Site icon Vistara News

Gadag News: ಮದುವಣಗಿತ್ತಿಯಂತೆ ಬಸ್ ಸಿಂಗರಿಸಿ, ಕನ್ನಡಾಭಿಮಾನ ಮೆರೆದ ಚಾಲಕ

he bus was attractively decorated with yellow and red flowers by the Kannada abhimani

ಗದಗ: ಕೆಎಸ್‌ಆರ್‌ಟಿಸಿ (KSRTC) ಮುಂಡರಗಿ ಡಿಪೊ ಬಸ್‌ವೊಂದರ (Bus) ಚಾಲಕ, ಕರ್ನಾಟಕ ರಾಜ್ಯೋತ್ಸವದ (Karnataka Rajyotsava) ಅಂಗವಾಗಿ ಬುಧವಾರ ಸಾರಿಗೆ ಬಸ್‌ನ್ನು ಹಳದಿ-ಕೆಂಪು ಬಣ್ಣಗಳ ಹೂಗಳಿಂದ ಮದುವಣಗಿತ್ತಿಯಂತೆ ಸಿಂಗರಿಸಿ, ಕನ್ನಡಮಯವಾಗಿಸುವ ಮೂಲಕ ತನ್ನ ಕನ್ನಡಾಭಿಮಾನ ಮೆರೆದಿದ್ದಾನೆ.

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಸಾರಿಗೆ ಸಂಸ್ಥೆಯ ಡಿಪೊಗೆ ಸೇರಿದ ಕೆಎ-42,ಎಫ್ -1602 ಸಂಖ್ಯೆಯ ಬಸ್ ನ್ನು ಮುಂಡರಗಿ ಡಿಪೊದ ಚಾಲಕ ಈರಣ್ಣ ಮೇಟಿ ಎನ್ನುವವರು ತನ್ನ ಸ್ವಂತ ಖರ್ಚಿನಲ್ಲಿ ಒಂದು ಲಕ್ಷಕ್ಕೂ ಅಧಿಕ ಹಣದಲ್ಲಿ ಬೆಂಗಳೂರಿನಿಂದ ಹಳದಿ ಬಣ್ಣದ ಸೇವಂತಿ ಹಾಗೂ ಕೆಂಪು ಬಣ್ಣದ ಗುಲಾಬಿ ಹೂವುಗಳನ್ನು ತರಿಸಿ ಸಂಪೂರ್ಣ ಬಸ್ಸಿನ ಹೊರಭಾಗ ಹಾಗೂ ಒಳಗಡೆ ಅತ್ಯಾಕರ್ಷಕವಾಗಿ ಅಲಂಕರಿಸಿದ್ದಾನೆ.

ಜತೆಗೆ ಬಸ್ಸಿನ ಮುಂಭಾಗದಲ್ಲಿ ಸಿಂಹ ವಾಹನದ ಪೀಠದ ಮೇಲೆ ನಾಡದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಸಾಕ್ಷಾತ್ ಆನೆಯ ಮೇಲಿನ ಅಂಬಾರಿ ರೀತಿಯಲ್ಲಿ ನಾಡದೇವತೆ ಮೆರವಣಿಗೆಯಂತೆ ಸಾರಿಗೆ ಸಂಸ್ಥೆಯ ಬಸ್ಸಿನ ಮೆರವಣಿಗೆ ನಡೆಸಲಾಗಿದೆ.

ಇದನ್ನೂ ಓದಿ: GST Collection: ಅಕ್ಟೋಬರ್‌ನಲ್ಲಿ ದಾಖಲೆಯ 1.72 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ!

ಮುಂಡರಗಿ ಪಟ್ಟಣದ ಡಿಪೋದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಸ್ಸಿನ ಅದ್ಧೂರಿ ಮೆರವಣಿಗೆ ಮಾಡಲಾಗಿದ್ದು, ಬಸ್ಸಿನ ಎದುರು, ಹಿರೇವಡ್ಡಟ್ಟಿ ಗ್ರಾಮದ ಯುವಕರ ತಂಡದ ಕೋಲಾಟ ಹಾಗೂ ಬೆಣ್ಣೆಹಳ್ಳಿಯ ಡಿಜೆ ಸೌಂಡ್ಸ್ ಕುಣಿತ ಬಸ್ಸಿನ ಮೆರವಣಿಗೆಯನ್ನು ಮತ್ತಷ್ಟು ಮೆರುಗುಗೊಳಿಸಿತು.

ಹೂವುಗಳಿಂದ ಬಸ್‌ನ್ನು ಅಲಂಕರಿಸಿರುವುದು.

ಇನ್ನು ಚಾಲಕನಿಗೆ ಆತನ ಸ್ನೇಹಿತರು, ಸಂಸ್ಥೆಯ ಸಿಬ್ಬಂದಿ, ಹಾರೋಗೇರಿ ಗೆಳೆಯರ ಬಳಗ ಹಾಗೂ ಸಂಸ್ಥೆಯ ಕಾರ್ಮಿಕ ಬಳಗ ಸೇರಿದಂತೆ ಹಲವರು ಈತನ ಕನ್ನಡಾಭಿಮಾನದ ಕಾರ್ಯಕ್ಕೆ ಕೈ ಜೋಡಿಸಿದ್ದು, 25 ಸಾವಿರ ರೂ ಹಣ ಸಹಾಯ ಮಾಡಿದ್ದಾರೆ. ಕೋಲಾಟ ತಂಡದ ಯುವಕರಿಗೆ ಮೆರವಣಿಗೆ ಹಾಗೂ ಬಸ್ಸಿನ ಅಲಂಕಾರಕ್ಕೆ ಸಹಕಾರ ನೀಡಿದ್ದಕ್ಕೆ, ಚಾಲಕ ಈರಣ್ಣ ಮೇಟಿ, ತಂಡದ ಯುವಕರಿಗೆ ಟೀ ಶರ್ಟ್‌ ಹಾಗೂ ಗ್ರಾಮದಲ್ಲಿನ ಬಸವೇಶ್ವರ ದೇವಸ್ಥಾನದ ಪ್ರಸಾದ ವ್ಯವಸ್ಥೆಗೆ ಬೃಹತ್ ಪಾತ್ರೆಯೊಂದನ್ನು ದೇಣಿಗೆ ನೀಡಿದ್ದಾನೆ.

ಬೆಳಿಗ್ಗೆ ಮೆರವಣಿಗೆ ಕೈಗೊಂಡ ಚಾಲಕ, ಬಸ್ಸಿನ ಒಳಗೆ ಧ್ವನಿವರ್ಧಕದ ಮೂಲಕ, ಕನ್ನಡದ ಹಾಡುಗಳನ್ನು ಪ್ರಯಾಣಿಕರಿಗೆ ಕೇಳಿಸುತ್ತಾ, ಗದಗ-ಮುಂಡರಗಿ ಹಾಗೂ ಶಿರಹಟ್ಟಿ ಮಾರ್ಗವಾಗಿ ತಮ್ಮ ಕರ್ತವ್ಯ ಮುಂದುವರೆಸಿದ್ದಾರೆ.

ಇದನ್ನೂ ಓದಿ: Uttara Kannada News: ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆ ಬೇಕಿದೆ ಎಂಬ ಬ್ಯಾನರ್‌ ಪ್ರದರ್ಶಿಸಿದ ವಿದ್ಯಾರ್ಥಿಗಳು

ಚಾಲಕನ ಕನ್ನಡ ಪ್ರೇಮಕ್ಕೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ವ್ಯಾಪಕ‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡ ರಾಜ್ಯೋತ್ಸವ ಹಬ್ಬವನ್ನು ನಮ್ಮ ಮನೆಯ ಹಬ್ಬವಂತೆ ಮಾಡುವ ಕನಸು ನನ್ನದು. ಹೀಗಾಗಿ ಪ್ರತಿವರ್ಷ ಈ ಹಬ್ಬವನ್ನು ಎಲ್ಲರ ಜತೆ ಸಹಕಾರ ತೆಗೆದುಕೊಂಡು ನನ್ನ ಕುಟುಂಬದ ಹಬ್ಬವಂತೆ ಆಚರಿಸುತ್ತೇನೆ. ನಾಡಿನ ಜನತೆಯೂ ಕೂಡ ಈ ಹಬ್ಬವನ್ನು ಮನೆ ಹಬ್ಬವಂತೆ ಆಚರಿಸಬೇಕು ಎಂದು ಚಾಲಕ ಈರಣ್ಣ ಮೇಟಿ ತಿಳಿಸಿದ್ದಾರೆ.

Exit mobile version