Site icon Vistara News

Free Bus: ಫಸ್ಟ್‌ ಡೇ ಬಸ್‌ ಫುಲ್‌! 5.71 ಲಕ್ಷ ಮಹಿಳೆಯರ ಪ್ರಯಾಣ, ಇದರ ವೆಚ್ಚ 1.4 ಕೋಟಿ; ಇದು ಮೊದಲ ದಿನದ ನಾರಿ ‘ಶಕ್ತಿ’

Shakti Scheme

ಬೆಂಗಳೂರು: ಸರ್ಕಾರಿ ಬಸ್‌ಗಳಲ್ಲಿ ನಾರಿ ಶಕ್ತಿ ಜೋರಾಗಿದ್ದು, ಮೊದಲ ದಿನವೇ 5 ಲಕ್ಷಕ್ಕೂ ಅಧಿಕ ಮಹಿಳೆಯರು ಗ್ಯಾರಂಟಿಯ ಉಚಿತ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ರಾಜ್ಯದ ಎಲ್ಲ ಮಹಿಳೆಯರಿಗೂ (women passengers) ಕಾಂಗ್ರೆಸ್‌ ಗ್ಯಾರಂಟಿ (Congress Guarantee) ಯೋಜನೆಯಂತೆ, ಉಚಿತ ಬಸ್‌ (Free Bus Service) ಪ್ರಯಾಣವುಳ್ಳ ಶಕ್ತಿ ಯೋಜನೆಗೆ (Shakti Scheme) ಜೂನ್‌ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅಧಿಕೃತವಾಗಿ ಚಾಲನೆ ನೀಡಿದ್ದರು.

ಕಲ್ಯಾಣ ಕರ್ನಾಟಕ ಸಾರಿಗೆಗೆ ಸಿಂಗಾರ ಮಾಡಿದ್ದ ಗ್ರಾಮಸ್ಥರು

ಭಾನುವಾರ ಒಂದೇ ದಿನ ನಾಲ್ಕು ನಿಗಮದಿಂದ 5,71,023 ಮಹಿಳಾ ಪ್ರಯಾಣಿಕರು ಓಡಾಡಿದ್ದಾರೆ. ಈ ಮೂಲಕ ನಾರಿಯರು ಶಕ್ತಿಯನ್ನು ಹಿಡಿದುಕೊಂಡಂತಾಗಿದೆ. ಭಾನುವಾರ (ಜೂ.11) ಮಧ್ಯಾಹ್ನ 1 ಗಂಟೆಯ ನಂತರ ಒಟ್ಟು 5,71,023 ಮಹಿಳಾ‌ ಪ್ರಯಾಣಿಕರು ಓಡಾಡಿದ್ದಾರೆ. ಮಹಿಳಾ ಪ್ರಯಾಣಿಕರ ಪ್ರಯಾಣಿಸಿದ ಒಟ್ಟು ಮೌಲ್ಯ 1,40,22,878 ರೂಪಾಯಿ ಆಗಿದೆ.

ಶಕ್ತಿ ಓಡಾಟದ ವಿವರ ಹೀಗಿದೆ.

ನಿಗಮ – ಪ್ರಯಾಣಿಕರ ಸಂಖ್ಯೆ – ಪ್ರಯಾಣದ ಮೌಲ್ಯ (ರೂ. ಗಳಲ್ಲಿ)
ಕೆಎಸ್‌ಆರ್‌ಟಿಸಿ – 1,93,831 – 58,16,178 ರೂ.
ಬಿಎಂಟಿಸಿ – 2,01,215 – 26,19,604 ರೂ.
ಎನ್‌ಡಬ್ಲ್ಯೂಕೆಆರ್‌ಟಿಸಿ-1,22,354 – 36,17,096 ರೂ.
ಕೆಕೆಆರ್‌ಟಿಸಿ – 53, 623 – 19,70,000 ರೂ.

