ಶಿವಮೊಗ್ಗ: ಶಾಸಕ ಜಮೀರ್ ಅಹ್ಮದ್ ಮನೆಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿಯ ಬಗ್ಗೆ ಟೀಕಿಸಿರುವ ಕಾಂಗ್ರೆಸ್ ನಾಯಕರು ಎಸಿಬಿಯ ಕ್ಷಮೆಯಾಚಿಸಬೇಕು. ಎಸಿಬಿ ದಾಳಿ ಮಾಡಿದ್ದ ಕಡೆಯೆಲ್ಲ ಬೇನಾಮಿ ಆಸ್ತಿ ಸಿಕ್ಕಿದೆ. ಎಸಿಬಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳು ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸಿಬಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ, ದಾಳಿಯಾಗಿದ್ದರಿಂದಲೇ ಜಮೀರ್ ಮನೆಯಲ್ಲಿ ಅಕ್ರಮ ಆಸ್ತಿ ಇರುವುದು ಪತ್ತೆಯಾಗಿದೆ. ಇಷ್ಟೊಂದು ಅಕ್ರಮ ಆಸ್ತಿ ಇತ್ತೆಂದು ಗೊತ್ತಿರಲಿಲ್ಲ ಎಂದು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಹೇಳಲಿ, ಆಗ ಮಾತ್ರ ಅವರು ಪ್ರಾಮಾಣಿಕ ರಾಜಕಾರಣಿಗಳು ಎಂದು ಜನ ಒಪ್ಪುತ್ತಾರೆ. ಇಲ್ಲವೆಂದರೆ ಈ ಬಾರಿ ವಿರೋಧ ಪಕ್ಷದ ಸ್ಥಾನವೂ ಸಿಗಲ್ಲ ಎಂದು ಕಿಡಿಕಾರಿದರು.
ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಎಡಿಜಿಪಿ ಅಮೃತ್ ಪಾಲ್ ಹಾಗೂ ಭ್ರಷ್ಟಾಚಾರ ಪ್ರಕರಣದಲ್ಲಿ ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾನೂನು ಬದ್ಧವಾಗಿ ಸಂವಿಧಾನದಲ್ಲಿ ಏನೇನು ಅವಕಾಶವಿದೆ, ಅದನ್ನೆಲ್ಲ ನಮ್ಮ ಸರ್ಕಾರ ಮಾಡುತ್ತಿದೆ. ಯಾರು ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ತಪ್ಪು ಮಾಡಿದವರನ್ನು ಬಿಜೆಪಿ ಸರ್ಕಾರ ಬಿಡಲ್ಲ. ಉಳಿದ ಭ್ರಷ್ಟ ಅಧಿಕಾರಿಗಳೂ ಇನ್ನು ಮುಂದೆ ಎಚ್ಚರದಿಂದ ಇರಬೇಕು ಎಂದರು.
ಸಿದ್ದರಾಮೋತ್ಸವ ಆಯೋಜನೆ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, ಯಾರಾದರೂ ಹುಟ್ಟುಹಬ್ಬವನ್ನು ಮನೆಯವರು, ಆತ್ಮೀಯಯೊಂದಿಗೆ ಆಚರಿಸಿಕೊಳ್ಳುತ್ತಾರೆ. ಇವರ ಕಾಂಗ್ರೆಸ್ ಮನೆಯೇ ಛಿದ್ರವಾಗಿದೆ. ಸಿದ್ದರಾಮೋತ್ಸವಕ್ಕೂ ಕಾಂಗ್ರೆಸ್‌ಗೂ ಸಂಬಂಧ ಇಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳುತ್ತಾರೆ. ಇತ್ತ ಸಿದ್ದರಾಮಯ್ಯ ಜನರು ಮಾಡುತ್ತಿದ್ದಾರೆ ಎಂದು ಹೇಳುತ್ತಾ ಹಿಂದಿನಿಂದ ತಾವೇ ಎಲ್ಲವನ್ನೂ ಮಾಡಿಸುತ್ತಿದ್ದಾರೆ. ತಾನು ಸಿಎಂ ಆಕಾಂಕ್ಷಿಯಲ್ಲ ಎಂದು ಒಂದೆಡೆ ಹೇಳುವ ಸಿದ್ದರಾಮಯ್ಯ, ತಮ್ಮ ಬೆಂಬಲಿಗ ನಾಯಕರು, ಅಭಿಮಾನಿಗಳನ್ನು ಚಿವುಟಿ ಹೇಳಿಕೆ ಕೊಡಿಸುತ್ತಾರೆ. ಮುಂದಿನ ಮುಖ್ಯಮಂತ್ರಿ ಡಿಕೆಶಿ, ಸಿದ್ದರಾಮಯ್ಯ ಅಂತ ಅವರವರೇ ಘೋಷಣೆ ಕೂಗುತ್ತಿದ್ದಾರೆ ಎಂದು ಕುಟುಕಿದರು.
