ಗದಗ: ನಗರದ ಶಿವಾನಂದ ಮಠದ ಪೀಠಾಧಿಪತಿ ನೇಮಕ ವಿವಾದಕ್ಕೆ ಸದ್ಯ ತಾತ್ಕಾಲಿಕ ತೆರೆ ಬಿದ್ದಿದೆ. ಕಿರಿಯ ಶ್ರೀಗಳನ್ನು ಹೊರಗಿಟ್ಟು ಹಿರಿಯ ಶ್ರೀಗಳು ಜಾತ್ರೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಇದು ಕಿರಿಯ ಶ್ರೀಗಳು ಹಾಗೂ ಅವರ ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಕೋರ್ಟ್ ಆದೇಶದಂತೆ ಕಿರಿಯ ಶ್ರೀಗಳ ಜತೆಗೂಡಿಯೇ ಜಾತ್ರೆ ಮಾಡಬೇಕು ಎಂದು ಭಕ್ತರು ಆಗ್ರಹಿಸಿದ್ದರು. ಹೀಗಾಗಿ ಇಬ್ಬರೂ ಸ್ವಾಮೀಜಿಗಳಿಂದ ಶ್ರೀಮಠದಲ್ಲಿ ಧ್ವಜಾರೋಹಣ ನಡೆದಿದೆ.
ಜಾತ್ರೆ ಪ್ರಯುಕ್ತ ಶ್ರೀಮಠದ ಗದ್ದುಗೆ ಮುಂಭಾಗದಲ್ಲಿ ಹಿರಿಯ ಶ್ರೀ ಅಭಿನವ ಶಿವಾನಂದ ಸ್ವಾಮೀಜಿ ಹಾಗೂ ಕಿರಿಯ ಶ್ರೀ ಸದಾಶಿವಾನಂದ ಭಾರತಿ ಸ್ವಾಮೀಜಿ ಅವರು ಪ್ರಣವ ಧ್ವಜಾರೋಹಣ ಮಾಡಿದ್ದಾರೆ. ಮೊದಲಿಗೆ ಇದಕ್ಕೆ ಒಪ್ಪದೇ ಭಕ್ತರ ಜತೆ ಹಿರಿಯ ಶ್ರೀಗಳು ವಾಗ್ವಾದ ನಡೆಸಿದ್ದರು. ಆದರೆ, ಶುಕ್ರವಾರ ಗದಗ ಎಸ್‌ಪಿ ಬಿ.ಎಸ್.ನೇಮಗೌಡ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಸಂಧಾನ ಮಾಡಲಾಗಿತ್ತು. ಇಬ್ಬರೂ ಸ್ವಾಮಿಜಿಗಳ ಭಕ್ತರೊಂದಿಗೆ ಶಾಂತಿ ಸಭೆ ನಡೆಸಿದ ಪರಿಣಾಮ ಜಾತ್ರಾ ಪ್ರಯುಕ್ತ ಧ್ವಜಾರೋಹಣದಲ್ಲಿ ಇಬ್ಬರೂ ಸ್ವಾಮಿಜಿಗಳು ಹಾಜರಾಗಿದ್ದರು.
ಇದನ್ನೂ ಓದಿ | Raja Marga Column : ಬ್ರಿಟಿಷ್ ವಿಜ್ಞಾನಿಗಳು ವಿಷ ಎಂದು ಕೊಟ್ಟ ದ್ರಾವಣವನ್ನು ಆ ವಿಜ್ಞಾನಿ ಗಟಗಟ ಕುಡಿದಿದ್ದರು!
ಈ ಹಿಂದೆ ಜಗದ್ಗುರು ಶಿವಾನಂದ ಮಠದ ಉತ್ತರಾಧಿಕಾರಿಯನ್ನು ಪದಚ್ಯುತಿಗೊಳಿಸಿದ ಹಿನ್ನೆಲೆಯಲ್ಲಿ ಶ್ರೀಮಠದ ಮೊದಲ ಹಿರಿಯ ಪೀಠಾಧಿಪತಿ ಶ್ರೀ ಅಭಿನವ ಶಿವಾನಂದ ಮಹಾಸ್ವಾಮೀಜಿ ವಿರುದ್ಧ ಪದಚ್ಯುತಗೊಂಡ ಉತ್ತರಾಧಿಕಾರಿ ಸದಾಶಿವಾನಂದ ಭಾರತಿ ಸ್ವಾಮೀಜಿ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
2018ರ ಮೇ 25ರಂದು ಮಠದ ಉತ್ತರಾಧಿಕಾರಿಯಾಗಿ ಸದಾಶಿವಾನಂದ ಭಾರತಿ ಸ್ವಾಮೀಜಿ(30) (ಮೂಲ ಹೆಸರು ಘೋಡಗೇರಿಯ ಕೈವಲ್ಯಾನಂದ ಗುರು ಮಲ್ಲಯ್ಯಸ್ವಾಮಿ) ಅವರನ್ನು ನೇಮಿಸಲಾಗಿತ್ತು. ಆದರೆ ಮಠದ ಹಿರಿಯ ಪೀಠಾಧಿಪತಿ ಅಭಿನವ ಶಿವಾನಂದ ಮಹಾಸ್ವಾಮೀಜಿ ಅವರು, ಸದಾಶಿವಾನಂದ ಭಾರತಿ ಸ್ವಾಮೀಜಿ ಅವರನ್ನು ಉತ್ತರಾಧಿಕಾರಿ ಸ್ಥಾನದಿಂದ ಪದಚ್ಯುತಗೊಳಿಸಿದ್ದರು. ಹೀಗಾಗಿ ಕಿರಿಯ ಶ್ರೀಗಳ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದರು.
ಹಲವು ವರ್ಷಗಳಿಂದ ಇಬ್ಬರು ಸ್ವಾಮೀಜಿಗಳ ನಡುವೆ ಭಿನ್ನಾಭಿಪ್ರಾಯ ಮುಂದುವರಿದಿತ್ತು. ಈ ನಡುವೆ ಮಾರ್ಚ್ 8ರಂದು ಶಿವರಾತ್ರಿ ದಿನ ಶಿವಾನಂದ ಮಠದ ಜಾತ್ರಾಮಹೋತ್ಸವ ನಡೆಸಲು ನಿರ್ಧರಿಸಲಾಗಿತ್ತು. ಹೀಗಾಗಿ ಕಿರಿಯ ಶ್ರೀಗಳನ್ನು ಹೊರಗಿಟ್ಟು ಹಿರಿಯ ಶ್ರೀಗಳು ಜಾತ್ರಾಮಹೋತ್ಸವ ನಡೆಸಲು ಸಜ್ಜಾಗಿದ್ದರು. ಇದಕ್ಕೆ ಕಿರಿಯ ಶ್ರೀಗಳ ಭಕ್ತರು ಆಕ್ರೋಶ ವ್ಯಕ್ತವಾದ ಕಾರಣ, ಕಿರಿಯ ಶ್ರೀಗಳೊಂದಿಗೆ ಸೇರಿ ಹಿರಿಯ ಶ್ರೀಗಳು ಧ್ವಜಾರೋಹಣ ನೆರವೇರಿಸಿದ್ದಾರೆ.