ಶಕ್ತಿ ಪಡೆಯಲು ಇವಿಷ್ಟೂ ಇದ್ದರೂ ಸಾಕು

ರಾಜ್ಯ ಸರ್ಕಾರದ 5 ಗ್ಯಾರಂಟಿ (Congress Guarantee) ಯೋಜನೆಗಳಲ್ಲಿ ಒಂದಾಗಿರುವ “ಶಕ್ತಿ” ಅಡಿ ಮಹಿಳೆಯರು ಉಚಿತ ಪ್ರಯಾಣಕ್ಕೆ (Free Bus Service) ಹಲವು ಅಡ್ಡಿ ಆತಂಕಗಳು ಎದುರಾಗಿತ್ತು. ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಈ ಉಚಿತ ಬಸ್‌ ಸೇವೆಗೆ ಚಾಲನೆ ಕೊಟ್ಟಿದ್ದರು. ಆದರೆ, ರಾಜ್ಯಾದ್ಯಂತ ಗೊಂದಲಗಳು ಮಾತ್ರ ಮುಂದುವರಿದಿದ್ದವು.

ಬಸ್‌ನಲ್ಲಿ ಮುದ್ರಿತ ಒರಿಜಿನಲ್‌ ಡಾಕ್ಯುಮೆಂಟ್‌ (Original Document) ಇದ್ದರೆ ಮಾತ್ರ ಉಚಿತ ಟಿಕೆಟ್‌ ಕೊಡುವುದಾಗಿ ಸಾರಿಗೆ ಸಿಬ್ಬಂದಿ ಹೇಳುತ್ತಿರುವುದು ಮಹಿಳೆಯರಿಂದ ವ್ಯಾಪಕ ಟೀಕೆಗೂ ಗುರಿಯಾಗಿತ್ತು. ಆದರೆ, ಈ ಬಗ್ಗೆ ಎಚ್ಚೆತ್ತಿರುವ ರಾಜ್ಯ ಸರ್ಕಾರ ಈಗ ಹೊಸ ಆದೇಶವೊಂದನ್ನು ಹೊರಡಿಸಿದೆ. ಉಚಿತ ಪ್ರಯಾಣಕ್ಕೆ ಮಹಿಳೆಯರು ಒರಿಜಿನಲ್‌ ದಾಖಲೆಯನ್ನು ಒಯ್ಯುವುದು ಕಡ್ಡಾಯ ಅಲ್ಲ ಎಂದು ಹೇಳಿದೆ.

ಮಹಿಳೆಯರು ಈ ಉಚಿತ ಪ್ರಯಾಣಕ್ಕಾಗಿ ಆಧಾರ್‌ ಕಾರ್ಡ್‌, ವೋಟರ್‌ ಐಡಿ, ಚಾಲನಾ ಪರವಾನಗಿ, ವಾಸಸ್ಥಳ ನಮೂದಾಗಿರುವ ಗುರುತಿನ ಚೀಟಿ, ವಿಶೇಷಚೇತನ, ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ನೀಡಿರುವ ಗುರುತಿನ ಪತ್ರ ಇಲ್ಲವೇ ಇವುಗಳಲ್ಲಿ ಯಾವುದಾದರೂ ಒಂದು ಗುರುತಿನ ಪತ್ರವನ್ನು ಭೌತಿಕವಾಗಿ ಅಥವಾ ಡಿಜಿಲಾಕರ್‌ನಲ್ಲಿ ಇಟ್ಟುಕೊಂಡು ಹೋಗಬೇಕು. ನೀವು ತೋರಿಸುವ ಗುರುತಿನ ಚೀಟಿಗಳಲ್ಲಿ ನಿಮ್ಮ ಫೋಟೋ ಮತ್ತು ವಾಸಸ್ಥಳವು ಕಡ್ಡಾಯವಾಗಿ ನಮೂದಾಗಿರಬೇಕು. ಸ್ಮಾರ್ಟ್‌ ಕಾರ್ಡ್‌ ದೊರೆಯುವವರೆಗೆ ಮಾತ್ರ ಈ ನಿಯಮ ಜಾರಿಯಲ್ಲಿರಲಿದೆ. ಮೂಲ ದಾಖಲಾತಿ, ಡಿಜಿಲಾಕರ್, ನಕಲು ಕಾಪಿಯನ್ನು ಪರಿಗಣಿಸಲು ಈಗಾಗಲೇ ಸೂಚನೆ ನೀಡಲಾಗಿದೆ.