ಇದನ್ನೂ ಓದಿ | ರಾಜ್ಯದ ಮಕ್ಕಳಿಗಿಲ್ಲ ಶೂ ಭಾಗ್ಯ, ಇದೆಂಥಾ ದೌರ್ಭಾಗ್ಯ ಎಂದ ಸಿದ್ದರಾಮಯ್ಯ
ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಹೊಣೆ ಹೊತ್ತು ಸಿಎಂ, ಗೃಹ ಸಚಿವರ ರಾಜಿನಾಮೆಗೆ ಕಾಂಗ್ರೆಸ್ ಒತ್ತಾಯ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಅದೆಷ್ಟೋ ಪ್ರಶ್ನೆಪತ್ರಿಕೆ ಸೋರಿಕೆಯಾಯಿತು. ಆಗ ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡಿದರಾ, ಒಂದಾದರೂ ಪ್ರಕರಣ ತನಿಖೆ ಮಾಡಿ ಅಧಿಕಾರಿಗಳ ಮೇಲೆ ಕ್ರಮಕೈಗೊಂಡರೇ? ತಮ್ಮ ಅಸ್ತಿತ್ವ ತೋರಿಸಲು ಸುಮ್ಮನೆ ಹಾರಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಬಂದಿರುವ ಇಂತಹ ದುಸ್ಥಿತಿ ಬೇರೆ ಯಾವ ಪಕ್ಷಕ್ಕೂ ಬಂದಿಲ್ಲ. ದೀಪ ಆರುವ ಸಂದರ್ಭದಲ್ಲಿ ಭಾರಿ ಕೂಗಾಡುತ್ತಾರೆ ಎಂಬಂತೆ ಕಾಂಗ್ರೆಸ್ ನಾಯಕರು ಕೂಗಾಡುತ್ತಿದ್ದಾರೆ. ದೀಪ ಯಾವಾಗ ಆರಿ ಹೋಗುತ್ತದೆ ಎಂದು ನೋಡುತ್ತೇವೆ ಎಂದು ಹೇಳಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 25ಕ್ಕೂ ಹೆಚ್ಚು ಸ್ಥಾನ ಗಳಿಸುವುದಾಗಿ, ಬಿಜೆಪಿ 2 ಸ್ಥಾನವೂ ಗೆಲ್ಲುವುದಿಲ್ಲ ಎಂದು ಕಾಂಗ್ರೆಸ್ ಆಂತರಿಕ ಸಮೀಕ್ಷೆಯಲ್ಲಿ ಹೇಳಲಾಗಿತ್ತು. ಆದರೆ, ಫಲಿತಾಂಶ ಉಲ್ಟಾ ಆಯಿತು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಕನಸಿನಲ್ಲೂ ಯೋಚಿಸುವುದು ಬೇಡ ಎಂದು ವ್ಯಂಗ್ಯವಾಡಿದರು.
