Site icon Vistara News

CM Nimbannavara : ಬಿಜೆಪಿ ಟಿಕೆಟ್‌ ತಪ್ಪಿದ್ದ ಮಾಜಿ ಶಾಸಕ ಸಿ.ಎಂ. ನಿಂಬಣ್ಣವರ್ ನಿಧನ

MLA CM Nimbannavara passes away

ಹುಬ್ಬಳ್ಳಿ: ಕಲಘಟಗಿ ಮಾಜಿ ಶಾಸಕ ಸಿ.ಎಂ. ನಿಂಬಣ್ಣವರ್ (76) (CM Nimbannavara) ತೀವ್ರ ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಧಾರವಾಡ ಜಿಲ್ಲೆ ಕಲಘಟಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಇವರು ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಇವರು ಗೆಲುವು ಸಾಧಿಸಿದ್ದರು. ಆದರೆ, ಈ ಬಾರಿ ಅವರಿಗೆ ಬಿಜೆಪಿಯಿಂದ ಟಿಕೆಟ್‌ ನಿರಾಕರಿಸಲಾಗಿತ್ತು. ಇದು ಇವರಿಗೆ ತೀವ್ರ ಬೇಸರವನ್ನುಂಟು ಮಾಡಿತ್ತು.

ಇದನ್ನೂ ಓದಿ: Pen Drive Issue:‌ ಕಸ ಗುಡಿಸೋಣ ನಡೀರಿ: HDK ಪೆನ್‌ಡ್ರೈವ್‌ ಪ್ರಶ್ನೆಗೆ ಶಿವಕುಮಾರ್‌ ಉತ್ತರ

ಇಂಗ್ಲಿಷ್‌ ವಿಷಯದಲ್ಲಿ ಬಿಎ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಎಂಎ ಹಾಗೂ ಎಲ್‌ಎಲ್‌ಬಿ ಪದವಿಗಳನ್ನು ಇವರು ಪಡೆದಿದ್ದಾರೆ. ಅಲ್ಲದೆ, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಇಡಿ ಪದವಿಯನ್ನೂ ಸಿ.ಎಮ್‌. ನಿಂಬಣ್ಣವರ್ ಪಡೆದಿದ್ದಾರೆ.

ಇವರು ಶಿಕ್ಷಕರಾಗಿಯೂ ಸೇವೆ ಸಲ್ಲಿಸದ್ದು, ಕಲಘಟಗಿ ತಾಲೂಕಿನ ಮಿಶ್ರೀಕೋಟಿಯಲ್ಲಿರುವ ಸಹಕಾರಿ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯಲ್ಲಿ 1970ರಲ್ಲಿ ಇಂಗ್ಲಿಷ್‌ ಶಿಕ್ಷಕರಾಗಿದ್ದರು. ಬಳಿಕ ಇಲ್ಲಿಯೇ ಮುಖ್ಯೋಪಾಧ್ಯಾಯರಾಗಿ ಪದೋನ್ನತಿ ಹೊಂದಿದ್ದರು. ಮುಂದೆ ಇದೇ ಸಂಸ್ಥೆಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾಗಿಯೂ ಕಾರ್ಯನಿರ್ವಹಿಸಿದ ಖ್ಯಾತಿಯನ್ನು ಹೊಂದಿದ್ದಾರೆ. ಇವರಿಗೆ ಶಿಕ್ಷಣ ಇಲಾಖೆಯಿಂದ ಅತ್ಯತ್ತಮ ಶಿಕ್ಷಕ ಪ್ರಶಸ್ತಿ ಸಹ ಲಭಿಸಿತ್ತು. 10 ವರ್ಷಗಳ ಸೇವಾವಧಿ ಬಾಕಿ ಇರುವಾಗಲೇ (1994 ಸೆಪ್ಟೆಂಬರ್‌ 30ರಂದು) ಸ್ವಯಂ ಸೇವಾ ನಿವೃತ್ತಿಯನ್ನು ತೆಗೆದುಕೊಂಡಿದ್ದರು.

ವಕೀಲರಾಗಿಯೂ ಸೇವೆ

ನಿವೃತ್ತಿ ತರುವಾಯ ವಕೀಲ ವೃತ್ತಿಯನ್ನು ಆರಂಭಿಸಿದ್ದ ಸಿ.ಎಂ. ನಿಂಬಣ್ಣವರ್, ಕಲಘಟಗಿ ತಾಲೂಕಿನ ಗ್ರಾಮೀಣ ಭಾಗದಲ್ಲಿನ ಅನೇಕ ಮೊಕದ್ದಮೆಗಳನ್ನು ಕೈಗೆತ್ತಿಕೊಂಡು ರಾಜಿ ಮೂಲಕ ಬಗೆಹರಿಸಿದ್ದರು. ಇದು ಅವರಿಗೆ ಈ ಭಾಗದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಜತೆಗೆ ವಕೀಲರ ಸಂಘದ ಅಧ್ಯಕ್ಷರಾಗಿ ಎರಡು ಅವಧಿಗೆ ಕಾರ್ಯ ನಿರ್ವಹಿಸಿದ್ದರು.

ರಾಜಕೀಯ ಜೀವನ

ಸಿ.ಎಂ. ನಿಂಬಣ್ಣವರ್ 1995ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. 27 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದ ಅವರು, ಕಲಘಟಗಿ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಪಕ್ಷ ಸಂಘಟನೆಯನ್ನು ಮಾಡಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಇವರು ಗೆಲುವು ಸಾಧಿಸಿದ್ದರು. ಆದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಇವರು ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಹಾಲಿ ಶಾಸಕರಾಗಿದ್ದರೂ ಈ ಬಾರಿ ಬಿಜೆಪಿ ಅವರಿಗೆ ಟಿಕೆಟ್‌ ನಿರಾಕರಿಸಿತ್ತು. ಕೆಲವೇ ತಿಂಗಳ ಹಿಂದೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ನಾಗರಾಜ ಛಬ್ಬಿಗೆ ಬಿಜೆಪಿ ಟಿಕೆಟ್‌ ಕೊಟ್ಟಿತ್ತು. ಆದರೆ, ಅವರು ಈ ಬಾರಿ ಸೋಲು ಕಂಡಿದ್ದರು. ತಮಗೆ ಟಿಕೆಟ್‌ ಕೈತಪ್ಪಿದ್ದರ ಬಗ್ಗೆ ಸಿ.ಎಂ. ನಿಂಬಣ್ಣವರ್ ಹಲವಾರು ಬಾರಿ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Jain muni Murder : ಜೈನಮುನಿ ಕಾಮಕುಮಾರ ನಂದಿ ಮಹಾರಾಜ್‌ ಪಂಚಭೂತಗಳಲ್ಲಿ ಲೀನ

ಇನ್ನು ಇವರು ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಸಹಕಾರಿ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

Exit mobile version