ಗದಗ, ಯಾದಗಿರಿಯಲ್ಲಿ ನಡೆದಿತ್ತು ‘ಒರಿಜಿನಲ್‌’ ಕಿರಿಕ್‌

ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಹಿಳೆಯರು ಖುಷಿ ಖುಷಿಯಾಗಿಯೇ ಬಸ್‌ ಹತ್ತುತ್ತಿದ್ದಾರೆ. ಆದರೆ, ಈಗ ಗದಗ ಹಾಗೂ ಯಾದಗಿರಿಯಲ್ಲಿ ಒರಿಜಿನಲ್ ಆಧಾರ್‌ ಕಾರ್ಡ್‌ ವಿಷಯಕ್ಕೆ ಕಿರಿಕ್‌ ನಡೆದಿದೆ.

ಗದಗಿನ ಹೊಸ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಕೊಪ್ಪಳದಿಂದ ಹುಬ್ಬಳ್ಳಿಗೆ ಮಹಿಳೆಯೊಬ್ಬರು ಪ್ರಯಾಣ ಬೆಳೆಸಿದ್ದರು. ಈ‌ ಮಧ್ಯೆ ಗದಗಿನಲ್ಲಿ ಇನ್ನೊಂದು ಬಸ್‌ ಹತ್ತಿರುವ ಮಹಿಳೆಯು ಅಲ್ಲಿ ಕಂಡಕ್ಟರ್ ಜತೆಗೆ ವಾಗ್ವಾದ ನಡೆಸಿದ್ದಾರೆ. ಇಷ್ಟಕ್ಕೂ ಇಬ್ಬರ ಮಧ್ಯೆ ಜಗಳಕ್ಕೆ ಕಾರಣವಾಗಿದ್ದು, ದಾಖಲೆಯ ವಿಚಾರ. ಆಕೆ ತನ್ನ ಗುರುತಿನ ಮುದ್ರಿತ ದಾಖಲೆಯನ್ನು ಇಟ್ಟುಕೊಂಡಿಲ್ಲ. ಮೊಬೈಲ್‌ನಲ್ಲಿನ ಆಧಾರ್‌ ಕಾರ್ಡ್‌ ತೋರಿಸಿದ್ದಾರೆ.

ಆದರೆ, ಈ ಮೊದಲೇ ಸರ್ಕಾರದಿಂದ ಸೂಚನೆ ಇರುವ ಹಿನ್ನೆಲೆಯಲ್ಲಿ ನಿರ್ವಾಹಕ ಮೊಬೈಲ್‌ ಮೂಲಕ ಫೋಟೊ ದಾಖಲೆ ಇಟ್ಟುಕೊಂಡು ಉಚಿತ ಟಿಕೆಟ್‌ ಕೊಡಲು ಸಾಧ್ಯವಿಲ್ಲ ಎಂದು ನಿರಾಕರಣೆ ಮಾಡಿದ್ದಾರೆ. ಡಿಜಿಲಾಕರ್‌ನಲ್ಲಿದ್ದರೆ ಸರಿ ಎಂದು ಹೇಳಿದ್ದಾರೆ. ಆದರೆ, ಮಹಿಳೆಗೆ ಡಿಜಿ ಲಾಕರ್‌ ಬಗ್ಗೆ ಮಾಹಿತಿ ಇಲ್ಲ. ಅವರ ಬಳಿ ಮೊಬೈಲ್‌ನಲ್ಲಿ ದಾಖಲೆಯ ಫೋಟೊ ಮಾತ್ರ ಇತ್ತು.

ನಿರ್ವಾಹಕ ಉಚಿತ ಪ್ರಯಾಣಕ್ಕೆ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಮಹಿಳೆ, ನಿರ್ವಾಹಕನ ಮುಖಕ್ಕೆ ಮೊಬೈಲ್‌ ಹಿಡಿದು, ತಾನು ತೋರಿಸುತ್ತಿರುವುದೂ ದಾಖಲೆಯೇ ಆಗಿದೆ. ಇದು ನನ್ನ ಆಧಾರ್‌ ಕಾರ್ಡ್‌ನ ಸಾಫ್ಟ್‌ ಕಾಪಿಯಾಗಿದೆ. ನೋಡಿ, ಇದು ದಾಖಲೆ ಹೌದೋ‌ ಅಲ್ಲವೋ ಎಂದು ತಗಾದೆ ತೆಗೆದಿದ್ದಾರೆ.

