ಗದಗ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೊಗೇರಿ ಗ್ರಾಮದ ಸಮೀಪ ಬಾಲಕನೊಬ್ಬ ಕಾಲುವೆಯಲ್ಲಿ (Drowned in canal) ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ. ಅಭಿಷೇಕ್ ಮೈಲೆಪ್ಪ ಮಾದರ (14) ಮೃತ ದುರ್ದೈವಿ.
ಅಭಿಷೇಕ್ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆಯಲ್ಲಿ ನೀರು ಕುಡಿಯಲು ಹೋಗಿದ್ದು, ಈ ವೇಳೆ ಕಾಲು ಜಾರಿ ಬಿದ್ದಿದ್ದಾನೆ. ನೀರಿನಿಂದ ಹೊರಬರಲು ಆಗದೆ ಉಸಿರುಗಟ್ಟಿ ಮೃತಪಟ್ಟಿದ್ದಾನೆ.
ಕಾಲುವೆಯಲ್ಲಿ ಬಾಲಕನ ಮೃತದೇಹವನ್ನು ಕಂಡೊಡನೆ ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಮೇಲೆ ಎತ್ತಿದ್ದಾರೆ. ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ನಾಗಮಲೆಯಲ್ಲಿ ಕಾಡಾನೆ ದಾಳಿಗೆ ಒಬ್ಬ ಬಲಿ, ಮತ್ತೊಬ್ಬ ಬಚಾವ್
ಚಾಮರಾಜನಗರ: ಮಲೆಮಹಾದೇಶ್ವರ ಬೆಟ್ಟದಲ್ಲಿ (Male Mahadeshwara hills) ಭಕ್ತರ ಮೇಲೆ ಕಾಡಾನೆ ದಾಳಿ (Elephant attack) ಮಾಡಿದೆ. ದಾಳಿಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದರೆ, ಮತ್ತೊಬ್ಬ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ.
ಬೆಂಗಳೂರು ಮೂಲದ ಗೋವಿಂದರಾಜು ಮತ್ತು ಆತನ ಗೆಳೆಯ ಲೋಕೇಶ್ ಇಬ್ಬರು ಹನೂರಿನಲ್ಲಿರುವ ಮಲೆಮಹಾದೇಶ್ವರ ಬೆಟ್ಟದಲ್ಲಿ ಮಾದಪ್ಪನಿಗೆ ಪೂಜೆ ಸಲ್ಲಿಸಿ ನಾಗಮಲೆಗೆ ಹೋಗುತ್ತಿದ್ದರು. ತಡರಾತ್ರಿ 11:30 ರ ಸುಮಾರಿಗೆ ಇಬ್ಬರ ಮೇಲೆ ಕಾಡಾನೆ ದಾಳಿ ಮಾಡಿದೆ.
ಇಂಡಿಗನತ್ತ ಹತ್ತಿರವಿರುವ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಳಿ ಆನೆ ತುಳಿಕ್ಕೆ ಸಿಲುಕಿ ಗೋವಿಂದರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತ್ತ ಸ್ನೇಹಿತ ಲೋಕೇಶ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ರಾತ್ರಿ ವೇಳೆ ನಾಗಮಲೆ ಹಾಗೂ ಬೆಟ್ಟದ ಮಾರ್ಗಮಧ್ಯೆ ಕಾಡಾನೆಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಭಕ್ತರು ಎಚ್ಚರಿಕೆಯಿಂದ ಇರುವಂತೆ ಅರಣ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