ವಿಜಯನಗರ: ಜು.9 ರಿಂದ 16 ರವರೆಗೆ ವಿಶ್ವವಿಖ್ಯಾತ ಹಂಪಿಯಲ್ಲಿ (Hampi) ನಡೆಯಲಿರುವ ಜಿ-20 ಶೃಂಗಸಭೆ (G-20 summit) ಎರಡು ಹಂತದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ವಿವಿಧ ರಾಷ್ಟ್ರಗಳ ಅತ್ಯುನ್ನತ ಮಟ್ಟದ ಪ್ರತಿನಿಧಿಗಳು (Delegates) ಪಾಲ್ಗೊಳ್ಳಲಿದ್ದು, ಜಿಲ್ಲಾಡಳಿತದಿಂದ ಅಚ್ಚುಕಟ್ಟಾದ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ. ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರ, ಸಂಸ್ಕೃತಿ ಸಚಿವಾಲಯವು ಜಿ-20 ಸಭೆಯ ಎಲ್ಲ ಉಸ್ತುವಾರಿ ನೋಡಿಕೊಳ್ಳಲಿದೆ. ರಾಜ್ಯ ಪ್ರವಾಸೋದ್ಯಮವು ಜಿ-20ಗೆ ನೋಡಲ್ ಇಲಾಖೆಯಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಜಿಲ್ಲಾಡಳಿತದಿಂದ ಅಗತ್ಯವಿರುವ ಎಲ್ಲ ಮೂಲಭೂತ ಸೌಕರ್ಯ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಮಾಹಿತಿ ನೀಡಿದರು.
ಇದನ್ನೂ ಓದಿ: Rain News : ತುಂಡಾಗಿ ಬಿದ್ದಿದ್ದ ತಂತಿ ತಗುಲಿ ವೃದ್ಧೆ ಸಾವು; ನ್ಯಾಯಕ್ಕಾಗಿ ಶವ ಎತ್ತಲು ಬಿಡದ ರೈತರು
ವಿಶ್ವವಿಖ್ಯಾತ ಹಂಪಿಯಲ್ಲಿ ಜಿ-20 ಸಭೆ ನಡೆಯುವುದರಿಂದ ಇಲ್ಲಿನ ಸಂಸ್ಕೃತಿ, ಉತ್ಪನ್ನ, ಶಿಲ್ಪಕಲೆ ಮತ್ತು ಪ್ರವಾಸಿ ತಾಣಗಳ ಜಾಗತಿಕ ಪರಿಚಯಕ್ಕೆ ಸದಾವಕಾಶ ಲಭಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅತ್ಯುನ್ನತ ಮಟ್ಟದ ಸಭೆ ಯಶಸ್ಸಿಗೆ ಅಗತ್ಯವುಳ್ಳ ಎಲ್ಲ ಮೂಲಭೂತ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಹಂಪಿಯಲ್ಲಿ ಶಾಶ್ವತ ಆದ್ಯತೆಯೊಂದಿಗೆ ಮೂಲಸೌಕರ್ಯ
ಹಂಪಿಯಲ್ಲಿ ಸಭೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜೊತೆಯಲ್ಲಿಯೇ ಪ್ರವಾಸಿಗರ ಅನುಕೂಲಕ್ಕೂ ದೂರದೃಷ್ಟಿ ವಹಿಸಿ ರಸ್ತೆ, ಕುಡಿಯುವ ನೀರು ಸೇರಿದಂತೆ ಇತರ ಮೂಲಸೌಕರ್ಯಗಳು ಶಾಶ್ವತವಾಗಿ ನಿರ್ಮಿಸಲಾಗುತ್ತಿದೆ. ಇದಲ್ಲದೇ ಹಂಪಿ ಸೇರಿದಂತೆ ಸುತ್ತಮುತ್ತಲಿನ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತೆಯನ್ನು 400ಕ್ಕೂ ಹೆಚ್ಚು ಕಾರ್ಮಿಕರ ನೇತೃತ್ವದಲ್ಲಿ ಕೈಗೊಳ್ಳಲಾಗಿದೆ ಎಂದರು.
