ಗದಗ: ತಾಲೂಕಿನ ತಗಡೂರು ಹಾಗೂ ಹೊಂಬಳ ಗ್ರಾಮದ ಬಳಿ ಚಲಿಸುತ್ತಿದ್ದ ಸಾರಿಗೆ ಬಸ್‌ನ (Gadag Bus) ಚಕ್ರ ಕಳಚಿಕೊಂಡು ಬಿದ್ದಿದೆ. ಇದರಿಂದಾಗಿ ವಿದ್ಯಾರ್ಥಿಗಳು ಸೇರಿ ಬಸ್‌ನಲ್ಲಿದ್ದ 50ಕ್ಕೂ ಅಧಿಕ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.
ಗದಗದಿಂದ ನರಗುಂದದ ಕಡೆ ಹೊರಟಿದ್ದ ವಾಯವ್ಯ ಕರ್ನಾಟಕ ಸಾರಿಗೆ ನಿಮಗದ ಬಸ್‌ನ ಹಿಂದಿನ ಚಕ್ರ ಕಳಚಿ ಬಿದ್ದಿದೆ. ಗದಗ ಡಿಪೋಗೆ ಸೇರಿದ ಬಸ್‌ನ ಚಕ್ರ ಕಳಚಿದ್ದು, ಅದೃಷ್ಟವಶಾತ್ ಯಾರಿಗೂ ಪ್ರಾಣಹಾನಿ, ಗಾಯ ಆಗಿಲ್ಲ. ಬಸ್ ಚಲಿಸುವಾಗಲೇ ಹಿಂದಿನ ಚಕ್ರ ಕಳಚಿ ಬಿದ್ದಿದ್ದು, ಬಸ್ ಚಾಲಕನು ಕೂಡಲೇ ಬಸ್ ನಿಲ್ಲಿಸಿದ ಕಾರಣ ಅಪಘಾತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಕಾಲೇಜು ವಿದ್ಯಾರ್ಥಿಗಳು ಸೇರಿ 50ಕ್ಕೂ ಅಧಿಕ ಜನ ಬಸ್‌ನಲ್ಲಿ ಸಂಚರಿಸುತ್ತಿದ್ದರು. ಚಾಲಕನು ಏಕಾಏಕಿ ಬ್ರೇಕ್ ಹಾಕಿದ ಕಾರಣ ಜನ ಗಲಿಬಿಲಿಗೊಂಡರು. ಕೂಡಲೇ ಕೆಳಗಿಳಿದು ನೋಡಿದಾಗ ಬಸ್ ಚಕ್ರ ಬಿದ್ದಿದ್ದನ್ನು ಕಂಡು ಮತ್ತಷ್ಟು ಗಾಬರಿಗೊಂಡರು. ಅಬ್ಬಾ ಯಾವುದೇ ಅಪಾಯ ಎದುರಾಗಲಿಲ್ಲ ಎಂದು ನಿಟ್ಟುಸಿರುಬಿಟ್ಟರು.
ಇದನ್ನೂ ಓದಿ: KILLER BMTC : ಬಿಎಂಟಿಸಿ ಬಸ್ ಹರಿದು ದುರಂತ; ಅಪ್ಪನೊಂದಿಗೆ ಶಾಲೆಗೆ ಹೋಗುತ್ತಿದ್ದ ಪುಟ್ಟ ಮಗು ಸಾವು
ಶಕ್ತಿ ಯೋಜನೆಯನ್ನು ದೂರಿದ ಜನ
ಹೆಣ್ಣುಮಕ್ಕಳಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಸೌಲಭ್ಯ ನೀಡುವ ಶಕ್ತಿ ಯೋಜನೆಯಿಂದಾಗಿ ಸಾರಿಗೆ ಬಸ್‌ಗಳು ಇಂತಹ ದುಸ್ಥಿತಿ ತಲುಪಿವೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಬಸ್‌ಗಳಲ್ಲಿ ಹೆಚ್ಚಿನ ಜನ ಪ್ರಯಾಣಿಸುತ್ತಿದ್ದಾರೆ. ಇದರಿಂದಾಗಿ ಬಸ್‌ಗಳು ಹಾಳಾಗುತ್ತಿವೆ. ಬಸ್‌ಗಳ ಸರಿಯಾದ ನಿರ್ವಹಣೆಯೂ ಇಂತಹ ಪರಿಸ್ಥಿತಿ ಎದುರಾಗಲು ಕಾರಣವಾಗಿದೆ. ಮಾರ್ಗ ಮಧ್ಯದಲ್ಲೇ ಹೆಚ್ಚಿನ ಬಸ್‌ಗಳು ಕೆಟ್ಟುನಿಲ್ಲುತ್ತಿವೆ ಎಂದು ದೂರಿದ್ದಾರೆ.