ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಹಾಗೂ ನೀರು ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದ್ದಾರೆ. ಸಭಾ ಕಾರ್ಯಕ್ರಮದಲ್ಲೇ ನಿರ್ಣಯವಾದ ಈ ಘೋಷಣೆಯ ಹಿಂದೆ ಒಂದು ರೋಚಕ ಚೀಟಿ ಕತೆ ಇದೆ!
ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ 68ನೇ ಕನ್ನಡ ರಾಜ್ಯೋತ್ಸವ ಆಯೋಜಿಸಲಾಗಿತ್ತು. ಸಿದ್ದರಾಮಯ್ಯ ಅವರ ಪೂರ್ವನಿಗದಿತ ಭಾಷಣದಲ್ಲಿ ಉಚಿತ ವಿದ್ಯುತ್ ಮತ್ತು ನೀರಿನ ವಿಚಾರವೇ ಇರಲಿಲ್ಲ. ಅದೆಲ್ಲವೂ ಪ್ರಸ್ತಾವನೆಯಾಗಿ, ಚರ್ಚೆಯಾಗಿ, ಅಧ್ಯಯನವಾಗಿ, ಘೋಷಣೆಯಾಗಿದ್ದೆಲ್ಲವೂ ವೇದಿಕೆಯಲ್ಲೇ. ಇದಕ್ಕೆಲ್ಲ ಮೂಲ ಕಾರಣವಾಗಿದ್ದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಅವರು ಕೊಟ್ಟ ಒಂದು ಚೀಟಿ.
ಇದು ಆಗಿದ್ದು ಹೇಗೆಂದರೆ, ಕಾರ್ಯಕ್ರಮದಲ್ಲಿ ಕುಳಿತಿದ್ದ ನುಗ್ಲಿ ಅವರಿಗೆ ಸಿಎಂ ಅವರು ಆಗಾಗ ದೇವಸ್ಥಾನಗಳಿಗೆ ಉಚಿತ ನೀರು ಮತ್ತು ವಿದ್ಯುತ್ ಪೂರೈಸುವ ಚಿಂತನೆ ಇದೆ ಎಂದು ಹೇಳುತ್ತಿದ್ದುದು ನೆನಪಾಯಿತಂತೆ. ಆಗ ಅವರಿಗೆ ದೇಗುಲಗಳಂತೆಯೇ ಜ್ಞಾನ ದೇಗುಲಗಳಿಗೂ ಉಚಿತ ವಿದ್ಯುತ್ ಮತ್ತು ನೀರು ನೀಡುವುದನ್ನು ಘೋಷಿಸಿದರೆ ಇದೊಂದು ಐತಿಹಾಸಿಕ ತೀರ್ಮಾನವಾಗಲಿದೆ ಎಂಬ ಯೋಚನೆ ಹೊಳೆಯಿತಂತೆ. ಆ ಕ್ಷಣವೇ ಅವರು ತಮ್ಮ ಯೋಚನೆಯನ್ನು ಸಿಎಂ ಅವರಿಗೆ ತಲುಪಿಸಲು ನಿರ್ಧರಿಸಿದರು.
ಮತ್ತು ಚೀಟಿಯೊಂದನ್ನು ಬರೆದರು. ಅದರಲ್ಲಿ
ಸರ್, ದಯಮಾಡಿ..