ಸಭೆ, ಸಾಂಸ್ಕೃತಿಕ ಕಾರ್ಯಕ್ರಮ, ಯೋಗ
ಜು.9 ರಿಂದ 12 ರವರೆಗೆ ಸಾಂಸ್ಕೃತಿಕ ಕಾರ್ಯ ತಂಡಗಳ ಸಭೆ ನಡೆಯಲಿದೆ. ಜು.13 ರಿಂದ 16 ರವರೆಗೆ ಉನ್ನತ ಮಟ್ಟದ ಪ್ರತಿನಿಧಿಗಳ (ಶೆರ್ಪಾ) ಸಭೆ ನಡೆಯಲಿದೆ. ಸಭೆಯನ್ನು ಕಮಲಾಪುರ ಸಮೀಪದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗುತ್ತದೆ. ಸಭೆಯ ನಂತರ ಆಗಮಿಸಿರುವ ಜಿ-20 ಪ್ರತಿನಿಧಿಗಳಿಗೆ ಸಾಂಸ್ಕೃತಿಕ ಕಲಾ ಪ್ರದರ್ಶನ ಹಾಗೂ ಹಂಪಿ ಪ್ರಮುಖ ಸ್ಮಾರಕಗಳ ದರ್ಶನ ಹಾಗೂ ಸ್ಥಳೀಯ ಸಾಂಪ್ರದಾಯಿಕ ಶುದ್ಧ ಸಾತ್ವಿಕ ಔತಣಕೂಟ ಆಯೋಜಿಸಲಾಗುತ್ತದೆ. ಇದರ ಜತೆಗೆ ಹಂಪಿಯ ಸ್ಮಾರಕದ ಬಳಿ ಯೋಗಾಭ್ಯಾಸ ಹಾಗೂ ತುಂಗಾಭದ್ರಾ ನದಿಯಲ್ಲಿ ಹರಿಗೋಲು ಸವಾರಿ ಆಯೋಜಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ತಿಳಿಸಿದರು.
ಜಿ-20 ಸಭೆಯಲ್ಲಿ ಒಟ್ಟು 52 ಮಂದಿ ಉನ್ನತ ಮಟ್ಟದ ಪ್ರತಿನಿಧಿಗಳು ಸೇರಿದಂತೆ ಒಟ್ಟು 200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: Road Accident: ಬಸ್-ಕ್ರೂಸರ್ ಮುಖಾಮುಖಿ ಡಿಕ್ಕಿ; 8 ಪ್ರಯಾಣಿಕರ ದುರ್ಮರಣ
ಪ್ರವಾಸಿಗರಿಗೆ ಯಾವುದೇ ನಿರ್ಬಂಧವಿಲ್ಲ
ಜಿ-20 ಸಭೆಗಳಿಗೆ ಭಾಗಿಯಾಗಲಿರುವ ಉನ್ನತ ಪ್ರತಿನಿಧಿಗಳು ಸ್ಮಾರಕಗಳಿಗೆ ಭೇಟಿ ನೀಡಲಿರುವ ಸಂದರ್ಭದಲ್ಲಿ ಮಾತ್ರ ಆಯಾ ಸ್ಮಾರಕದ ಪ್ರದೇಶದಲ್ಲಿ ಪ್ರವಾಸಿಗರಿಗೆ ನಿರ್ಬಂಧಿಸಲಾಗುತ್ತದೆ. ಉಳಿದಂತೆ ಹಂಪಿ ವೀಕ್ಷಣೆಗೆ ಪ್ರವಾಸಿಗರಿಗೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
4 ಹೆಚ್ಚುವರಿ ಎಸ್ಪಿ ಸೇರಿದಂತೆ 1074 ಪೊಲೀಸ್ ಸಿಬ್ಬಂದಿ ನಿಯೋಜನೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್. ಮಾತನಾಡಿ, ಹಂಪಿಯಲ್ಲಿ ನಡೆಯುವ ಜಿ-20 ಸಭೆಗಳಿಗೆ ಸಂಬಂಧಿಸಿದಂತೆ ಹಂಪಿ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಟ್ಟು 1,074 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಒಬ್ಬರು ಎಸ್.ಪಿ 4 ಜನ ಹೆಚ್ಚುವರಿ ಎಸ್ಪಿ ಸೇರಿದಂತೆ 9 ಜನ ಡಿವೈಎಸ್ಪಿ, 35 ಜನ ಸಿಪಿಐ, 79 ಜನ ಪಿಎಸ್‌ಐ, 139 ಜನ ಎಎಸ್‌ಐ, 1074 ಜನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು. ಇದರ ಜತೆಗೆ ಗರುಡ, ಬಿಡಿಡಿಎಸ್, ಕ್ಯೂಆರ್‌ಟಿ ತಂಡ ಮತ್ತು 6 ಡಿಎಆರ್ ಮತ್ತು 2 ಕೆಎಸ್‌ಆರ್‌ಪಿ ತುಕಡಿಗಳನ್ನು ಭದ್ರತೆ, ಸುಗಮ ಸಂಚಾರ ಹಾಗೂ ಇತರ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ ಎಂದರು.
ಇದನ್ನೂ ಓದಿ: Rocking Star Yash: ಮಲೇಷ್ಯಾಗೆ ಹಾರಿದ ಯಶ್; ನಟನಿಗೆ ಅದ್ಧೂರಿ ಸ್ವಾಗತ? ಹೋಗಿದ್ದೇಕೆ?
ಭದ್ರತಾ ಹಿತದೃಷ್ಟಿಯಿಂದ ಡ್ರೋನ್ ಹಾರಾಟಕ್ಕೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಭುವನಹಳ್ಳಿ ಭಾಗದಿಂದ ಹಂಪಿ ಪ್ರದೇಶದವರೆಗೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ, ಎಸಿ ಸಿದ್ದರಾಮೇಶ್ವರ ಉಪಸ್ಥಿತರಿದ್ದರು.