ಬೆಂಗಳೂರು: ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ಮಹತ್ವಾಕಾಂಕ್ಷೆಯ ಯೋಜನೆಯಲ್ಲೊಂದಾದ “ಶಕ್ತಿ”ಗೆ ಮಹಿಳೆಯರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಹೆಚ್ಚಿನವರು ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಮೊದಲ ದಿನದ ಮಹಿಳಾ ಪ್ರಯಾಣಿಕರ ಸಂಖ್ಯೆಯನ್ನು ಎರಡನೇ ದಿನಕ್ಕೆ ಹೋಲಿಕೆ ಮಾಡಿದರೆ 8 ಪಟ್ಟು ಹೆಚ್ಚಳಗೊಂಡಿದೆ.
ಭಾನುವಾರ ಒಂದೇ ದಿನ ನಾಲ್ಕು ನಿಗಮದಿಂದ 5,71,023 ಮಹಿಳಾ ಪ್ರಯಾಣಿಕರು ಸಂಚರಿಸಿದ್ದರು. ಅಂದು ಮಧ್ಯಾಹ್ನ 1 ಗಂಟೆಯ ನಂತರ ಮಧ್ಯರಾತ್ರಿ ವರೆಗೆ 5,71,023 ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಪ್ರಯಾಣಿಸಿದ ಒಟ್ಟು ಮೌಲ್ಯ 1,40,22,878 ರೂಪಾಯಿ ಆಗಿತ್ತು. ಈಗ ಶಕ್ತಿ ಯೋಜನೆಯಡಿ 2ನೇ ದಿನದ ಮಹಿಳಾ ಪ್ರಯಾಣಿಕರ ವಿವರ ಪ್ರಕಟಗೊಂಡಿದ್ದು, 41,34,726 ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದರೆ, ಅವರ ಪ್ರಯಾಣದ ಮೌಲ್ಯವು 8,83,53,434 ರೂಪಾಯಿ ಆಗಿದೆ.
8 ಪಟ್ಟು ಹೆಚ್ಚಳ
ಭಾನುವಾರ 5,71,023 ಮಹಿಳಾ ಪ್ರಯಾಣಿಕರು ಸಂಚರಿಸಿದ್ದರೆ, ಸೋಮವಾರ 41,34,726 ಮಹಿಳೆಯರು ಬಸ್ ಹತ್ತಿದ್ದಾರೆ. ಒಟ್ಟಾರೆಯಾಗಿ 2 ದಿನದಲ್ಲಿ 47,05,749 ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದಂತೆ ಆಗಿದೆ. ಮೊದಲ ದಿನದಲ್ಲಿ 1.40 ಕೋಟಿ ರೂಪಾಯಿ ಮೌಲ್ಯವನ್ನು ಸರ್ಕಾರ ಭರಿಸಿತ್ತು. ಎರಡನೇ ದಿನ 8.83 ಕೋಟಿ ರೂಪಾಯಿ ಮೌಲ್ಯವನ್ನು ಸರ್ಕಾರ ಭರಿಸುವ ಮೂಲಕ ಒಟ್ಟಾರೆಯಾಗಿ ಪ್ರಯಾಣದ ಮೌಲ್ಯ 10,23,76,312 ರೂಪಾಯಿ ಆಗಿದೆ.
ಸೋಮವಾರದ ಪ್ರಯಾಣ ವಿವರ; ನಿಗಮವಾರು ಮಾಹಿತಿ
ನಿಗಮ – ಪ್ರಯಾಣಿಕರ ಸಂಖ್ಯೆ – ಪ್ರಯಾಣಿಸಿದ ಮೌಲ್ಯ (ರೂಪಾಯಿಗಳಲ್ಲಿ)
ಕೆಎಸ್‌ಆರ್‌ಟಿಸಿ – 1140057 – 35784677
ಬಿಎಂಟಿಸಿ – 1757887 – 17533234
ಎನ್‌ಡಬ್ಲ್ಯುಕೆಆರ್‌ಟಿಸಿ – 831840 – 21066638
ಕೆಕೆಆರ್‌ಟಿಸಿ – 404942 – 13968885
ಒಟ್ಟು – 41,34,726 – 8,83,53,434