| ಸುಧೀರ್ ನಾಯರ್, ಬನವಾಸಿ
ಶ್ರಮಿಕ ವರ್ಗದ ಸುರಕ್ಷಿತ ಓಡಾಟಕ್ಕೆ ಘೋಷಿಸಿದ್ದ ಉಚಿತ ಬಸ್ ಪಾಸ್ ಯೋಜನೆಯನ್ನು (Free Bus Pass) ಕಳೆದ 4 ತಿಂಗಳಿನಿಂದ ಸ್ಥಗಿತಗೊಳಿಸಲಾಗಿದೆ. ಕೇವಲ ಆರು ತಿಂಗಳಲ್ಲಿ ಈ ಯೋಜನೆಗೆ ತಿಲಾಂಜಲಿ ಇರಿಸಿದ್ದು, ಇದು ಈ ಹಿಂದಿನ ಸರ್ಕಾರದ ಚುನಾವಣಾ ಗಿಮಿಕ್ ಎಂಬ ಆರೋಪ ಕೇಳಿಬಂದಿದೆ. ಹೊಸ ಸರ್ಕಾರ ಗ್ಯಾರಂಟಿಗಳ ಜತೆಗೆ ಈ ಯೋಜನೆಯನ್ನೂ ಮುನ್ನಡೆಸಬೇಕು ಎನ್ನುವ ಬೇಡಿಕೆ ಕಾರ್ಮಿಕರ ವಲಯದಲ್ಲಿ ಕೇಳಿಬರುತ್ತಿದೆ.
ಸುರಕ್ಷಿತವಲ್ಲದ ವಾಹನಗಳಲ್ಲಿ ಕಟ್ಟಡ ಕಾರ್ಮಿಕರ ಸಂಚಾರದಿಂದ ಹಲವು ಅವಘಡಗಳು ಸಂಭವಿಸಿದ್ದವು. ಹೀಗಾಗಿ ಹಿಂದಿನ ಬಿಜೆಪಿ ಸರ್ಕಾರ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ನಗರ ಹಾಗೂ ಗ್ರಾಮೀಣ ಭಾಗದಿಂದ 45 ಕಿಮೀ ದೂರದವರೆಗೆ ಓಡಾಡಲು ಉಚಿತ ಬಸ್ ಪಾಸ್ ಯೋಜನೆಗೆ ಚಾಲನೆ ನೀಡಿತ್ತು. ಆರಂಭದಲ್ಲಿ ಬಿಎಂಟಿಸಿಯಲ್ಲಿ ಆರಂಭಿಸಿ ನಂತರ ರಾಜ್ಯಾದ್ಯಂತ ವಿಸ್ತರಿಸಿತ್ತು. ಆದರೆ, ಇದೀಗ ಯೋಜನೆಗೆ ಅಂತಿಮ ಮೊಳೆ ಹೊಡೆದಿದ್ದು, ನಾಲ್ಕು ತಿಂಗಳಿನಿಂದ ಯಾವುದೇ ಪಾಸ್‌ಗಳನ್ನು ನೀಡುತ್ತಿಲ್ಲ. ಕಳೆದ ಮಾ.31ಕ್ಕೆ ಪಾಸ್ ಅವಧಿ ಮುಕ್ತಾಯಗೊಂಡಿದ್ದು, ನವೀಕರಣ ಮಾಡದಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ | How to apply Gruha Jyothi : ಉಚಿತ ವಿದ್ಯುತ್ ಪಡೆಯಲು 5 ನಿಮಿಷದಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ
ಆರಂಭದಲ್ಲಿ ಒಂದು ಲಕ್ಷ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿತರಿಸಿ, ನಂತರ ಹಂತ ಹಂತವಾಗಿ ಇದನ್ನು ವಿಸ್ತರಿಸುವ ಭರವಸೆ ವ್ಯಕ್ತವಾಗಿತ್ತು. ಕಟ್ಟಡ ಕಾಮಗಾರಿಗಾಗಿ ಕಾರ್ಮಿಕರು ವಲಸೆ ಹೋಗುವುದು ಹೆಚ್ಚು ಎನ್ನುವ ಕಾರಣ ನೀಡಿ ಪ್ರತಿ 3 ತಿಂಗಳಿಗೊಮ್ಮೆ ನವೀಕರಣದ ನಿಯಮ ರೂಪಿಸಲಾಗಿತ್ತು. ಹೀಗಾಗಿ ಮೊದಲ ಬಾರಿಗೆ 2022 ಸೆಪ್ಟೆಂಬರ್ ಹಾಗೂ ಡಿಸೆಂಬರ್ ಹೀಗೆ ಎರಡು ಹಂತದಲ್ಲಿ ಪಾಸ್ ನೀಡಲಾಯಿತು. ಈ ಯೋಜನೆ ಮುಂದುವರಿಯಲಿದೆ ಎಂಬ ಕಾರ್ಮಿಕರ ನಿರೀಕ್ಷೆ ಸುಳ್ಳಾಗಿದೆ. ಮಾ.31ರ ನಂತರ ಪಾಸ್ ವಿತರಿಸದಂತೆ ಹಾಗೂ ಅಂತಹ ಪಾಸ್‌ಗಳಿಗೆ ಪ್ರಯಾಣಕ್ಕೆ ಅವಕಾಶ ನೀಡದಂತೆ ಸಾರಿಗೆ ಸಂಸ್ಥೆ ಸೂಚನೆ ನೀಡಿದೆ.
ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸಾಕಷ್ಟು ಹಣವಿದ್ದು, ಇದನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸುವುದಾಗಿ ಹಿಂದಿನ ಬಿಜೆಪಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಮೂರು ತಿಂಗಳಿಗೆ 42 ಕೋಟಿ ರೂ.ನಂತೆ ವರ್ಷಕ್ಕೆ 168 ಕೋಟಿ ರೂ. ತಗುಲುತ್ತದೆ. ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಹಂತ ಹಂತವಾಗಿ ವಿಸ್ತರಿಸಲಾಗುವುದು ಎಂಬ ಭರವಸೆ ನೀಡಲಾಗಿತ್ತು. ಆದರೆ, ಕೇವಲ 6 ತಿಂಗಳಲ್ಲಿ ಇದಕ್ಕೆ ತೀಲಾಂಜಲಿಯಿಡಲಾಗಿದೆ. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಸರ್ಕಾರ ರಚನೆಗೆ ಮುಂದಾಗಿದೆ. ಇಂತಹ ಸಂದರ್ಭದಲ್ಲಿ ತಾನು ಹೊರಡಿಸಿರುವ ಐದು ಗ್ಯಾರಂಟಿ ಮೂಲಕ ಕಟ್ಟಡ ಕಾರ್ಮಿಕರಿಗೂ ಉಚಿತ ಬಸ್ ಪಾಸ್ ಮುಂದುವರಿಸಲಿ ಎಂಬುದು ಕಾರ್ಮಿಕರ ಒತ್ತಾಸೆಯಾಗಿದೆ.
ಇದನ್ನೂ ಓದಿ | Free Bus Service: ಹೆಚ್ಚಿದ ನಾರಿ ಶಕ್ತಿ! 166 ಕೋಟಿ ರೂಪಾಯಿ ಮೀರಿ ಮುನ್ನುಗ್ಗುತ್ತಿರುವ ಶಕ್ತಿ ಸ್ಕೀಂ!
ಕಾರ್ಮಿಕರ ಬಸ್ ಪಾಸ್ ಯೋಜನೆಯನ್ನು ಆರು ತಿಂಗಳಿಗೆ ನಿಲ್ಲಿಸಿದ್ದು ವಿಪರ್ಯಾಸ. ಇದೀಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳ ಜತೆಗೆ ಈ ಯೋಜನೆಯನ್ನೂ ಅರ್ಹ ಫಲಾನುಭವಿಗಳಿಗೆ ವಿಸ್ತರಿಸಬೇಕು.
| ಮನೋಜ ಚನ್ನಯ್ಯ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ, ಬನವಾಸಿ
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಾರ್ಮಿಕ ಸಚಿವನಾಗಿ ಶ್ರಮಿಕ ವರ್ಗದವರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಕಾರ್ಮಿಕ ವರ್ಗಕ್ಕೆ ನೀಡಿದ್ದ ಉಚಿತ ಬಸ್ ಪಾಸ್ ಯೋಜನೆಯನ್ನು ಈಗಿನ ಕಾಂಗ್ರೆಸ್ ಸರ್ಕಾರ ಮುಂದುವರಿಸಬೇಕು.
| ಶಿವರಾಮ್ ಹೆಬ್ಬಾರ್, ಮಾಜಿ ಕಾರ್ಮಿಕ ಸಚಿವರು
ಈ ಹಿಂದಿನ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಬಸ್ ಪಾಸ್ ಸೌಲಭ್ಯವನ್ನು ನೀಡಿತ್ತು. ಯೋಜನೆಯು ಮೂರು ತಿಂಗಳು ಚಾಲನೆಯಿತ್ತು. ಈಗಿನ ಸರ್ಕಾರ ಈ ಕುರಿತು ಯಾವುದೇ ನಿರ್ದೇಶನ ನೀಡಿಲ್ಲ. ಈ ಯೋಜನೆಯ ಆದೇಶ ನೇರವಾಗಿ ಕೇಂದ್ರ ಕಚೇರಿಗೆ ಬರುವುದರಿಂದ ಜಿಲ್ಲಾ ಕಚೇರಿಗೆ ಈ ಬಗ್ಗೆ ಮಾಹಿತಿಯಿರುವುದಿಲ್ಲ.
| ಅಕ್ಬರ್ ಮುಲ್ಲಾ, ಉತ್ತರ ಕನ್ನಡ ಜಿಲ್ಲಾ ಕಾರ್ಮಿಕ ಅಧಿಕಾರಿ