ಗದಗ: ಪದ್ಮಶ್ರೀ ವಿಜಯ ಸಂಕೇಶ್ವರ ( Vijay Sankeshwar) ಅವರಿಗೆ… ಶ್ರೀ ಜಗದ್ಗುರು ಅನ್ನದಾನೀಶ್ವರ ಮಠದಿಂದ ಕೊಡಮಾಡುವ ಪ್ರತಿಷ್ಠಾನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಸಾಹಿತ್ಯ ಹಾಗೂ ಸಂಸ್ಕೃತಿಯ ಜಾತ್ರೆ ಎಂದೇ ಖ್ಯಾತಿ ಪಡೆದಿರುವ, ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದ 153 ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ, ಸಾರಿಗೆ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿ ಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್, ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಾಡೋಜ, ಡಾ.ಅನ್ನದಾನೀಶ್ವರ ಸ್ವಾಮೀಜಿಗಳು ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು. ಶ್ರೀಮಠದ ಉತ್ತರಾಧಿಕಾರಿ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಜಿ ಸೇರಿದಂತೆ ಹಲವು ಮಠಾಧೀಶರು ಭಾಗವಹಿಸಿದ್ದಾರೆ. ಈ ವೇಳೆ ಮಾತನಾಡಿದ ವಿಜಯ ಸಂಕೇಶ್ವರ ಅವರು, ತಾವು ನಡೆದುಕೊಂಡು ಬಂದ ದಾರಿ ಬಗ್ಗೆ ಯುವಕರಿಗೆ ತಿಳಿಸಿದರು. ಯುವಸಮೂಹ ಕಾಯಕ ನಿಷ್ಠರಾಗಿ ಕೆಲಸ ಮಾಡಿದರೆ, ನೂರಾರು, ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸುವ ಶಕ್ತಿ ಬರುತ್ತದೆ. ಯುವಜನತೆ ಕಾಯಕ, ಸಮಯಕ್ಕೆ ಹೆಚ್ಚು ಮಹತ್ವ ಕೊಡಬೇಕು. 58 ವರ್ಷದಿಂದ ನಾನು ಬಿಸಿನೆಸ್ ಮಾಡುತ್ತಿದ್ದು, ಈವರಿಗೆ ಒಂದೇ ಒಂದು ರಜೆ ಮಾಡಿಲ್ಲ. ಕಾಯಕ ನಿಷ್ಠೆ ಹೊಂದಿರುವವರು ಮಾತ್ರ ಏನಾದರೂ ಸಾಧಿಸಲು ಸಾಧ್ಯ ಎಂದರು.