ಇದಕ್ಕೆ ನಿರ್ವಾಹಕ ಮಾತ್ರ ಬಿಲ್‌ಕುಲ್‌ ಒಪ್ಪಲಿಲ್ಲ. “ಇಲ್ಲ ಇಲ್ಲ, ನಮಗೆ ಇರುವ ಸೂಚನೆಯಂತೆ ನಾನು ನಡೆದುಕೊಳ್ಳಲೇಬೇಕು. ನೀವು ಮುದ್ರಿತ ದಾಖಲೆಯನ್ನು ತೋರಿಸಿ ಬಸ್‌ ಹತ್ತಿ” ಎಂದು ನೇರವಾಗಿ ಹೇಳಿದ್ದಾರೆ. ಆದರೆ, ಪಟ್ಟುಬಿಡದ ಮಹಿಳೆ ಜಗಳ ಮಾಡುತ್ತಲೇ ಈ ವಿಚಾರವನ್ನು ನಿಲ್ದಾಣದ ಸಂಚಾರ ನಿಯಂತ್ರಣ‌ ಕೊಠಡಿವರೆಗೂ ಎಳೆದುಕೊಂಡು ಹೋಗಿದ್ದಾರೆ.

ಅಲ್ಲಿಯೂ ಸಹ ತನ್ನ ವಾದವನ್ನು ಮುಂದುವರಿಸಿದ್ದು, ಮೊಬೈಲ್ ತೋರಿಸಿ ಇದರಲ್ಲಿರುವ ನಂಬರ್ ಚೆಕ್ ಮಾಡಿಕೊಳ್ಳಿ ಎಂದು ವಾದವನ್ನು ಮುಂದಿಟ್ಟಿದ್ದಾರೆ. ನಿಲ್ದಾಣದ ಅಧಿಕಾರಿ ಹಾಗೂ ಹೋಮ್ ಗಾರ್ಡ್ ಸಿಬ್ಬಂದಿ ಜತೆ ವಾದ ಮಾಡಿದ್ದಾರೆ. ಕೊನೆಗೆ ಆಕೆಯನ್ನು ಸಮಾಧಾನ ಪಡಿಸಿ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Free Bus: ಶಕ್ತಿ ಯೋಜನೆ: ಎರಡನೇ ದಿನ ತುಂಬಿ ತುಳುಕಿದ ಬಸ್ಸುಗಳು, ಉದ್ಯೋಗಿಗಳ ಮುಗುಳುನಗು

ಯಾರಿಗೆಲ್ಲ ಉಚಿತ?

6 ರಿಂದ 12 ವರ್ಷದೊಳಗಿನ ಬಾಲಕಿಯರು, ಮಹಿಳೆಯರು, ಲೈಂಗಿಕ ಅಲ್ಪಸಂಖ್ಯಾತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಆದರೆ, ಇವರು ಕರ್ನಾಟಕದ ಪ್ರಜೆಗಳಾಗಿರಬೇಕು. ಅಂಥವರಿಗೆ ಮಾತ್ರ ಉಚಿತ ಪ್ರಯಾಣದ ಸೌಲಭ್ಯ ಸಿಗುತ್ತದೆ. ಆದರೆ, ಅಂತಾರಾಜ್ಯಕ್ಕೆ ಇಲ್ಲಿ ಉಚಿತ ಪ್ರಯಾಣ ಇರುವುದಿಲ್ಲ. ರಾಜ್ಯದೊಳಗೆ ಯಾವುದೇ ದೂರದ ಮಿತಿಯನ್ನು ಹಾಕಲಾಗಿಲ್ಲ. ಹಾಗಾಗಿ ರಾಜ್ಯದ ಎಲ್ಲಿ ಬೇಕಾದರೂ ಸಂಚರಿಸಬಹುದು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version