ನೀವು ಈಗಾಗಲೇ ರಾಜ್ಯದ ಜನತೆಗೆ ಉಚಿತ ವಿದ್ಯುತ್ ನೀಡಿದ್ದೀರಿ. ದೇವಾಲಯಗಳಿಗೆ ಉಚಿತ ವಿದ್ಯುತ್ ನೀಡುವ ಚಿಂತನೆ ಇದೆ.. ಪ್ಲೀಸ್ ರಾಜ್ಯದ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಹಾಗೂ ಕುಡಿಯುವ ನೀರನ್ನು ನೀಡುವ ಐತಿಹಾಸಿಕ ತೀರ್ಮಾನ ಮಾಡಿ ಸರ್. ರಾಜ್ಯೋತ್ಸವದ ಕೊಡುಗೆಯಾಗಿ.. ಇದು ತಮ್ಮಿಂದ ಮಾತ್ರ ಸಾಧ್ಯ ಸರ್ʼʼ ಎಂದು ಬರೆದು ಮಾಧ್ಯಮ ಸಲಹೆಗಾರರ ಮೂಲಕ ಸಿಎಂ ಅವರಿಗೆ ಕಳುಹಿಸಿದರು. ಮುಂದೆ ಚಕಚಕನೆ ಕೆಲಸಗಳು ನಡೆದವು. ವೇದಿಕೆಯಲ್ಲೇ ಅಧಿಕಾರಿಗಳ ಜತೆ ಚರ್ಚೆ ನಡೆದು ಐತಿಹಾಸಿಕ ತೀರ್ಮಾನ ಪ್ರಕಟವಾಯಿತು.
ಇದನ್ನೂ ಓದಿ | Karnataka Rajyotsava : ಇಂದಿನಿಂದ ಎಲ್ಲ ಸರ್ಕಾರಿ ಶಾಲೆಗಳಿಗೆ ಉಚಿತ ನೀರು – ವಿದ್ಯುತ್: ಸಿಎಂ ಸಿದ್ದರಾಮಯ್ಯ
ಈ ಬೆಳವಣಿಗೆಗಳು ಹೇಗೆ ಚಕಚಕನೆ ನಡೆದವು ಎನ್ನುವುದನ್ನು
ಸ್ವತಃ ಚಂದ್ರಶೇಖರ್ ನುಗ್ಲಿ ಅವರ ಮಾತುಗಳಲ್ಲೇ ಕೇಳಿ…..
ಮುಂದಿನದು ಚಂದ್ರಶೇಖರ್ ನುಗ್ಲಿ ಮಾತು
ಇಂದು ರಾಜ್ಯದ ಸರ್ಕಾರಿ ಶಾಲೆಗಳ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡತಕ್ಕಂಥ ದಿನ. ನಾನು ಚಿಕ್ಕವನಿಂದ ಕೇಳ್ತಾ ಇದ್ದೆ ಓದ್ತಾ ಇದೆ ಮುಖ್ಯಮಂತ್ರಿಗಳಿಗೆ ಒಂದು ಚೀಟಿ ಕೊಟ್ಟರೆ ಕೆಲಸ ಆಗಿಬಿಡುತ್ತದೆ ಎಂದು ಹಳ್ಳಿಗಳಲ್ಲಿ ಹಿರಿಯರು ಮಾತನಾಡುತ್ತಿದ್ದನ್ನು ಕೇಳಿಸಿಕೊಂಡ ರೂಡಿ.
ಇವತ್ತು ನಾನು ಯಥಾರೀತಿಯಾಗಿ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕರ್ನಾಟಕ ರಾಜ್ಯೋತ್ಸವದ 50ರ ಸಂಭ್ರಮಕ್ಕಾಗಿ ಬೆಂಗಳೂರಿನ ಕಂಠೀರವ ಸ್ಟೇಡಿಯಂನತ್ತ ಹೋಗಿದ್ದೆ. ಕಾರ್ಯಕ್ರಮಕ್ಕೆ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರು, ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ಅವರು ಶಿಕ್ಷಣ ಇಲಾಖೆಯ ಗೌರವಾನ್ವಿತ ಸಚಿವರಾದ ಮಧು ಬಂಗಾರಪ್ಪ ಸಾಹೇಬರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಇಲಾಖೆಯ ಎಲ್ಲ ಹಿರಿಯ ಅಧಿಕಾರಿಗಳು, ನಿರ್ದೇಶಕರು ವೇದಿಕೆ ಮೇಲೆ ಇದ್ದರು. ನಾವು ಕೂಡ ವೇದಿಕೆಯಲ್ಲಿ ಅತ್ತ ಇತ್ತ ಓಡಾಡುತ್ತಿದ್ದೆವು. ಕಾರ್ಯಕ್ರಮ ಪ್ರಾರಂಭವಾಯಿತು.
