ಮೊಳಕಾಲ್ಮುರು: ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನಲ್ಲಿ ಹಾವು ಕಚ್ಚಿ ಕರ್ತವ್ಯ ನಿರತ ಅರಣ್ಯ ಅಧಿಕಾರಿ ಮೃತಪಟ್ಟಿದ್ದಾರೆ. ತಾಲೂಕು ವಲಯ ಅರಣ್ಯ ಅಧಿಕಾರಿ ಟಿ.ಆರ್. ಪ್ರಕಾಶ್ (34) ಮೃತರು. ಬುಧವಾರ ರಾತ್ರಿ ಅರಣ್ಯದಲ್ಲಿ ಕರ್ತವ್ಯ ನಿರ್ವಹಿಸುವಾಗ ಹಾವು ಕಚ್ಚಿದ್ದು, ಯಾವುದೋ ಹುಳ ಕಚ್ಚಿರಬಹುದು ಎಂದು ತಿಳಿದು ಸುಮ್ಮನಾಗಿದ್ದಾರೆ. ಆದರೆ, ಬಳಿಕ ಆರೋಗ್ಯ ಬಿಗಡಾಯಿಸಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಮೃತಪಟ್ಟಿದ್ದಾರೆ.
ಮೂಲತಃ ಚನ್ನಗಿರಿ ತಾಲೂಕಿನ ರೆಡ್ಡಿಹಳ್ಳಿ ಗ್ರಾಮದವರಾಗಿರುವ ಪ್ರಕಾಶ್ ಅವರು ಪತ್ನಿ ಹಾಗೂ ಮೂರು ವರ್ಷದ ಮಗಳನ್ನು ಅಗಲಿದ್ದಾರೆ. 2014ರಲ್ಲಿ ಪ್ರಕಾಶ್ ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿ ನೇಮಕರಾಗಿದ್ದು, ಜಗಳೂರು ಹಾಗೂ ಹರಪ್ಪನಹಳ್ಳಿಯಲ್ಲಿ ಕರ್ತವ್ಯ ನಿರ್ವಹಿಸಿ, 10 ತಿಂಗಳ ಹಿಂದಷ್ಟೇ ಮೊಳಕಾಲ್ಮುರು ತಾಲೂಕಿಗೆ ವರ್ಗಾವಣೆಯಾಗಿದ್ದರು.
ಮೃತ ಪ್ರಕಾಶ್ ತನ್ನ ಸಿಬ್ಬಂದಿಯ ಜತೆ ಬುಧವಾರ ಸಾಯಂಕಾಲ ಪಟ್ಟಣದ ವ್ಯಾಪ್ತಿಯ ಹಿರೇಅಡವಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಪರಿವೀಕ್ಷಣೆ ನಡೆಸುತ್ತಿದ್ದಾಗ ಕಾಲಿನ ಕಿರುಬೆರಳಿಗೆ ಹಾವು ಕಚ್ಚಿದೆ. ರಾತ್ರಿ ಮನೆಗೆ ತೆರಳಿದ ಅವರು, ಯಾವುದೋ ಹುಳ ಕಚ್ಚಿದೆ ಎಂದು ಪತ್ನಿಗೆ ತಿಳಿಸಿದ್ದಾರೆ. ಸ್ವಲ್ಪ ರೆಸ್ಟ್ ಮಾಡಿದರೆ ಸರಿಹೋಗುತ್ತದೆ ಎಂದು ಹೋಗಿ ಮಲಗಿದ್ದಾರೆ.
ಇದನ್ನೂ ಓದಿ: snake catcher: ಹಾವು ಕಚ್ಚಿ ಮೃತಪಟ್ಟ ಸ್ನೇಕ್ ನರೇಶ್ ಮನೆ ಹಾವುಗಳ ಗೂಡು; ಅಲ್ಲಿ, ಇಲ್ಲಿ, ಎಲ್ಲೆಲ್ಲೂ ನಾಗರಹಾವು!
ಆದರೆ, ರಾತ್ರಿ 10 ಗಂಟೆ ಸುಮಾರಿಗೆ ಪ್ರಕಾಶ್ ಆರೋಗ್ಯ ಬಿಗಡಾಯಿಸಿದೆ. ಇದರಿಂದ ಗಲಿಬಿಲಿಗೊಂಡ ಅಧಿಕಾರಿಯ ಪತ್ನಿ, ಪತಿಯನ್ನು ಪಟ್ಟಣದ ಆಸ್ಪತ್ರೆಗೆ ಕರೆದೊಯ್ಯುವಾಗಲೇ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ. ಈ ಕುರಿತು ಅಧಿಕಾರಿಯ ಪತ್ನಿ ರಮಿತಾ ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.