Site icon Vistara News

G20 Presidency | ಡಿ.13ರಿಂದ ಬೆಂಗಳೂರಿನಲ್ಲಿ ಜಿ20 ಹಣಕಾಸು ಮತ್ತು ಸೆಂಟ್ರಲ್​ ಬ್ಯಾಂಕ್​ ನಿಯೋಗಿಗಳ ಮೊದಲ ಸಭೆ

G20 Meet In Bengaluru

ಬೆಂಗಳೂರು: ಜಿ 20 ಶೃಂಗದ ಅಧ್ಯಕ್ಷತೆಯನ್ನು ಡಿಸೆಂಬರ್​ 10ರಿಂದ ಭಾರತ ವಹಿಸಿಕೊಂಡಿದೆ. 2023ರ ಸೆಪ್ಟೆಂಬರ್​ ತಿಂಗಳಲ್ಲಿ ಜಿ20 ಶೃಂಗಸಭೆ ಭಾರತದಲ್ಲೇ ನಡೆಯಲಿದ್ದು, ಅದರ ಪೂರ್ವ ತಯಾರಿಗಾಗಿ ದೇಶದ 55ನಗರಗಳಲ್ಲಿ 200ಕ್ಕೂ ಹೆಚ್ಚು ಶೆರ್ಪಾ ಸಭೆಗಳನ್ನು (ಪೂರ್ವ ಸಿದ್ಧತಾ ಸಭೆಗಳು) ಕೇಂದ್ರ ಸರ್ಕಾರ ನಡೆಸಲು ನಿರ್ಧಾರ ಮಾಡಿದೆ. ಇದರ ಭಾಗವಾಗಿ ಬೆಂಗಳೂರಿನಲ್ಲಿ ಡಿಸೆಂಬರ್​ 13ರಿಂದ 15ರವರೆಗೆ, ಮೊದಲ ಹಣಕಾಸು ಮತ್ತು ಸೆಂಟ್ರಲ್​ ಬ್ಯಾಂಕ್​ ನಿಯೋಗಿಗಳ (ಎಫ್​ಸಿಬಿಡಿ) ಸಭೆ ನಡೆಯಲಿದೆ. ಜಿ 20 ಫೈನಾನ್ಸ್​ ಟ್ರ್ಯಾಕ್​​ನ ಕಾರ್ಯಸೂಚಿ ಮೇಲಿನ ಚರ್ಚೆಗಳನ್ನು ಆರಂಭಿಸುವ ಸಲುವಾಗಿ ಈ ಸಭೆ ಹಮ್ಮಿಕೊಳ್ಳಲಾಗಿದ್ದು, ಹಣಕಾಸು ಸಚಿವಾಲಯ ಮತ್ತು ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ಜಂಟಿಯಾಗಿ ಆಯೋಜಿಸಿವೆ.

ಜಿ20 ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್​​ಗಳ ನೇತೃತ್ವದ ಜಿ20 ಫೈನಾನ್ಸ್ ಟ್ರ್ಯಾಕ್ ಬಂಡವಾಳ ಮತ್ತು ಆರ್ಥಿಕ ವಿಷಯಗಳ ಮೇಲೆ ಕೇಂದ್ರೀಕೃತವಾಗಿದೆ. ಇದು ಜಾಗತಿಕ ಆರ್ಥಿಕ ಚರ್ಚೆ ಮತ್ತು ನೀತಿ ಸಮನ್ವಯಕ್ಕೆ ಪರಿಣಾಮಕಾರಿ ವೇದಿಕೆಯನ್ನು ಒದಗಿಸುತ್ತದೆ. 2023ರ ಫೆಬ್ರವರಿ 23ರಿಂದ 25ರವರೆಗೆ ಬೆಂಗಳೂರಿನಲ್ಲಿ, ಹಣಕಾಸು ಸಚಿವರ ಮತ್ತು ಸೆಂಟ್ರಲ್​ ಬ್ಯಾಂಕ್​ ಗವರ್ನರ್​​ಗಳ ಮೊದಲ ಸಭೆ ನಡೆಯಲಿದೆ.

