ಬೆಂಗಳೂರು: ವಿಕ್ರಮ್ ಪ್ರಕಾಶನ ಹಾಗೂ ಸಮನ್ವಿತ ಪ್ರಕಾಶನದ ವತಿಯಿಂದ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಂಗ್ ಕಮಾಂಡರ್ ಸುದರ್ಶನ್ ಅವರ ಉದಯವಾಯಿತು ವಿಜಯನಗರ, ನಭ ಸ್ಪರ್ಷಂ ದೀಪ್ತಂ, ಯೋಧ ನಮನ ಹಾಗೂ ಡಾ. ಗಣಪತಿ ಹೆಗಡೆ ಅವರ ಮನವು ಅರಳಲಿ ಕೃತಿಗಳು ಲೋಕಾರ್ಪಣೆಗೊಂಡವು.
ರಂಗಕರ್ಮಿ ಎಸ್.ಎನ್. ಸೇತೂರಾಮ್, ಚಿತ್ರನಟ ಹಾಗೂ ಕರ್ನಾಟಕ ಸಂಸ್ಕಾರ ಭಾರತಿ ಅಧ್ಯಕ್ಷ ಡಾ. ಕೆ. ಸುಚೇಂದ್ರ ಪ್ರಸಾದ್, ವಿಸ್ತಾರ ಮೀಡಿಯಾ ಲಿಮಿಟೆಡ್ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ, ಇಂಡಾಲಜಿಸ್ಟ್ ಸದ್ಯೋಜಾತ ಭಟ್ಟ, ಶಿಕ್ಷಣ ತಜ್ಱ ಡಾ. ಎನ್. ರಾಮಚಂದ್ರಯ್ಯ, ಹಾಸ್ಯ ಬರಹಗಾರ ಎಂ.ಎಸ್. ನರಸಿಂಹಮೂರ್ತಿ, ವಿಕ್ರಮ್ ಪ್ರಕಾಶನದ ಹರಿಪ್ರಸಾದ್, ಸಮನ್ವಿತ ಸಂಸ್ಥೆಯ ರಾಧಾಕೃಷ್ಣ ಕೌಂಡಿನ್ಯ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದರು.
ಎಸ್.ಎನ್. ಸೇತೂರಾಮ್ ಮಾತನಾಡಿ, ನಮ್ಮ ದೇಶದ ಚರಿತ್ರೆಯ ಪುಸ್ತಕಗಳಲ್ಲಿ ಸೋಲಿನ ಬಗ್ಗೆಯೂ ಓದುತ್ತಿದ್ದೆವು. ಅದರಲ್ಲಿ ನಾವು ನಾಚಿಕೊಳ್ಳುವಂತಹ ವಿಚಾರಗಳೇ ಹೆಚ್ಚಾಗಿದ್ದವು. ಆದರೆ ನನ್ನ ಹಿರಿಯರು ಅದ್ಭುತವಾಗಿ ಆಡಳಿತ ನಡೆಸಿದ್ದರು ಹಾಗೂ ಸೌಜನ್ಯದಿಂದ ಬದುಕಿದ್ದರು ಎಂದು ಅರಿವು ಮೂಡಿಸಿಕೊಂಡಾಗ ಹೆಮ್ಮೆಯ ಭಾವ ಮೂಡುತ್ತದೆ. ಈ ಹೆಮ್ಮೆಯ ಭಾವ ಇಲ್ಲದವನಿಗೆ ಅಸ್ತಿತ್ವವೇ ಇರುವುದಿಲ್ಲ. ತ.ರಾ.ಸು, ಬಿ. ಪುಟ್ಟಸ್ವಾಮಯ್ಯ ಸೇರಿ ಕೆಲವರಿಂದಲೇ ಮಾತ್ರ ನಮ್ಮ ನೈಜ ಚರಿತ್ರೆಯ ಅರಿವಾಯಿತು ಎಂದು ಹೇಳಿದರು.
ವಿಸ್ತಾರ ಮೀಡಿಯಾ ಲಿಮಿಟೆಡ್ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ಮಾತನಾಡಿ, ಈ ಹಿಂದೆ ವಿಚಾರವಾದಿಯೊಬ್ಬರು, ಸಂಸ್ಕೃತ ಕಲಿಸುವುದರಿಂದ ಕನ್ನಡದ ಕೊಲೆ ಆಗುತ್ತದೆ ಎಂದಿದ್ದರು. ಆದರೆ ಸಂಸ್ಕೃತವನ್ನು ಹೊರತುಪಡಿಸಿದ 10 ಪದಗಳನ್ನೂ ಅವರಿಗೆ ತಮ್ಮ ಮಾತಿನಲ್ಲಿ ಬಳಸಲು ಸಾಧ್ಯವಾಗಲಿಲ್ಲ. ಹೀಗೆ ಸಂಸ್ಕೃತ ವಿರೋಧಿ ಭ್ರಮೆಯಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ಆ ಭ್ರಮೆಯನ್ನು ಕಳಚುವ ಪ್ರಕಾಶನ ಸಂಸ್ಥೆಗಳು ಇಂದು ಕನ್ನಡದಲ್ಲಿ ಬರುತ್ತಿವೆ. ಅವುಗಳ ಪಟ್ಟಿಯಲ್ಲಿ ವಿಕ್ರಮ್ ಪ್ರಕಾಶನ ಹಾಗೂ ಸಮನ್ವಿತ ಪ್ರಕಾಶನ ಸಂಸ್ಥೆಗಳಿವೆ ಎಂದು ಹೇಳಿದರು. ಮುಂದುವರಿದ ಅವರು ಈ ಎರಡೂ ಪ್ರಕಾಶನ ಸಂಸ್ಥೆಗಳು ಅತ್ಯುತ್ತಮ ಪುಸ್ತಕಗಳನ್ನೇ ಪ್ರಕಾಶಿಸಿವೆ. ಗ್ರಂಥಾಲಯ ಇಲಾಖೆಯನ್ನು ನೆಚ್ಚಿಕೊಂಡು ಪುಸ್ತಕ ಪ್ರಕಟಣೆ ಮಾಡಿಲ್ಲ ಎಂದು ಶ್ಲಾಘಿಸಿದರು.
ಇದನ್ನೂ ಓದಿ : Karnataka live news: ವಿಶ್ವೇಶ್ವರ ಭಟ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಗೈರು
ಡಾ. ಗಣಪತಿ ಭಟ್ ಮಾತನಾಡಿ, ಜೀರಿ ಎನ್ನುವಂತಹ ಮಧ್ಯಪ್ರದೇಶದ ಹಳ್ಳಿಯ ಬಗ್ಗೆ ಹರಿಪ್ರಕಾಶ್ ಕೋಣೆಮನೆಯವರು ವಿಜಯವಾಣಿ ಪತ್ರಿಕೆಯಲ್ಲಿದ್ದ ವೇಳೆ ಒಂದು ಒಂದು ಲೇಖನ ಬರೆಸಿದ್ದರು. ಒಂದು ಸಂಸ್ಕೃತ ಗ್ರಾಮ ಇದ್ದರೆ ಯಾವ ರೀತಿ ಸಮಾಜ ಪರಿವರ್ತನೆ ತರುತ್ತದೆ ಎಂದು ಆ ಲೇಖನದಲ್ಲಿ ವಿವರಿಸಿದ್ದೆ . ಜೀರಿ ಗ್ರಾಮದಲ್ಲಿ ಎಲ್ಲರೂ ಸಂಸ್ಕೃತ ಕಲಿತ ನಂತರ ಅವರೆಲ್ಲರೂ ಮದ್ಯಪಾನ ಮಾಡಬಾರದು ಎಂದು ನಿರ್ಧಾರ ಮಾಡಿದರು. ಹೀಗಾಗಿ ಗ್ರಾಮದಲ್ಲಿ ಜಗಳವೇ ಇಲ್ಲದಂತಾಯಿತು. ಸಂಸ್ಕೃತ ಎನ್ನುವುದು ಕೇವಲ ಭಾಷೆಯಲ್ಲ ಎನ್ನುವುದು ಇದರಿಂದ ತಿಳಿಯುತ್ತದೆ. ಒಂದು ಊರನ್ನು ಸಂಸ್ಕೃತ ಪರಿವರ್ತನೆ ಮಾಡಬಹುದು ಎಂದಾದರೆ ಇಡೀ ದೇಶ ಸಂಸ್ಕೃತ ಕಲಿತರೆ ದೇಶವೇ ಬದಲಾವಣೆ ಆಗುತ್ತದೆ. ಬರವಣಿಗೆಗೆ ಅವಕಾಶ ಮಾಡಿಕೊಟ್ಟವರು ಹರಿಪ್ರಕಾಶ್ ಕೋಣೆಮನೆಯವರು ಎಂದು ಸ್ಮರಿಸಿದರು.