ಶಿವಾನಂದ ಹಿರೇಮಠ, ವಿಸ್ತಾರ ನ್ಯೂಸ್ ಗದಗ
ಗದಗ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದೆ. ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ನೀಡಿದೆ. ಹಾಗು 24 ವರ್ಷಗಳ ಹಿಂದಿನ ಪ್ರಕರಣ/ಆರೋಪಿತರ ಕುರಿತು ವರದಿ ಸಲ್ಲಿಸಲು ಸರಕಾರಕ್ಕೆ ಸೂಚಿಸಿದೆ. ಕೋರ್ಟ್ ಆದೇಶದಂತೆ ಸಮಿತಿಯೊಂದನ್ನು ರಚಿಸಿರುವ ಸರಕಾರ, ತನಿಖೆ ಮಾಡಿ ಪರಿಶೀಲನೆ ನಡೆಸಿ ಸಮಿತಿಯು ಸಿದ್ಧಪಡಿಸಿರುವ ವರದಿಯನ್ನು ಕೋರ್ಟ್‌ಗೂ ಸಲ್ಲಿಸಿದೆ. 1999ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಈ ಆದೇಶ ನೀಡಿದ್ದು, ಪ್ರಕರಣದಲ್ಲಿ ನೊಂದ 4400 ಜನರು ನಿಟ್ಟುಸಿರು ಬಿಡುವಂತಾಗಿದೆ. ಸಾರ್ವಜನಿಕರಿಂದ ಪಡೆದ 25 ಲಕ್ಷ ಅಸಲು ಮೊತ್ತಕ್ಕೆ ಅಂದಾಜು 40 ಲಕ್ಷ ಬಡ್ಡಿ ಸಮೇತ 65 ಲಕ್ಷವನ್ನು ಪ್ರಾಧಿಕಾರ ಸಾರ್ವಜನಿಕರಿಗೆ ಮರು ಪಾವತಿಸಬೇಕಿದೆ.
ಏನಿದು ನಿವೇಶನ ಹಂಚಿಕೆ ಪ್ರಕರಣ?
ಗದಗ ನಗರದ ಜನತೆಗೆ ನಿವೇಶನ ಹಂಚಲು 1999ರಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಹೊಸ ಯೋಜನೆಯೊಂದನ್ನು ಜಾರಿ ಮಾಡಿತ್ತು. ನಿವೇಶನ ವಿನ್ಯಾಸಗಳನ್ನು ಪ್ರಾಧಿಕಾರದಿಂದ ಮಂಜೂರು ಮಾಡಿ ಹಂಚುವ ಉದ್ದೇಶ ಹೊಂದಲಾಗಿತ್ತು. ಈ ಯೋಜನೆಗೆ ಅಗತ್ಯವಿದ್ದ ಭೂಮಿ ಗುರುತಿಸಿ ನಿರ್ಣಯ ಕೈಗೊಳ್ಳಲಾಗಿತ್ತು. ಅಧಿಸೂಚನೆಯನ್ನೂ ಹೊರಡಿಸಲಾಗಿತ್ತು.