ಮಾನ್ಯ ಮುಖ್ಯಮಂತ್ರಿಗಳು ಸರ್ಕಾರ ಎಲ್ಲ ಮನೆಗಳಿಗೆ ಉಚಿತ ವಿದ್ಯುತ್ ಕೊಟ್ಟಿರುವುದನ್ನು ಉಲ್ಲೇಖಿಸುತ್ತಾ ದೇಗುಲಗಳಿಗೆ ಉಚಿತ ವಿದ್ಯುತ್ ಹಾಗೂ ನೀರು ನೀಡುವ ಚಿಂತನೆ ಇದೆ ಎಂದು ಹೇಳಿದ್ದನ್ನು ಕೇಳಿದ್ದೆ. ಆಗ ನನ್ನ ತಲೆಯಲ್ಲಿ ಓಡುತ್ತಾ ಇದ್ದಿದ್ದು ಒಂದೇ ಒಂದು. ಈ ರಾಜ್ಯದ ಜ್ಞಾನ ದೇಗುಲಗಳಾಗಿರುವ, ಬಡವ, ಹಿಂದುಳಿದ, ದಲಿತ ಮಕ್ಕಳೇ ಹೆಚ್ಚಾಗಿ ಕಲಿಯುವಂತಹ ಸರ್ಕಾರಿ ಶಾಲೆಗಳಿಗೆ ಸಿದ್ದರಾಮಯ್ಯನವರು ವಿದ್ಯುತ್ ಹಾಗೂ ಕುಡಿಯುವ ನೀರು ಉಚಿತವಾಗಿ ನೀಡದೆ ಇದ್ದರೆ ಹೇಗೆ? ಎಂದು ನನ್ನ ತಲೆಯಲ್ಲಿ ಸದಾ ಕಾಡುತ್ತಿತ್ತು.
ಮಧು ಬಂಗಾರಪ್ಪ ಸಾಹೇಬರು ಭಾಷಣ ಮಾಡಿದರು. ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಸಹ ತಮ್ಮ ಭಾಷಣವನ್ನು ಮುಗಿಸಿ ಬಂದು ಕೂತರು. ರಿಜ್ವಾನ್ ಅರ್ಷದ್ ಸಾಹೇಬರು ಭಾಷಣ ಮಾಡುವಾಗ ನಾನು ವೇದಿಕೆ ಮೇಲೆ ಕುಳಿತುಕೊಂಡಿದ್ದೆ. ಆಗ ನನ್ನ ಪಕ್ಕದಲ್ಲಿ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿಯಾಗಿರುವ ಜಯಪ್ರಕಾಶ್ ಸಾಹೇಬರಿದ್ದರು. ಅವರ ಕೈಯಲ್ಲಿ ಮಧು ಬಂಗಾರಪ್ಪನವರ ಭಾಷಣದ ಪ್ರತಿ ಇತ್ತು. ನಾನು ಆ ಪ್ರತಿಯನ್ನು ತೆಗೆದುಕೊಂಡು ಓದುತ್ತಾ ಓದುತ್ತಾ ಅದರ ಒಂದು ಭಾಗದಲ್ಲೇ ಒಂದು ಚೀಟಿ ಬರೆದೆ.
ʻʻರಾಜ್ಯೋತ್ಸವದ 50ನೇ ಸಂಭ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಲ್ಲಿ ಸವಿನಯ ಪ್ರಾರ್ಥನೆ ಸರ್, ತಾವು ಈಗಾಗಲೇ ಉಚಿತ ವಿದ್ಯುತ್ತನ್ನು ಜನಸಾಮಾನ್ಯರಿಗೆ ನೀಡಿದ್ದೀರಿ. ದೇಗುಲಗಳಿಗೆ ಉಚಿತ ವಿದ್ಯುತ್ ಹಾಗೂ ನೀರನ್ನು ನೀಡಲು ಘೋಷಿಸಿದ್ದೀರಿ. ಕರ್ನಾಟಕ ಕರುನಾಡಾಗಿ ಬೆಳುಗುತಲಿದ್ದರೂ ಈ ರಾಜ್ಯದ ದೇಗುಲಗಳಾದ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಇಲ್ಲ ಸರ್.. ಕೈಮುಗಿದು ಕೇಳಿಕೊಳ್ಳುತ್ತೇವೆ, ರಾಜ್ಯೋತ್ಸವದ ಕೊಡುಗೆಯಾಗಿ ಸರ್ಕಾರಿ ಶಾಲೆಗಳಿಗೆ ವಿದ್ಯುತ್ ಹಾಗೂ ನೀರನ್ನು ಉಚಿತವಾಗಿ ನೀಡುತ್ತೇವೆಂದು ಘೋಷಣೆ ಮಾಡಬೇಕುʼʼ ಎಂದು ಚೀಟಿಯನ್ನು ಬರೆದು ಆ ಚೀಟಿಯನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಪ್ರಭಾಕರ್ ಸಾಹೇಬರ ಹತ್ತಿರ ಕೊಟ್ಟೆ.
ʻʻಅಣ್ಣ ಇದೊಂದು ದಯಮಾಡಿ ಕೈಮುಗಿತೀನಿʼʼ ಎಂದು ಹೇಳಿದೆ. ಅವರು ʻʻಏನೋ ಇದರ ಬಜೆಟ್ ಎಷ್ಟಾಗುತ್ತೋ ಹೇಗೋ ಏನೋ, ಈ ರೀತಿ ಕೊಟ್ಟರೆ ಹೇಗೋʼʼ ಎಂದು ಕೇಳಿದರು. ಹೇಗೋ ಮಾನ್ಯ ಮುಖ್ಯಮಂತ್ರಿಗಳಿಗೆ ಚೀಟಿಯನ್ನು ತಲುಪಿಸಿದೆವು.
ಚೀಟಿ ಕೊಟ್ಟ ತಕ್ಷಣ ಮಾನ್ಯ ಮುಖ್ಯಮಂತ್ರಿಗಳು ವೇದಿಕೆಯ ಮೇಲೆಯೇ ಗಂಭೀರವಾಗಿ ಓದಿದರು. ತಕ್ಷಣವೇ ವೇದಿಕೆಯ ಮೇಲೆ ಕುಳಿತಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮಾ ಮೇಡಂ ಅವರನ್ನು ಕರೆದು ಆ ಚೀಟಿಯನ್ನು ಕೊಟ್ಟು ಅದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುವಂತೆ ಸೂಚಿಸಿದರು.
ಆಗ ವೇದಿಕೆಯಲ್ಲಿ ತೀವ್ರಗತಿಯ ಚಟುವಟಿಕೆಗಳು ಆರಂಭಗೊಂಡವು. ನಮ್ಮೆಲ್ಲ ನಿರ್ದೇಶಕರು, ಅಧಿಕಾರಿಗಳು, ವಂದಿತಾ ಶರ್ಮಾ ಮೇಡಮ್ ಅವರು, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿರುವಂತಹ ರಿತೇಶ್ ಕುಮಾರ್ ಸಿಂಗ್ ಅವರ ಜೊತೆ ಚರ್ಚೆ ಮಾಡಿದರು. ಅವರು ಬಂದು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದರು. ಮಧು ಬಂಗಾರಪ್ಪ ಸಾಹೇಬರು ಸಹ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದರು. ಈ ವಿಷಯವಾಗಿ ಚರ್ಚೆ ನಡೆಯಿತು. ಶಿಕ್ಷಣ ಇಲಾಖೆಯ ಆಯುಕ್ತರಾದ ಬಿ ಬಿ ಕಾವೇರಿ ಮೇಡಂ ಅವರು ಕೂಡ ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದರು. ಅಂತಿಮವಾಗಿ ಎಲ್ಲಾ ಅಧಿಕಾರಿಗಳು ಈ ವಿಷಯವಾಗಿ ಬಿಸಿ ಬಿಸಿ ಚರ್ಚೆ ಮಾಡಿದರು.