ಈ ವರ್ಷ ನವೆಂಬರ್​​ನಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದಿದ್ದ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿ, ‘ಅಭಿವೃದ್ಧಿಯ ಪ್ರಯೋಜನಗಳು ಸಾರ್ವತ್ರಿಕ ಮತ್ತು ಸರ್ವವ್ಯಾಪಿಯಾಗುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದ್ದರು. ಅದೇ ವಿಚಾರವನ್ನು ಜಿ20 ಫೈನಾನ್ಸ್​ ಟ್ರ್ಯಾಕ್​ ಕಾರ್ಯಸೂಚಿಯಲ್ಲಿ ಹಣಕಾಸು ಸಚಿವಾಲಯವು ಅಳವಡಿಸಿಕೊಂಡಿದೆ. ಜಿ20 ಹಣಕಾಸು ಮತ್ತು ಸೆಂಟ್ರಲ್ ಬ್ಯಾಂಕ್ ನಿಯೋಗಿಗಳ ಮುಂಬರುವ ಸಭೆಯ ಅಧ್ಯಕ್ಷತೆಯನ್ನು ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಅಜಯ್ ಸೇಠ್ ಮತ್ತು ಆರ್​​ಬಿಐ ಡೆಪ್ಯುಟಿ ಗವರ್ನರ್, ಡಾ. ಮೈಕೆಲ್ ಡಿ. ಪಾತ್ರಾ ವಹಿಸಲಿದ್ದಾರೆ.

ಮೂರುದಿನಗಳ ಕಾಲ ನಡೆಯಲಿರುವ ಈ ಸಭೆಯಲ್ಲಿ ಜಿ20 ಸದಸ್ಯ ರಾಷ್ಟ್ರಗಳು ಮತ್ತು ಭಾರತದಿಂದ ಆಹ್ವಾನಿಸಲ್ಪಟ್ಟ ಇತರ ಹಲವು ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಜಾಗತಿಕ ಆರ್ಥಿಕತೆ, ಜಾಗತಿಕ ಆರ್ಥಿಕ ದೃಷ್ಟಿಕೋನ, ಅಂತರಾಷ್ಟ್ರೀಯ ಹಣಕಾಸು ರಚನೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು, ಸುಸ್ಥಿರ ಹಣಕಾಸು, ಜಾಗತಿಕ ಆರೋಗ್ಯ, ಅಂತರಾಷ್ಟ್ರೀಯ ತೆರಿಗೆ ಮತ್ತು ಹಣಕಾಸು ವಲಯದ ಸಮಸ್ಯೆಗಳನ್ನು ಒಳಗೊಂಡ ಜಾಗತಿಕ ಆರ್ಥಿಕತೆಯ ಪ್ರಸ್ತುತ ಪ್ರಮುಖ ವಿಷಯಗಳನ್ನು ಜಿ20 ಫೈನಾನ್ಸ್ ಟ್ರ್ಯಾಕ್ ಚರ್ಚಿಸಲಿದೆ.
 
ಭಾರತದ ಅಧ್ಯಕ್ಷತೆಯ ಬೆಂಗಳೂರಿನ ಸಭೆಯಲ್ಲಿ, ಜಿ20 ಫೈನಾನ್ಸ್ ಟ್ರ್ಯಾಕ್ ನ ಕಾರ್ಯಸೂಚಿಯ ಮೇಲೆ ಚರ್ಚೆಗಳು ನಡೆಯಲಿವೆ.  21 ನೇ ಶತಮಾನದ ಜಾಗತಿಕ ಸವಾಲುಗಳನ್ನು ಎದುರಿಸಲು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳನ್ನು ಪುನರುಜ್ಜೀವಗೊಳಿಸುವುದು, ಭವಿಷ್ಯದ ದಿನಗಳಲ್ಲಿ ಹಣಕಾಸು ಒದಗಿಸುವುದು, ಜಾಗತಿಕ ಸಾಲದ ದೌರ್ಬಲ್ಯಗಳ ನಿರ್ವಹಣೆ, ಹಣಕಾಸು ಅಳವಡಿಕೆ ಮತ್ತು ಉತ್ಪಾದಕತಾ ಲಾಭಗಳ ಮುನ್ನಡೆ, ಹವಾಮಾನ ಕ್ರಮ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಹಣಕಾಸು ಒದಗಿಸುವುದು, ಬೆಂಬಲವಿಲ್ಲದ ಕ್ರಿಪ್ಟೋಗಳಿಗೆ ಜಾಗತಿಕವಾಗಿ ಸಂಘಟಿತ ವಿಧಾನ ಮತ್ತು ಅಂತರಾಷ್ಟ್ರೀಯ ತೆರಿಗೆ ಕಾರ್ಯಸೂಚಿಯನ್ನು ತಯಾರಿಸುವುದು ಇದರಲ್ಲಿ ಸೇರಿದೆ.