ಗುರುತಿಸಿದ ಭೂಮಿ ಖರೀದಿಸುವ ಭರವಸೆ ಮೇಲೆ ಸಾರ್ವಜನಿಕರಿಂದ ನೋಂದಣಿ ಫೀಸ್ ಸಂಗ್ರಹಿಸಲಾಗಿದೆ. 20*30 ಸೈಟ್ ಗೆ 250 ರೂ, 30*40 – 500 ರೂ., 35*50ಗೆ 750 ರೂ., 40*60 ಗೆ 1000 ರೂ., ಹಾಗೂ 60*80 ವ್ಯಾಸದ ನಿವೇಶನಕ್ಕೆ 1500 ರೂ.ನಂತೆ 1999ರಲ್ಲೇ 4400 ಜನರಿಂದ 25 ಲಕ್ಷ ಸಂಗ್ರಹಿಸಿದ್ದಾರೆ. ಫೀಸ್ ಸಂಗ್ರಹಿಸಲು ಕಾನೂನಲ್ಲೂ ಅವಕಾಶ ಇದೆ. ಆದರೆ, ಪ್ರಾಧಿಕಾರ ಮಾಡಿದ ಆಡಳಿತಾತ್ಮಕ ಎಡವಟ್ಟಿನಿಂದ ಯೋಜನೆ ಅರ್ಧದಲ್ಲೇ ನಿಂತಿತು. ರಾಜ್ಯ ಸರಕಾರದಿಂದ ಕ್ರಿಯಾ ಯೋಜನೆಗೆ ಅನುಮತಿ ಪಡೆಯದೇ ಫೀಸ್ ಸಂಗ್ರಹಿಸಿದ್ದೇ ಯೋಜನೆಗೆ ಹಿನ್ನಡೆಯಾಗಿದೆ. ಯೋಜನಾ ಪ್ರಕ್ರಿಯೆ ವಿಳಂಬವಾದ ಹಿನ್ನೆಲೆ ಯೊಜನೆಗೆ ಭೂಮಿ(150 ಎಕರೆ) ನೀಡಲು ಮುಂದೆ ಬಂದಿದ್ದ ಭೂ ಮಾಲೀಕರು ಪ್ರಾಧಿಕಾರದ ಜತೆಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಹಿಂತೆಗೆದುಕೊಂಡರು. ಹೀಗಾಗಿ ಅಗತ್ಯವಿದ್ದ ಭೂಮಿಯನ್ನು ಖರೀದಿಸಲು ಪ್ರಾಧಿಕಾರಕ್ಕೆ ಸಾಧ್ಯವಾಗದೇ ಜನರಿಗೆ ನಿವೇಶನ ನೀಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರಕ್ಕೆ ಹಣ ಕಟ್ಟಿದವರು ಕ್ಷೇಮಾಭಿವೃದ್ಧಿ ಸಂಘ ಕಟ್ಟಿಕೊಂಡು ಹೈಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿ ಹೋರಾಟ ನಡೆಸಿದ್ದಾರೆ. 24 ವರ್ಷಗಳ ನಂತರ ಕೋರ್ಟ್ ಪ್ರಕರಣ ಇತ್ಯರ್ಥಪಡಿಸಿ ಆದೇಶಿಸಿದೆ.
ಹೈಕೋರ್ಟ್ ಆದೇಶದಲ್ಲಿ ಏನಿದೆ?
-1999 ರಲ್ಲಿ ಪ್ರಾಧಿಕಾರಕ್ಕೆ ಹಣ ಕಟ್ಟಿದ ನೊಂದ ಫಲಾನುಭವಿಗಳಿಗೆ ತಕ್ಷಣವೇ ಮಧ್ಯಂತರ ಪರಿಹಾರ ಒದಗಿಸಬೇಕು.
-ಸರಕಾರ ಮಟ್ಟದಲ್ಲಿ ಸಮಿತಿಯೊಂದನ್ನು ರಚಿಸಬೇಕು. ಸಮಿತಿ ಮೂಲಕ 1999 ರ ನಡೆದ ಆಕ್ರಮ ಕುರಿತು, -ಪ್ರಕರಣದಲ್ಲಿ ಭಾಗಿ ಆಗಿದ್ದವರ ಕುರಿತು ವರದಿನ್ನು ಒಪ್ಪಿಸಬೇಕು.