ಕರ್ನಾಟಕ ರಾಜ್ಯೋತ್ಸವದ 50ನೇ ಸಂಭ್ರಮದ ಭಾಷಣಕ್ಕೆ ಬಂದು ನಿಂತ, ಮಾನ್ಯ ಮುಖ್ಯಮಂತ್ರಿಗಳು, ಕರುನಾಡ ದೊರೆ, ಕನ್ನಡಿಗರ ಮುದ್ದು ರಾಮಯ್ಯ ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಶ್ರಮಿಸುವ ಸಿದ್ದರಾಮಯ್ಯನವರು ತಮ್ಮ ಎಂದಿನ ದಾಟಿಯಲ್ಲಿ ಭಾಷಣ ಪ್ರಾರಂಭಿಸಿದರು.
ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಎಲ್ಲರೂ ಕನ್ನಡದಲ್ಲಿ ವ್ಯವಹರಿಸಬೇಕೆಂದು ಹೇಳುತ್ತಾ ರಾಜ್ಯದಲ್ಲಿ ಎಲ್ಲರೂ ಕನ್ನಡ ಮಾಧ್ಯಮದಲ್ಲೇ ಕಲಿಯಬೇಕು, ಸರ್ಕಾರಿ ಶಾಲೆಗಳು ಬೆಳೆಯಬೇಕು, ಸರ್ಕಾರಿ ಶಾಲೆಗಳನ್ನು ಸಬಲೀಕರಣ ಮಾಡಬೇಕೆಂದು ಹೇಳಿದರು.
ಭಾಷಣ ಮುಂದುವರಿಸುತ್ತಾ, ಇದೀಗ ಸಂಘದವರು ನನಗೆ ಒಂದು ಚೀಟಿಯನ್ನು ನೀಡಿದ್ದಾರೆ, ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಹಾಗೂ ಕುಡಿಯುವ ನೀರನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ. ಇಂದಿನಿಂದಲೇ ಆದೇಶವನ್ನು ಜಾರಿ ಗೊಳಿಸುತ್ತೇನೆ. ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಹಾಗೂ ಕುಡಿಯುವ ನೀರನ್ನು ಕೊಡುವಂತಹ ತೀರ್ಮಾನವನ್ನು ಮಾಡಿದ್ದೇವೆಂದು ಘೋಷಣೆಯನ್ನು ಮಾಡಿದರು.
ನಿಜವಾಗಲೂ 50ರ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಸರ್ಕಾರಿ ಶಾಲೆಗಳ ಇತಿಹಾಸದಲ್ಲೇ ಇದೊಂದು ದಾಖಲಾರ್ಹ ವಿಚಾರ. ಆದರೆ ಇವತ್ತು ನಡೆದಿತ್ತು ಕನಸು ನನಸೋ ಗೊತ್ತಿಲ್ಲ. ಒಂದು ಚೀಟಿಯನ್ನು ನೀಡಿದಾಗ ಇಂತಹ ಐತಿಹಾಸಿಕ ಘೋಷಣೆಯನ್ನು ಮಾಡಿದ್ದಾರೆ.
ನನಗೆ ನೆನಪಿದೆ, ನಾನು ಸೇವೆ ಸಲ್ಲಿಸುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿ ನಗರ ಈ ಶಾಲೆಯಲ್ಲಿ 40,000ರಿಂದ 50,000 ಕರೆಂಟ್ ಬಿಲ್ ಕಟ್ಟುವ ಸಂದರ್ಭ ನೋಡಿದ್ದೇವೆ. ಅಭಿನಂದನೆಗಳು ಸರ್ ಕೃತಜ್ಞತೆಗಳು ಸರ್.
