ಯಾದಗಿರಿ: ಜಿಲ್ಲೆಯ ಯಾದಗಿರಿ, ಗುರುಮಠಕಲ್, ಶಹಾಪುರ, ಸುರಪುರ ಈ ನಾಲ್ಕು ತಾಲೂಕುಗಳು ಆನೆಕಾಲು ರೋಗ (Elephantiasis free) ಮುಕ್ತವಾಗಿ ಘೋಷಣೆಯಾಗಿವೆ. ಆದರೂ ಹೆಚ್ಚಿನ ಕಾಳಜಿ ವಹಿಸಿ ಜಾಗೃತರಾಗಿರಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಮಲೇರಿಯಾ ವಿರೋಧಿ ಮಾಸಾಚರಣೆ ಮತ್ತು ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಅಧಿನಿಯಮ-(2003) ಕಾಯ್ದೆಯಡಿ ರಚಿಸಿದ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆನೆಕಾಲು ರೋಗವು ಇಂದು ಜನತೆಗೆ ಬೆಂಬಿಡದೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಈ ರೋಗದಿಂದ ಮುಕ್ತಿಗೊಳಿಸಲು ನಿರಂತರ ಪ್ರಯತ್ನ ನಡೆಸಿದ್ದು, ಸಾರ್ವಜನಿಕರು ಜಾಗೃತರಾಗಿ ಆರೋಗ್ಯ ಇಲಾಖೆ ನೀಡುವ ಮಾತ್ರೆಗಳನ್ನು ಸೇವಿಸುವುದರ ಮೂಲಕ ರೋಗ ಬರದಂತೆ ಮುಂಜಾಗ್ರತೆ ವಹಿಸಬೇಕೆಂದು ಅರಿವು ಮೂಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ಇದನ್ನೂ ಓದಿ: Anil Ambani: ಅಂಬಾನಿ ದಂಪತಿಗೆ ಇ ಡಿ ಸಂಕಷ್ಟ; ಇಂದು ಟೀನಾ ಅಂಬಾನಿ ವಿಚಾರಣೆ
ಪ್ರತಿದಿನ ಶಾಲೆಯಲ್ಲಿ ಪ್ರಾರ್ಥನೆ ಸಮಯದಲ್ಲಿ ಮಕ್ಕಳಿಗೆ ಮಲೇರಿಯಾ ಜ್ವರದ ಲಕ್ಷಣಗಳು ಹಾಗೂ ಇನ್ನಿತರ ರೋಗಗಳು ಹರಡುವಿಕೆ ಹಾಗೂ ತಡೆಗಟ್ಟುವಿಕೆಯ ವಿಧಾನಗಳ ಬಗ್ಗೆ ಆರೋಗ್ಯ ಶಿಕ್ಷಣ ನೀಡಿ ಮತ್ತು ಸ್ವಚ್ಛತಾ ನೈರ್ಮಲ್ಯದ ಕುರಿತು ಅರಿವು ಮೂಡಿಸಿ ಎಂದು ತಿಳಿಸಿದರು.
ಸೊಳ್ಳೆಗಳಿಂದ ಹರಡುವ ಮತ್ತು ಇತರೆ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳು, ಸ್ತ್ರೀ ಶಕ್ತಿ ಸಂಘಗಳು, ಧಾರ್ಮಿಕ ಸಂಸ್ಥೆಗಳು, ಇನ್ನಿತರ ಸಂಘಗಳು ಭಾಗವಹಿಸಲು ಪ್ರೇರೇಪಿಸಿ, ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ರೋಗಗಳ ಬಗ್ಗೆ ಜಾಗೃತಿ ಮೂಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: Shukra Gochar 2023 : ಜು.7 ರಂದು ಸಿಂಹ ರಾಶಿಗೆ ಶುಕ್ರನ ಸಂಚಾರ; ಈ ಮೂರು ರಾಶಿಯವರಿಗೆ ಶುಭ ಫಲ
ಸಾರ್ವಜನಿಕ ನೀರಿನ ನಲ್ಲಿಗಳು, ಬೋರವೆಲ್, ಬಾವಿಗಳ ಸುತ್ತಮುತ್ತ ನೀರು ನಿಲ್ಲದಂತೆ ವ್ಯವಸ್ಥೆ ಮಾಡುವುದು ಮತ್ತು ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆಯನ್ನು ಕಲ್ಪಿಸುವುದು, ಹಳ್ಳಿಗಳಲ್ಲಿ ಘನತ್ಯಾಜ್ಯ ವಸ್ತುಗಳನ್ನು ಸೂಕ್ತ ವಿಲೇವಾರಿ ಮಾಡುವುದು, ಮೇಲ್ಛಾವಣಿ ತೊಟ್ಟಿ ಮತ್ತು ನೀರು ಸರಬರಾಜು ತೊಟ್ಟಿಗಳನ್ನು ಭದ್ರವಾಗಿ ಮುಚ್ಚುವ ವ್ಯವಸ್ಥೆ ಮಾಡುವುದು, ನೀರು ಸರಬರಾಜು ಪೈಪ್‌ಗಳಲ್ಲಿ ಸೋರುವಿಕೆಯನ್ನು ತಡೆಗಟ್ಟಲು ನಿಗಾವಹಿಸುವಂತೆ ಡಿಸಿ ಸೂಚಿಸಿದರು.
ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು, ಮಾನವಾಭಿವೃದ್ಧಿಗೆ ದೊಡ್ಡ ಕಂಟಕವಾಗಿರುವ ಈ ಪಿಡುಗನ್ನು ನಿರ್ಮೂಲನೆ ಮಾಡಿದರೆ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಇದನ್ನೂ ಓದಿ: Road Accident : ಚಲಿಸುತ್ತಿದ್ದ ಬಸ್‌ನಿಂದ ಆಯತಪ್ಪಿ ಬಿದ್ದ ವಿದ್ಯಾರ್ಥಿನಿ; ಲಾರಿ ಹರಿದು ಶಾಲಾ ಶಿಕ್ಷಕಿ ಮೃತ್ಯು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪನ್ವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಗುರುರಾಜ, ಆರ್‌ಸಿಎಚ್ಒ ಡಾ. ಮಲ್ಲಪ್ಪ, ಮಲೇರಿಯಾ ಅಧಿಕಾರಿ ಡಾ.ಲಕ್ಷ್ಮೀಕಾಂತ ಒಂಟೀಪೀರ, ಜಿಲ್ಲಾ ಸರ್ವೆಕ್ಷಣ ಅಧಿಕಾರಿ ಡಾ.ಸಾಜಿಧ್, ಯಾದಗಿರಿ ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ, ತಂಬಾಕು ನಿಯಂತ್ರಣ ಜಿಲ್ಲಾ ಸಲಹೆಗಾರ್ತಿ ಮಹಾಲಕ್ಷ್ಮೀ ಸಜ್ಜನ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಮರಿಸ್ವಾಮಿ, ಡಿಡಿಪಿಐ ಮಂಜುನಾಥ, ಸೇರಿದಂತೆ ಇತರರು ಉಪಸ್ಥಿತರಿದ್ದರು.