ತುಮಕೂರು: ಅರಣ್ಯ ಪ್ರದೇಶ ಒತ್ತುವರಿ ತೆರವಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ರೈತರ ಮೇಲೆ ಅರಣ್ಯ ಸಿಬ್ಬಂದಿ ಮನಸೋ ಇಚ್ಛೇ ಲಾಠಿ ಚಾರ್ಜ್ ಮಾಡಿದ್ದರಿಂದ ನಾಲ್ವರು ರೈತರಿಗೆ ಗಂಭೀರ ಗಾಯಗಳಾಗಿವೆ. ಜಿಲ್ಲೆಯ (Tumkur News) ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಗಂಗಯ್ಯನಪಾಳ್ಯದಲ್ಲಿ ಘಟನೆ ನಡೆದಿದ್ದು, ಅರಣ್ಯ ಇಲಾಖೆಗೆ ಲಾಠಿ ಚಾರ್ಜ್ ಮಾಡುವ ಅಧಿಕಾರ ಕೊಟ್ಟವರು ಯಾರು ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.,
ಬಗರ್ ಹುಕುಂ ಭೂಮಿಯಲ್ಲಿ ಟ್ರಂಚ್ ಹೊಡೆಯಲು ಗ್ರಾಮಸ್ಥರು ವಿರೋಧಿಸಿದ್ದರು. ಆದರೆ, ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲು ಅಧಿಕಾರಿಗಳು ಮುಂದಾಗಿದ್ದರಿಂದ ಕಳೆದ 15 ದಿನಗಳಿಂದ ಅರಣ್ಯ ಇಲಾಖೆ ಮತ್ತು ರೈತರ ನಡುವೆ ಜಟಾಪಟಿ ನಡೆಯುತ್ತಿತ್ತು.
ಗುರುವಾರ ನೂರಕ್ಕೂ ಹೆಚ್ಚು ಸಿಬ್ಬಂದಿ ಜತೆ ಬಂದು ಅಧಿಕಾರಿಗಳು ಟ್ರಂಚ್ ಹೊಡೆಯಲು ಮುಂದಾಗಿದ್ದರು. ಈ ವೇಳೆ ರೈತರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ. ಗಲಾಟೆ ತಾರಕಕ್ಕೇರಿದಾಗ ಅರಣ್ಯ ಸಿಬ್ಬಂದಿ ರೈತರ ಮೇಲೆ ಲಾಠಿ ಬೀಸಿದ್ದಾರೆ. ಈ ವೇಳೆ ಮಹಿಳೆಯರು ಸೇರಿ ಹತ್ತಾರು ರೈತರಿಗೆ ಪೆಟ್ಟಾಗಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಇದೇ ವೇಳೆ ಅರಣ್ಯ ಸಿಬ್ಬಂದಿಗೂ ಗಾಯಗಳಾಗಿವೆ.
ಇದನ್ನೂ ಓದಿ | Road Accident : ಹಾಸನದಲ್ಲಿ ಬೈಕ್ ಮೇಲೆಯೇ ಹರಿದ ಬಸ್: ಸವಾರ ಸ್ಥಳದಲ್ಲೇ ಮೃತ್ಯು, ಯುವತಿಗೆ ಗಾಯ
ಗಲಾಟೆ ವೇಳೆ ರೈತ ಹೋರಾಟದ ನೇತೃತ್ವ ವಹಿಸಿದ್ದ ರೈತ ಮುಖಂಡ ದೊಡ್ಡನಂಜಯ್ಯ ಅವರನ್ನು ಕಾಲಲ್ಲಿ ತುಳಿದು ಜೀಪ್‌ನಲ್ಲಿ ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಅರಣ್ಯ ಸಿಬ್ಬಂದಿ ವಿರುದ್ಧ ಕೇಳಿಬಂದಿದೆ. ರೈತ ಮುಖಂಡ ದೊಡ್ಡನಂಜಯ್ಯ ಅವರನ್ನು ವಾಪಸ್ ಕಳುಹಿಸಿ ಎಂದು ಆಗ್ರಹಿಸಿ ಸ್ಥಳದಲ್ಲೇ ರೈತರು ಪ್ರತಿಭಟನೆ ಕೈಗೊಂಡಿದ್ದಾರೆ. ಹೀಗಾಗಿ ಸ್ಥಳಕ್ಕೆ ಪೊಲೀಸರು ಆಗಮಿಸಿ ಮೊಕ್ಕಾಂ ಹೂಡಿದ್ದಾರೆ.
ಶ್ರೀರಾಮ ನವಮಿ ಮೆರವಣಿಗೆ ವೇಳೆ ಗುಂಪು ಘರ್ಷಣೆ; ಲಘು ಲಾಠಿ ಪ್ರಹಾರ
ಯಾದಗಿರಿ: ಜಿಲ್ಲೆಯ ಸುರಪುರ ನಗರದಲ್ಲಿ ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ದೇವರ ಮೆರವಣಿಗೆ ವೇಲೆ ಕಾಲು ತುಳಿದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು. ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಸುರಪುರ ಪಟ್ಣದ ಗಾಂಧಿ ವೃತ್ತದಲ್ಲಿ ರಾಮಸೇನೆಯಿಂದ ಆಂಜನೇಯ ಹಾಗೂ ಶ್ರೀರಾಮನ ಮೂರ್ತಿ ಮೆರವಣಿಗೆ ಮಾಡುವ ವೇಳೆ ಗಲಾಟೆ ನಡೆದಿದೆ. ಡಿಜೆ ಸೌಂಡ್‌ಗೆ ಡಾನ್ಸ್ ಮಾಡುವಾಗ ಒಬ್ಬರಿಗೊಬ್ಬರು ಕಾಲು ತುಳಿತ ವಿಚಾರಕ್ಕೆ ಜಗಳ ಆರಂಭವಾಗಿದೆ. ಹೀಗಾಗಿ ಪೊಲೀಸ್ ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ.