ರಾಯಚೂರು: ನಮ್ಮದೊಂದು ಸ್ವಂತ ಸೂರು, ಇಲ್ಲ ಚಿಕ್ಕದಾದ ಭೂಮಿ ಇರಬೇಕೆಂದು ಹಲವರ ಕನಸಾಗಿರುತ್ತದೆ. ಕೆಲವರು ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಆದರೆ ರಾಯಚೂರು (Raichur News) ನಗರದ ವಾರ್ಡ್-28 ರ ಆಶ್ರಯ ಕಾಲೋನಿ ಬೆಟ್ಟದಲ್ಲಿ ಫ್ರೀ ಸೈಟ್ ವದಂತಿಗೆ (Free Site) ಕೆಲಸ ಕಾರ್ಯ ಬಿಟ್ಟು ಜನರೆಲ್ಲರೂ ಗುಡ್ದ ಏರಿ ಕುಳಿತ ಘಟನೆ ನಡೆದಿದೆ.
ಕೂಲಿ ಕೆಲಸ ಬಿಟ್ಟು ಸೈಟ್‌ಗಾಗಿ ಜನರು ಹುಡುಕಾಟ ನಡೆಸಿದ್ದಾರೆ. ಊಟ, ನೀರು, ಬಟ್ಟೆ ಸಮೇತ ಬೆಟ್ಟದತ್ತ ಬಂದ ಜನರು ಗುಡ್ಡದಲ್ಲಿ ಕೋಲು ನೆಟ್ಟು ಗುರುತು ಮಾಡಿಕೊಂಡು ಕುಳಿತಿದ್ದಾರೆ. ಬುಧವಾರದಿಂದಲೇ ನಾ ಮುಂದು ತಾ ಮುಂದು ಎಂದು ಜನರು ಬರುತ್ತಿದ್ದು, ಈ ಸುದ್ದಿ ಇನ್ನಷ್ಟು ಹರಿದಾಡಿದ್ದು, ಗುರುವಾರವೂ ಜನ ಜಂಗುಳಿ ಮುಂದುವರಿದಿದೆ.
ನಗರಸಭೆ ಸದಸ್ಯ ಸೈಟ್ ಕೊಡಿಸುತ್ತಾರೆ ಎಂಬ ಗುಮಾನಿ ಹಬ್ಬಿದೆ. ಸಾವಿರಾರು ಜನರು ಫ್ರೀ ಸೈಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ಯಾರು ಫ್ರೀ ಸೈಟ್ ಕೊಡುತ್ತಾರೆ ಎಂದು ಯಾರಿಗೂ ತಿಳಿದಿಲ್ಲ. ಬೆಟ್ಟ ಹಾಗೂ ಬೆಟ್ಟದ ಸುತ್ತಮುತ್ತ ಒಬ್ಬರನ್ನು ಕಂಡು ಮತ್ತೊಬ್ಬರು ಬೆಟ್ಟದ ಜಾಗವನ್ನು ಕಬ್ಜಾ ಮಾಡಿಕೊಂಡಿದ್ದಾರೆ.
ಮಾತ್ರವಲ್ಲ, ಈ ಜಾಗ ನಮ್ಮದೆಂದು ಕಟ್ಟಿಗೆ, ಕೋಲುಗಳನ್ನು ನೆಟ್ಟು, ಸೀರೆ ತುಂಡು ಕಟ್ಟಿ ಜಾಗ ಗುರುತು ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳು, ವೃದ್ಧರು ಸೇರಿ ಇಡೀ ಕುಟುಂಬವೇ ಬೆಟ್ಟದಲ್ಲಿ ಠಿಕಾಣಿ ಹಾಕಿದೆ. ಬೆಳಗಿನಿಂದ ಸಂಜೆವರೆಗೂ ಸೈಟ್‌ಗಾಗಿ ಹುಡುಕಾಟ ನಡೆಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