕಾನು ಇದೆ. ಇದೀಗ ಕಾಣಿಸಿಕೊಂಡ ಕಾಡ್ಗಿಚ್ಚಿನಿಂದ ಗೂಡು ಕಟ್ಟಿಕೊಂಡ ಹಕ್ಕಿ ಪಕ್ಷಿಗಳು ಬೆಂಕಿಗೆ ಆಹುತಿಯಾಗಿವೆ ಎನ್ನಲಾಗುತ್ತಿದೆ.
ಕಳೆದ ಮೂರ‍್ನಾಲ್ಕು ದಿನಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೆ ಬೇಜವಾಬ್ದಾರಿ ತೋರಿದರು. ನಂತರ ಕಾಡ್ಗಿಚ್ಚು ಹೆಚ್ಚಾಯಿತು. ಇದರಿಂದ ಅಪಾರ ಪ್ರಮಾಣದಲ್ಲಿ ಔಷಧೀಯ ಸಸ್ಯಗಳು ಮತ್ತು ಪ್ರಾಣಿ ಪಕ್ಷಿಗಳು ಬೆಂಕಿಗೆ ಆಹುತಿಯಾಗುವ ಸನ್ನಿವೇಶ ನಿರ್ಮಾಣವಾಯಿತು. ಇದರಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ ಎನ್ನುವ ಆರೋಪ ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳದ್ದಾಗಿದೆ.

ಇದನ್ನೂ ಓದಿ: Ram Mandir: ರಾಮ ಮಂದಿರ ನಿರ್ಮಾಣಕ್ಕೆ ಸ್ಥಳ ಗುರುತಿಸಿಲ್ಲ; ಇದು ಚುನಾವಣಾ ಗಿಮಿಕ್ ಅಷ್ಟೇ: ಎಚ್‌.ಡಿ. ಕುಮಾರಸ್ವಾಮಿ

ಬೆಂಕಿಯ ಕೆನ್ನಾಲಿಗೆ ಇನ್ನಷ್ಟು ಚಾಚಿದರೆ ಗುಡ್ಡದ ತಗ್ಗು ಪ್ರದೇಶದ ಚಂದ್ರಗುತ್ತಿ, ಬರದವಳ್ಳಿ, ಕಮಲಾಪುರ, ಬಸ್ತಿಕೊಪ್ಪ, ಮಾವಿನಬಳ್ಳಿ ಕೊಪ್ಪ ಸೇರಿದಂತೆ ಇತರೆ ಗ್ರಾಮಗಳಿಗೂ ಹಬ್ಬುವ ಸಂಭವವಿದೆ. ಬೆಂಕಿ ಹೀಗೆಯೇ ಮುಂದುವರಿದರೆ ರೈತರ ನೂರಾರು ಎಕರೆ ಪ್ರದೇಶದಲ್ಲಿರುವ ಬೆಳೆಗಳು ನಾಶವಾಗುವ ಸಾಧ್ಯತೆ ಇದೆ. “ಬೆಂಕಿ ಬಿದ್ದ ಮೇಲೆ ಬಾವಿ ತೋಡಿದರು” ಎನ್ನುವ ಗಾಧೆಯು ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಅನ್ವಯವಾಗುತ್ತದೆ. ಕಳೆದ ಮೂರ‍್ನಾಲ್ಕು ದಿನಗಳ ಹಿಂದೆಯೇ ರಕ್ಷಣಾ ಕ್ರಮ ಕೈಗೊಳ್ಳದೆ, ಇದೀಗ ಅರಣ್ಯಾಧಿಕಾರಿಗಳು ಕೆಲವು ಸ್ಥಳೀಯರೊಂದಿಗೆ ಅರಣ್ಯ ರಕ್ಷಣೆಗೆ ತೆರಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸಿಎಫ್ ಪ್ರವೀಣ್ ಕುಮಾರ್ ಬಸ್ರೂರ್, “ಪ್ರತಿ ವರ್ಷ ಫೆಬ್ರವರಿಯ ಮೂಡುಗಾಳಿಗೆ ಬೆಟ್ಟದಲ್ಲಿ ಕಾಡ್ಗಿಚ್ಚು ಕಾಣಿಸುತ್ತದೆ. ಬೆಟ್ಟದ ಪ್ರದೇಶ ಬಯಲಿನಿಂದ ಕೂಡಿದ್ದು, ಒಣಗಿದ ತರಗೆಲೆಗಳಿಂದ ಬೆಂಕಿ ಕಾಣಿಸಿಕೊಂಡಿದೆ. ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿದ್ದು, ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ತಿಳಿಸಿದರು.

ಇದನ್ನೂ ಓದಿ: PM Modi: ಮೋದಿ ಜತೆಯೇ ಕೆಲಸ ಮಾಡುವೆ; ನಾನು ಮುಖ್ಯಮಂತ್ರಿಯಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ: ಪ್ರಲ್ಹಾದ್‌ ಜೋಶಿ

“ಚಂದ್ರಗುತ್ತಿಯ ಗುಡ್ಡದಲ್ಲಿ ಕಳೆದ ಮೂರ‍್ನಾಲ್ಕು ದಿನಗಳ ಹಿಂದೆಯೇ ಬೆಂಕಿ ಕಾಣಿಸಿಕೊಂಡಿತು. ಈ ಬಗ್ಗೆ ಸ್ಥಳೀಯ ಅರಣ್ಯಾಧಿಕಾರಿಗಳು ಆರಂಭದಲ್ಲಿಯೇ ಎಚ್ಚೆತ್ತುಕೊಂಡಿದ್ದರೆ, ವನ್ಯ ಸಂಪತ್ತು ಬೆಂಕಿಗೆ ಆಹುತಿಯಾಗುತ್ತಿರಲಿಲ್ಲ. ಅರಣ್ಯ ರಕ್ಷಣೆ ಮತ್ತು ಕಾಡ್ಗಿಚ್ಚಿನಿಂದ ಸಂಭವಿಸುವ ಅನಾಹುತಗಳ ತಡೆಗೆ ಅರಣ್ಯ ಅಧಿಕಾರಿಗಳು ಹೆಚ್ಚಿನ ಗಮನ ನೀಡಬೇಕು” ಎಂದು ಚಂದ್ರಗುತ್ತಿ ಹೋಬಳಿಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಹೆಗಡೆ ಹೇಳಿದರು.

ಇದನ್ನೂ ಓದಿ: ‌Political Movies: ಕಾಶ್ಮೀರ್‌ ಫೈಲ್ಸ್ ಮಾದರಿಯಲ್ಲಿ ಕೋವಿಡ್‌ ಫೈಲ್ಸ್ ಚಿತ್ರ ನಿರ್ಮಾಣಕ್ಕೆ ಮುಂದಾದರಾ ಡಿ.ಕೆ. ಶಿವಕುಮಾರ್?

Exit mobile version