-ಮಧ್ಯಂತರ ಪರಿಹಾರ ಕುರಿತು ವರದಿಯಲ್ಲಿ ಸ್ಪಷ್ಟಪಡಿಸಬೇಕು. ಗದಗ ನಗರಾಭಿವೃದ್ಧಿ ಪ್ರಾಧಿಕಾರ ಮೂಲಕ ಪರಿಹಾರ ಒದಗಿಸಬೇಕು
ಸಮಿತಿ ಭೇಟಿ, ವರದಿ ಸಲ್ಲಿಕೆ
ಬೆಂಗಳೂರಿನ ನಗರ ಯೋಜನೆ/ಪ್ರಾಧಿಕಾರ ಆಯುಕ್ತರ ಅಧ್ಯಕ್ಷತೆ ಸರಕಾರ ಸಮಿತಿ ರಚಿಸಿದೆ. ಅಧ್ಯಕ್ಷರ ನೇತೃತ್ವದ ತಂಡ ಗದಗ ಪ್ರಾಧಿಕಾರಕ್ಕೆ ಇತ್ತಿಚೆಗೆ ಭೇಟಿ ನೀಡಿ ಪರಿಶೀಲಿಸಿದೆ. ಈ ಕುರಿತು ಕೋರ್ಟ್ ಗೂ ವರದಿ ಸಲ್ಲಿಸಿದೆ. ಕೋರ್ಟ್ ಆದೇಶದಂತೆ ಸಮಿತಿಯು ಮಧ್ಯಂತರ ಪರಿಹಾರವನ್ನು ಸೂಚಿಸಿದೆ. ಪ್ರಾಧಿಕಾರಕ್ಕೆ ನೊಂದ ಫಲಾನುಭವಿಗಳು ಕಟ್ಟಿದ ಹಣಕ್ಕೆ ವಾರ್ಷಿಕ ಶೇ.8 ರಷ್ಟು ಬಡ್ಡಿ ಸಮೇತ ಹಣ ಮರು ಪಾವತಿಸಬೇಕು. ಪ್ರಾಧಿಕಾರದಿಂದ ಭವಿಷ್ಯದಲ್ಲಿ ಕೈಗೆತ್ತಿಕೊಳ್ಳುವ ನಿವೇಶನ ಹಂಚಿಕೆ ಯೋಜನೆಯಲ್ಲಿ 1999 ರ ಪ್ರಕರಣದ ಫಲಾನುಭವಿಗಳಿಗೆ ಮೊದಲ ಆಧ್ಯತೆ ನೀಡಬೇಕೆಂದು ಸಮಿತಿ ಸೂಚಿಸಿದೆ.
ಪ್ರಾಧಿಕಾರ ಏನು ಹೇಳುತ್ತದೆ?
1999 ರಲ್ಲಿ ಹಣ ಕಟ್ಟಿದವರು ಅರ್ಜಿಯೊಂದಿಗೆ ಹಣ ಕಟ್ಟಿದ ರಸೀದಿ, ಅಫಿಡವಿಟ್ ಹಾಗೂ ಆಧಾರ್ ಕಾರ್ಡ್ ಪ್ರತಿಗಳನ್ನು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದರೆ ಸಮಿತಿ ಸೂಚಿಸಿದಂತೆ ಪರಿಹಾರ ಒದಗಿಸಲಾಗುವುದು ಎನ್ನುತ್ತಾರೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿರುವ ರಮೇಶ ವಟ್ಟಕಲ್.
ʻʻತಾಳ್ಮೆಯಿಂದ ಕಾದಿದ್ದಕ್ಕೆ ಈಗ ನ್ಯಾಯ ಸಿಕ್ಕಿದೆ. ಪ್ರಭಾವಿಗಳ ಒತ್ತಡಕ್ಕೆ ಮಣಿಯದೇ ಹೈಕೋರ್ಟ್ ಮತ್ತು ಸಮಿತಿಯ ಆದೇಶದಂತೆ ಪ್ರಾಧಿಕಾರ ನಡೆದುಕೊಳ್ಳಬೇಕುʼʼ ಎನ್ನುವುದು ಲೇಔಟ್ ಹಿತರಕ್ಷಣಾ ವೇದಿಕೆ ಸದಸ್ಯ ಅಶೋಕ ಚವಡಿ ಅವರ ಮಾತು.
(ನಾಳೆ ಎರಡನೇ ಕಂತು)