ಬೆಂಗಳೂರು: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಪರಿಶೀಲನೆ ಬಳಿಕ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ (Bengaluru-Mysuru Expressway) ಹೆದ್ದಾರಿ ವೈಮಾನಿಕ ಪರಿಶೀಲನೆ ನಡೆಸಿದರು. ಬಳಿಕ, ಗಡ್ಕರಿ ಹಾಗೂ ಇತರರು ಇದ್ದ ಹೆಲಿಕಾಪ್ಟರ್ ಅನ್ನು ರಾಮನಗರದ ಜೀಗೇನಹಳ್ಳಿಯ ಹೆದ್ದಾರಿಯ ಮಧ್ಯೆಯೇ ಲ್ಯಾಂಡ್ ಮಾಡಲಾಯಿತು!
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಜತೆಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಸಚಿವ ಸಿ ಸಿ ಪಾಟೀಲ್, ಶಾಸಕ ಅರವಿಂದ ಲಿಂಬಾವಳಿ ಕೂಡ ಹಾಜರಿದ್ದರು. ಹೆಲಿಪ್ಯಾಡ್‌ನಿಂದ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದರು. ಬಳಿಕ ಬಸವನಪುರ ಸಮೀಪದ ಹೆದ್ದಾರಿ ಪ್ರಾಧಿಕಾರ ಕಚೇರಿಯಲ್ಲಿ ಗ್ಯಾಲರಿ ವೀಕ್ಷಣೆ ಮಾಡಿದರು.
ಇದಕ್ಕೂ ಮುಂಚೆ ನಿತಿನ್ ಗಡ್ಕರಿ ಅವರು ವಾಹನದಲ್ಲಿ ಸಚಿವರು ಹಾಗೂ ಸಂಸದರ ಜತೆಗೂಡಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯನ್ನು ಪರಿಶೀಲಿಸಿದರು. ಈ ವೇಳೆ, ಬಾಕಿ ಉಳಿದ ಕಾಮಗಾರಿ ಸೇರಿದಂತೆ ಇತರ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡರು. ಇದಾದ ಬಳಿಕ ಅವರು ಮಾಧ್ಯಮಗಳೊಂದಿಗೆ ಸಂವಾದನ ನಡೆಸಿ, ಹೆದ್ದಾರಿ ನಿರ್ಮಾಣ ಹಾಗೂ ಅದರಿಂದಾಗುವ ಉಪಯೋಗಗಳ ಮಾಹಿತಿಯನ್ನು ನೀಡಿದರು.
ಫೆಬ್ರವರಿ ಅಂತ್ಯಕ್ಕೆ ಲೋಕಾರ್ಪಣೆ
9000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬೆಂಗಳೂರು-ಮೈಸೂರು ದಶಪಥ (Bengaluru-Mysuru Expressway) ಹೆದ್ದಾರಿಯನ್ನು ಫೆಬ್ರವರಿ ಅಂತ್ಯಕ್ಕೆ ಲೋಕಾರ್ಪಣೆ ಮಾಡಲಾಗುವುದು. ಪ್ರಧಾನಿ ಮೋದಿ ಅಥವಾ ರಾಷ್ಟ್ರಪತಿ ಮುರ್ಮು ಅವರು ಈ ಹೆದ್ದಾರಿಗೆ ಚಾಲನೆ ನೀಡುವ ಸಾಧ್ಯತೆ ಇದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಹೇಳಿದರು.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯ ವೈಮಾನಿಕ ಸಮೀಕ್ಷೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಬೆಂಗಳೂರು-ಮೈಸೂರು ದಶಪಥ ಬಹಳ ಸುಂದರವಾಗಿ ನಿರ್ಮಾಣವಾಗಿದೆ. ಎರಡೂ ನಗರಗಳ ಮಧ್ಯೆ ಪ್ರಯಾಣದ ಅವಧಿಯನ್ನು 1.20 ಗಂಟೆಗೆ ಕಡಿಮೆಗೊಳಿಸಲಿದೆ ಎಂದು ಹೇಳಿದರು. ಜತೆಗೆ, ಈ ಬಿಜಿಯೆಸ್ಟ್ ಹೆದ್ದಾರಿಯಾಗಿರುವುದರಿಂದ ಆರ್ಥಿಕ ಮತ್ತು ಕೈಗಾರಿಕೆ ಚಟುವಟಿಕೆಗಳಿಗೆ ನೆರವು ನೀಡಲಿದೆ ಎಂದು ತಿಳಿಸಿದರು.
ಈ ದಶಪಥಕ್ಕೆ ಸಂಬಂಧಿಸಿದಂತೆ ಸ್ಥಳೀಯ ಎಂಎಲ್ಎ, ಎಂಪಿಗಳು ಒಂದಷ್ಟು ಸಲಹೆ ನೀಡಿದ್ದಾರೆ. ಎಲ್ಲವನ್ನೂ ಪರಿಶೀಲನೆ ಮಾಡಲಾಗುವುದು. ಹೆದ್ದಾರಿ ಕಂಪ್ಲೀಟ್ ಆದ್ರೆ 90 ನಿಮಿಷಗಳಲ್ಲಿ ಬೆಂಗಳೂರು-ಮೈಸೂರು ನಡುವೆ ಸಂಚಾರ ಮಾಡಬಹುದು. ಹೆದ್ದಾರಿಯಿಂದ ಮೈಸೂರು, ಶ್ರೀರಂಗಪಟ್ಟಣ ಪ್ರವಾಸೋದ್ಯಮ ಅಭಿವೃದ್ಧಿಗೂ ನೆರವಾಗಲಿದೆ. ನಾವು ಸಾಮೂಹಿಕ ಸಾರಿಗೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ | SM Krishna | ಬೆಂಗಳೂರು-ಮೈಸೂರು ದಶಪಥಕ್ಕೆ ನಾಲ್ವಡಿ ಕೃಷ್ಣರಾಜರ ಹೆಸರಿಡಿ: ಕೇಂದ್ರಕ್ಕೆ ಎಸ್ ಎಂ ಕೃಷ್ಣ ಒತ್ತಾಯ