ಉಡುಪಿ: ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಯು.ಆರ್. ಸಭಾಪತಿ (UR Sabhapati) ಅನಾರೋಗ್ಯದಿಂದ ಭಾನುವಾರ ಬೆಳಗ್ಗೆ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಅನುಯಾಯಿಯಾಗಿದ್ದ ಯು.ಆರ್. ಸಭಾಪತಿ ಅವರು, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1994ರಲ್ಲಿ ಕೆಸಿಪಿಯಿಂದ ಶಾಸಕರಾಗಿದ್ದ 1999ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿ ಚುನಾಯಿತರಾಗಿದ್ದರು.
ಇದನ್ನೂ ಓದಿ: Zameer Ahmed Khan: ಜಮೀರ್ ಇಂಗ್ಲಿಷ್ ಪ್ರಮಾಣ; ಕನ್ನಡ ಕಲಿಯದ ಬಗ್ಗೆ ಮುಂದುವರಿದ ಕನ್ನಡಿಗರ ಆಕ್ರೋಶ
1987ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪರಿಷತ್ತಿನ ಉದ್ಯಾವರ ಕ್ಷೇತ್ರದ ಸದಸ್ಯರಾಗಿದ್ದ ಸಭಾಪತಿಯವರು, ಪರಿಷತ್‌ನ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದರು. ಅಲ್ಲದೆ, ಈ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ವಿಭಾಗದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಕರ್ನಾಟಕ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು
1989ರಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದ ಇವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಮನೋರಮಾ ಮಧ್ವರಾಜ್ ವಿರುದ್ಧ ಸ್ಪರ್ಧಿಸಿ ಅಲ್ಪ ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. ಬಳಿಕ 1994ರಲ್ಲಿ ಎಸ್. ಬಂಗಾರಪ್ಪ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಉಡುಪಿಯಿಂದಲೇ ಸ್ಪರ್ಧೆ ಮಾಡಿ ಜಯಭೇರಿ ಬಾರಿಸಿದ್ದರು.
ಬಳಿಕ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, 1999ರಲ್ಲಿ ಆ ಪಕ್ಷದ ಟಿಕೆಟ್ ಪಡೆದು ಸ್ಪರ್ಧೆ ಮಾಡಿ ಪುನಃ ಶಾಸಕರಾಗಿ ಚುನಾಯಿತರಾದರು. ಆದರೆ, 2004ರ ಚುನಾವಣೆಯಲ್ಲಿ ಇವರು ಬಿಜೆಪಿಯ ರಘುಪತಿ ಭಟ್ ವಿರುದ್ಧ ಸೋಲು ಕಂಡರು. ಇವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ.
ಇದನ್ನೂ ಓದಿ: IPL 2023 : ಕೊಹ್ಲಿ ಎಂದು ಕಿಚಾಯಿಸಿದ ಅಭಿಮಾನಿಗಳಿಗೆ ಬಾಯ್ಮುಚ್ಚು ಎಂದು ಸನ್ನೆ ಮಾಡಿದ ನವಿನ್ ಉಲ್ ಹಕ್!
ಕರಾವಳಿ ಭಾಗದ ಪ್ರಭಾವಿ ನಾಯಕ
ಆಸ್ಕರ್ ಫರ್ನಾಂಡಿಸ್ ಅವರ ರಾಜಕೀಯ ಪ್ರವೇಶಕ್ಕೂ ಸಭಾಪತಿ ಪ್ರೇರಣೆಯಾಗಿದ್ದರು. ರಾಷ್ಟ್ರೀಯ ಜನತಾದಳ, ಜಾತ್ಯತೀತ ಜನತಾದಳದೊಂದಿಗೂ ಗುರುತಿಸಿಕೊಂಡಿದ್ದ ಯು.ಆರ್. ಸಭಾಪತಿಯವರು 80-90ರ ದಶಕದಲ್ಲಿ ಕರಾವಳಿ ಭಾಗದ ಪ್ರಭಾವಿ ನಾಯಕರಲ್ಲೊಬ್ಬರಾಗಿದ್ದರು.