ರಾಜಕೀಯ ಲಾಭಕ್ಕಾಗಿ ಆರೋಪಿಸಬೇಡಿ: ಗೃಹ ಸಚಿವ ಆರಗ ಜ್ಞಾನೇಂದ್ರ
ತುಮಕೂರು: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಚಾರಿತ್ರ್ಯ ಹರಣ ಮಾಡಲು, ರಾಜಕೀಯ ಲಾಭಕ್ಕಾಗಿ ಯಾರದ್ದೋ ಹೆಸರೇಳಿದರೆ ಪ್ರಯೋಜನ ಆಗಲ್ಲ. ಕಾಂಗ್ರೆಸ್‌ನವರು ಸೂಕ್ತ ಸಾಕ್ಷ್ಯ ಒದಗಿಸಿದರೆ ತನಿಖೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಸಚಿವರು, ಪ್ರಭಾವಿ ಮುಖಂಡರು ಭಾಗಿಯಾಗಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ಪಿಎಸ್‌ಐ ಹಗರಣದಲ್ಲಿ ಪ್ರಾಮಾಣಿಕ, ಪಾರದರ್ಶಕ ತನಿಖೆ ನಡೆಯುತ್ತಿದೆ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಬಹಳ ದಿನದಿಂದ ಹೇಳುತ್ತಿದ್ದೇನೆ. ಅವರ ಬಳಿ ಏನಾದರೂ ಸಾಕ್ಷ್ಯವಿದ್ದರೆ ನೀಡಲಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವಾಗದಿದ್ದರೆ ಆಗ ಪ್ರಶ್ನಿಸಲಿ ಎಂದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಪೊಲೀಸ್ ನೇಮಕಾತಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಆದರೆ, ಯಾರನ್ನೂ ಬಂಧಿಸಿರಲಿಲ್ಲ, ಎಡಿಜಿಪಿ ಮಟ್ಟದ ಅಧಿಕಾರಿಗಳೂ ಅಕ್ರಮದಲ್ಲಿ ಭಾಗಿಯಾಗಿದ್ದರು. ಆದರೂ ಯಾವುದೇ ಕ್ರಮವಾಗಿರಲಿಲ್ಲ. ಆದರೆ, ಪಿಎಸ್‌ಐ ನೇಮಕಾತಿ ಅಕ್ರಮದ ತನಿಖೆ ಮಾಡಲು ಸಿಐಡಿಗೆ ನಮ್ಮ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು, ಹಲವು ಆರೋಪಿಗಳನ್ನು ಬಂಧಿಸಿ ತಾಕತ್ತು ಪ್ರದರ್ಶಿಸಿದೆ ಎಂದರು.
ಚಂದ್ರಶೇಖರ ಗುರೂಜಿ ಹತ್ಯೆ ವಿಚಾರ ಪ್ರತಿಕ್ರಿಯಿಸಿ, ಪ್ರಕರಣದ ಆರೋಪಿಗಳನ್ನು ಬಂಧಿಸಿ ಹುಬ್ಬಳ್ಳಿ, ರಾಮದುರ್ಗ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಪೊಲೀಸರು ಜೆಸಿಬಿ ಅಡ್ಡವಿಟ್ಟು ಆರೋಪಿಗಳ ಕಾರನ್ನು ತಡೆದಿದ್ದಾರೆ. ಅವರನ್ನು ಹಿಡಿಯುವುದು ಸ್ವಲ್ಪ ತಡವಾಗಿದ್ದರೂ ಅವರು ಮಹಾರಾಷ್ಟ್ರ ಗಡಿ ದಾಟುತ್ತಿದ್ದರು ಎಂದು ಪೊಲೀಸರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ | ಹಂತಕರಿಗೆ ಹತ್ಯೆಯ ಮೂಲಕವೇ ಪಾಠ ಕಲಿಸಬೇಕು; ಶಿರಚ್ಛೇದ ಘಟನೆಗೆ ಬಿಜೆಪಿ ನಾಯಕ ಈಶ್ವರಪ್ಪ ಆಕ್ರೋಶ