Site icon Vistara News

G20 Presidency | ಜಿ 20 ಶೃಂಗ ಸಭೆಗೆ ಬಂದ ಗಣ್ಯರಿಗೆ ಸಾಂಪ್ರದಾಯಿಕ ಸ್ವಾಗತ, ಕಪ್ಪುಪಟ್ಟಿ ಪ್ರದರ್ಶಿಸಲು ಬಂದ ರೈತರಿಗೆ ತಡೆ

G20

ಬೆಂಗಳೂರು: 2023ರ ಸೆಪ್ಟೆಂಬರ್​ ತಿಂಗಳಲ್ಲಿ ದೇಶದಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಪೂರ್ವಭಾವಿಯಾಗಿ ದೇವನಹಳ್ಳಿಯಲ್ಲಿ ಆಯೋಜನೆಯಾಗಿರುವ ಪೂರ್ವಭಾವಿ ಸಭೆಗೆ (G20 Presidency) ಆಗಮಿಸುತ್ತಿರುವ ಗಣ್ಯಾತಿಗಣ್ಯರಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಗಿದೆ. ಗಣ್ಯರಿಗೆ ಆನೆಗಳ ಮೂಲಕ ಸ್ವಾಗತ ನೀಡಿದ್ದು ಮಾತ್ರವಲ್ಲದೆ, ಯಕ್ಷಗಾನದ ವೇಷಗಳ ಕುಣಿತದೊಂದಿಗೆ ಬರಮಾಡಿಕೊಳ್ಳಲಾಯಿತು. ಬಂದವರಿಗೆ ಸಾಂಪ್ರದಾಯಿಕ ಶಾಲು, ಪೇಟ ತೊಡಿಸಿ ಖುಷಿಪಡಿಸಲಾಯಿತು.

ಶೃಂಗ ಸಭೆಯ ಪೂರ್ವ ತಯಾರಿಗಾಗಿ ದೇಶದ 55 ನಗರಗಳಲ್ಲಿ 200ಕ್ಕೂ ಹೆಚ್ಚು ಶೆರ್ಪಾ ಸಭೆಗಳನ್ನು (ಪೂರ್ವ ಸಿದ್ಧತಾ ಸಭೆಗಳು) ಕೇಂದ್ರ ಸರ್ಕಾರ ನಡೆಸಲು ನಿರ್ಧಾರ ಮಾಡಿದ್ದು, ಇದರ ಭಾಗವಾಗಿ ಬೆಂಗಳೂರಿನಲ್ಲಿ ಡಿಸೆಂಬರ್​ 13ರಿಂದ 15ರವರೆಗೆ, ಮೊದಲ ಹಣಕಾಸು ಮತ್ತು ಸೆಂಟ್ರಲ್​ ಬ್ಯಾಂಕ್​ ನಿಯೋಗಿಗಳ (ಎಫ್​ಸಿಬಿಡಿ) ಸಭೆ ನಡೆಯುತ್ತಿದೆ. ಜಿ 20 ಫೈನಾನ್ಸ್​ ಟ್ರ್ಯಾಕ್​​ನ ಕಾರ್ಯಸೂಚಿ ಮೇಲಿನ ಚರ್ಚೆಗಳನ್ನು ಆರಂಭಿಸುವ ಸಲುವಾಗಿ ಈ ಸಭೆ ಹಮ್ಮಿಕೊಳ್ಳಲಾಗಿದ್ದು, ಹಣಕಾಸು ಸಚಿವಾಲಯ ಮತ್ತು ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ಜಂಟಿಯಾಗಿ ಆಯೋಜಿಸಿವೆ.

ಜಿ20 ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್​​ಗಳ ನೇತೃತ್ವದ ಜಿ20 ಫೈನಾನ್ಸ್ ಟ್ರ್ಯಾಕ್ ಬಂಡವಾಳ ಮತ್ತು ಆರ್ಥಿಕ ವಿಷಯಗಳ ಮೇಲೆ ಕೇಂದ್ರೀಕೃತವಾಗಿದೆ. ಇದು ಜಾಗತಿಕ ಆರ್ಥಿಕ ಚರ್ಚೆ ಮತ್ತು ನೀತಿ ಸಮನ್ವಯಕ್ಕೆ ಪರಿಣಾಮಕಾರಿ ವೇದಿಕೆಯನ್ನು ಒದಗಿಸುತ್ತದೆ. 2023ರ ಫೆಬ್ರವರಿ 23ರಿಂದ 25ರವರೆಗೆ ಬೆಂಗಳೂರಿನಲ್ಲಿ, ಹಣಕಾಸು ಸಚಿವರ ಮತ್ತು ಸೆಂಟ್ರಲ್​ ಬ್ಯಾಂಕ್​ ಗವರ್ನರ್​​ಗಳ ಮೊದಲ ಸಭೆ ನಡೆಯಲಿದೆ. ಅದೆಲ್ಲದರ ಪೂರ್ವ ಸಿದ್ಧತೆ ಈ ಸಮಾವೇಶದಲ್ಲಿ ನಡೆಯುತ್ತಿದೆ.

ಯಾರ ನೇತೃತ್ವದಲ್ಲಿ ಸಭೆ?
ಜಿ20 ಹಣಕಾಸು ಮತ್ತು ಸೆಂಟ್ರಲ್ ಬ್ಯಾಂಕ್ ನಿಯೋಗಿಗಳ ಮುಂಬರುವ ಸಭೆಯ ಅಧ್ಯಕ್ಷತೆಯನ್ನು ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಅಜಯ್ ಸೇಠ್ ಮತ್ತು ಆರ್​​ಬಿಐ ಡೆಪ್ಯುಟಿ ಗವರ್ನರ್, ಡಾ. ಮೈಕೆಲ್ ಡಿ. ಪಾತ್ರಾ ವಹಿಸಲಿದ್ದಾರೆ. ಮೂರುದಿನಗಳ ಕಾಲ ನಡೆಯಲಿರುವ ಈ ಸಭೆಯಲ್ಲಿ ಜಿ20 ಸದಸ್ಯ ರಾಷ್ಟ್ರಗಳು ಮತ್ತು ಭಾರತದಿಂದ ಆಹ್ವಾನಿಸಲ್ಪಟ್ಟ ಇತರ ಹಲವು ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಪ್ರತಿಭಟನೆ ನಡೆಸಲು ಬಂದ ರೈತರಿಗ ತಡೆ

ಕುರುಬೂರು ನೇತೃತ್ವದ ರೈತರ ತಂಡಕ್ಕೆ ಪೊಲೀಸರ ತಡೆ
ಶೃಂಗಸಭೆ ನಡೆಯುತಿರುವ ಹೋಟೆಲ್‌ ಬಳಿ ಕಪ್ಪುಪಟ್ಟಿ ಪ್ರದರ್ಶನ ಮಾಡಲು ಬರುತ್ತಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಲವರನ್ನು ಹೋಟೆಲ್‌ ಬಳಿ ತಡೆದರೆ, ಯಲಹಂಕ ಬಳಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ಸೇರಿದಂತೆ ಕೆಲವರನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ | G20 Presidency | ಡಿ.13ರಿಂದ ಬೆಂಗಳೂರಿನಲ್ಲಿ ಜಿ20 ಹಣಕಾಸು ಮತ್ತು ಸೆಂಟ್ರಲ್​ ಬ್ಯಾಂಕ್​ ನಿಯೋಗಿಗಳ ಮೊದಲ ಸಭೆ

Exit mobile version