ಸಭೆಯ ಜತೆಗೆ, ’21 ನೇ ಶತಮಾನದ ಪಾಲುದಾರಿಕಾ ಜಾಗತಿಕ ಸವಾಲುಗಳನ್ನು ಎದುರಿಸಲು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳ ಪ್ರಬಲಪಡಿಸುವಿಕೆ’ ಎಂಬ ವಿಷಯದ ಬಗ್ಗೆ ಸಮಿತಿ ಚರ್ಚೆ ನಡೆಸಲಿದೆ. ‘ಸೂಕ್ಷ್ಮ ಹಣಕಾಸು ವ್ಯವಸ್ಥೆಯಲ್ಲಿ ಕೇಂದ್ರೀಯ ಬ್ಯಾಂಕುಗಳ ಪಾತ್ರ’ ಕುರಿತ ವಿಚಾರ ಸಂಕಿರಣವೂ ನಡೆಯಲಿದೆ. ಈ ಸಲ ಭಾರತದ ಅಧ್ಯಕ್ಷತೆಯ ಜಿ20 ಫೈನಾನ್ಸ್ ಟ್ರ್ಯಾಕ್ ಅದರ ಧ್ಯೇಯವಾಕ್ಯವಾದ ‘ಒಂದೇ ನೆಲ, ಒಂದೇ ಕುಟುಂಬ, ಒಂದೇ ಭವಿಷ್ಯದ’ ಚರ್ಚೆಗಳಿಗೆ ಮಾರ್ಗದರ್ಶನ ನೀಡಲಿದೆ. ಫೈನಾನ್ಸ್ ಟ್ರ್ಯಾಕ್ ನ ಸುಮಾರು 40 ಸಭೆಗಳು ಭಾರತದ ಹಲವಾರು ಸ್ಥಳಗಳಲ್ಲಿ ನಡೆಯಲಿವೆ. ಇದರಲ್ಲಿ ಜಿ20 ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್​​ಗಳ ಸಭೆಗಳೂ ಸೇರಿವೆ. ಜಿ20 ಫೈನಾನ್ಸ್ ಟ್ರ್ಯಾಕ್ ನಲ್ಲಿನ ಚರ್ಚೆಗಳು ಅಂತಿಮವಾಗಿ ಜಿ20 ನಾಯಕರ ಘೋಷಣೆಯಲ್ಲಿ ಪ್ರತಿಬಿಂಬಿತವಾಗಲಿವೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾದ ನೋವು, ತೀಕ್ಷ್ಣವಾದ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ಹೆಚ್ಚುತ್ತಿರುವ ಆಹಾರ ಮತ್ತು ಇಂಧನ ಭದ್ರತಾ ಕಳವಳಗಳು, ಹೆಚ್ಚುತ್ತಿರುವ ಸಾಲದ ಸಂಕಷ್ಟ, ಹಣದುಬ್ಬರದ ಒತ್ತಡಗಳು ಮತ್ತು ವಿತ್ತೀಯ ಹಿಡಿತ ಸೇರಿದಂತೆ ಅನೇಕ ಸವಾಲುಗಳ ಸಮಯದಲ್ಲಿ ಭಾರತವು ಜಿ20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದು, ಅಂತಹ ಸವಾಲುಗಳನ್ನು ಎದುರಿಸಲು ಮಾರ್ಗದರ್ಶನ ನೀಡುವುದು ಜಿ20 ರ ಪ್ರಮುಖ ಪಾತ್ರವಾಗಿದೆ. ಹೆಚ್ಚು ಅಗತ್ಯವಿರುವ ದೇಶಗಳನ್ನು ಬೆಂಬಲಿಸುವುದು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಕಾಳಜಿಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವುದು ಜಿ 20ರ ಪ್ರಯತ್ನಗಳ ಮುಂಚೂಣಿಯಲ್ಲಿರುತ್ತದೆ.

ಇದನ್ನೂ ಓದಿ: G20 Presidency | ಭಾರತದ ಜಿ20 ಕಾರುಬಾರು ಶುರು, ವಾರ ಕಾಲ ಬೆಳಗಲಿವೆ 100 ಪಾರಂಪರಿಕ ತಾಣಗಳು!

Exit mobile version