ಮುಖ್ಯ ಮಂತ್ರಿಗಳು ಚೀಟಿಯನ್ನು ನೀಡಿದರೆ ಕೆಲಸ ಮಾಡುತ್ತಾರೆಂಬ ಎಂದೋ ಕೇಳಿದ ಮಾತು ಇಂದು ನಿಜವಾಗಿದೆ. ಸರ್ಕಾರಿ ಶಾಲೆಗಳ ಮೇಲೆ ತಮಗಿರುವಂತಹ ಅಭಿಮಾನಕ್ಕಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರ ಪಾಲಕರ ಮಕ್ಕಳ ಬಹು ವರ್ಷಗಳ ಕನಸನ್ನು ನನಸು ಮಾಡಿದ್ದೀರಿ. ಸರ್ಕಾರಿ ಶಾಲೆಗಳಿಗೆ ಉಚಿತ ಕುಡಿಯುವ ನೀರು ಹಾಗೂ ವಿದ್ಯುತ್ತನ್ನು ಘೋಷಣೆ ಮಾಡಿ ವಿದ್ಯಾ ಜ್ಯೋತಿ ಯೋಜನೆಯ ಮೂಲಕ ಸರ್ಕಾರಿ ಶಾಲೆಗಳಲ್ಲಿ ಜ್ಞಾನಜ್ಯೋತಿಗೆ ಸಹಕರಿಸಿದ ತಮಗೆ ಮತ್ತೊಮ್ಮೆ ತುಂಬು ಹೃದಯದ ಅಭಿನಂದನೆಗಳು ಕೃತಜ್ಞತೆಗಳು.
ಕಾರ್ಯಕ್ರಮದಲ್ಲಿ ಉಚಿತ ವಿದ್ಯುತ್ ಹಾಗೂ ನೀರನ್ನು ಘೋಷಣೆ ಮಾಡಿ ಹೊರಗೆ ಬಂದ ಮುಖ್ಯಮಂತ್ರಿಗಳಿಗೆ ತಲೆಬಾಗಿ ನಮಸ್ಕರಿಸಿ, ʻʻಸರ್ 50ನೇ ವರ್ಷದ ಕರ್ನಾಟಕ ರಾಜ್ಯೋತ್ಸವದ ಈ ಸಂದರ್ಭದಲ್ಲಿ ತಾವು ಐತಿಹಾಸಿಕ ಘೋಷಣೆಯನ್ನು ಮಾಡಿದ್ದೀರಿ ಸರ್, ತಮಗೆ ಸಮಸ್ತ ರಾಜ್ಯದ ಶಿಕ್ಷಕರು ಪಾಲಕರು ಪೋಷಕರ ಪರವಾಗಿ ತುಂಬು ಹೃದಯದ ಕೃತಜ್ಞತೆಗಳುʼʼ ಎಂದು ಹೇಳಿದೆ. ಬಹುಶಃ ಅದೊಂದು ಕ್ಷಣ ನನ್ನಲ್ಲಿ ಸಾರ್ಥಕ ಭಾವ ಮೂಡಿತು.
ಅಧಿಕಾರಿಗಳು ನನಗೆ ದೂರವಾಣಿ ಕರೆ ಮಾಡಿ, ʻʻಎಂತಹ ಪುಣ್ಯದ ಕೆಲಸ ಮಾಡಿದ್ದೀಯಪ್ಪʼʼ ಎಂದರು. ಸಿದ್ದರಾಮಯ್ಯನವರಿಗೆ ಇವತ್ತೇ ಚೀಟಿ ಕೊಟ್ಟು ಇವತ್ತೇ ಘೋಷಣೆ ಮಾಡಿಸಿ ಬಿಟ್ಟಿಯಲ್ಲ ಎಂದು ಹೇಳಿದರು.
ನಿಜವಾಗಲೂ ಇವತ್ತಿನ ದಿನ ಸಾರ್ಥಕ ದಿನ ಇನ್ನು ತಲೆಮಾರುಗಳ ವರೆಗೆ ಈ ರಾಜ್ಯದ ಸರ್ಕಾರಿ ಶಾಲೆಗಳಿಗೆ ಉಚಿತ ಕುಡಿಯುವ ನೀರು ಹಾಗೂ ವಿದ್ಯುತ್ ದೊರೆಯುತ್ತದೆ. ಇದಕ್ಕೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೇ ಕಾರಣ. ಸರ್ಕಾರಿ ಶಾಲೆಗಳು ಉಳಿಯಲಿ ಬೆಳೆಯಲಿ ಎಂದು ಆಶಿಸುತ್ತೇನೆ.