ಶಿವಮೊಗ್ಗ: ಹೊಸಹಳ್ಳಿಯ ಗಮಕ ಕಲಾ ಪರಿಷತ್ತು ಕಳೆದ 42 ವರ್ಷಗಳಿಂದ ಗಮಕ ಕ್ಷೇತ್ರದಲ್ಲಿ ವಿಶಿಷ್ಟ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಗಮಕ ಕಲಾ ಪರಿಷತ್ (Gamaka Kala Parishad) ಕಾರ್ಯದರ್ಶಿ ಎಸ್. ನಾಗರಾಜ್ ಹೇಳಿದರು.
ಅವರು ಗುರುವಾರ (ಮಾ.9) ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಅಹೋರಾತ್ರಿ ಗಮಕ ಕಾರ್ಯಕ್ರಮವು ನಮ್ಮ ಪರಿಷತ್ತಿನ ವಿಶಿಷ್ಟ ಕಾರ್ಯಕ್ರಮಗಳಲ್ಲಿ ಒಂದು. ಹಗಲು, ರಾತ್ರಿ ಎನ್ನದೆ ನಿರಂತರವಾಗಿ 24 ಗಂಟೆಗಳ ಕಾಲ ಕಾರ್ಯಕ್ರಮ ನಡೆದರೆ, ಅದನ್ನು ಅಹೋರಾತ್ರಿ ಕಾರ್ಯಕ್ರಮ ಎನ್ನುತ್ತಾರೆ. ಇಂತಹ ಅಹೋರಾತ್ರಿ ಗಮಕ ಕಾರ್ಯಕ್ರಮಗಳನ್ನು ನಮ್ಮ ಪರಿಷತ್ತು ಈವರೆಗೆ ಐದು ಬಾರಿ ನಡೆಸಿದೆ. ಇದೀಗ ಮಾ.11 ಮತ್ತು 12 ರಂದು 6ನೇ ಅಹೋರಾತ್ರಿ ಗಮಕ ಕಾರ್ಯಕ್ರಮ ನಡೆಯುತ್ತದೆ ಎಂದು ಹೇಳಿದರು.
ಪದ್ಮಶ್ರೀ ಪ್ರಶಸ್ತಿ, ಪ್ರಥಮ ಕುಮಾರವ್ಯಾಸ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಒಳಗೊಂಡಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿ ಗಮಕ ಕಲೆಗೆ ರಾಷ್ಟ್ರೀಯ ಮನ್ನಣೆ ದೊರಕಿಸಿಕೊಟ್ಟ ಗಮಕ ಗಂಧರ್ವ ಹೊಸಹಳ್ಳಿ ಆರ್. ಕೇಶವಮೂರ್ತಿಗಳ ಸ್ಮರಣಾರ್ಥ ಈ 6ನೇ ಅಹೋರಾತ್ರಿ ಗಮಕ ಕಾರ್ಯಕ್ರಮವನ್ನು ಹೊಸಹಳ್ಳಿಯ ಗಮಕ ಭವನದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ 25 ಗಂಟೆಗಳ ಕಾಲ ನಿರಂತರ ಗಮಕ ವಾಚನ-ವ್ಯಾಖ್ಯಾನಗಳು ಇರಲಿವೆ. ಗದುಗಿನ ಕುಮಾರವ್ಯಾಸ ಭಾರತದ ಆಯ್ದ 20 ಕಥಾಭಾಗಗಳನ್ನು ನಾಡಿನ ವಿವಿಧೆಡೆಗಳಿಂದ ಆಗಮಿಸುವ 20 ವಾಚನ-ವ್ಯಾಖ್ಯಾನ ಜೋಡಿ ಕಲಾವಿದರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದರು.
ನಾಡಿನ ಇನ್ನೆಲ್ಲೂ ಇಂತಹ ಅಹೋರಾತ್ರಿ ಕಾರ್ಯಕ್ರಮ ಈವರೆಗೆ ನಡೆದಿಲ್ಲ ಎಂಬುದು ಈ ಕಾರ್ಯಕ್ರಮದ ವೈಶಿಷ್ಟ್ಯವನ್ನು ತೋರುತ್ತದೆ. ಗಮಕ ಗ್ರಾಮ ಎಂದೇ ಖ್ಯಾತವಾಗಿರುವ ಹೊಸಹಳ್ಳಿ ತನ್ನ ಹೆಸರಿಗೆ ತಕ್ಕಂತೆ ಗಮಕ ಕಲೆಯ ಇಂತಹ ವಿಶಿಷ್ಟ ಕಾರ್ಯಕ್ರಮವನ್ನು 6ನೇ ಬಾರಿಗೆ ನಡೆಸುತ್ತಿದೆ. ಶನಿವಾರ (ಮಾ. 11) ಬೆಳಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ದಾವಣಗೆರೆಯ ಹಿರಿಯ ಸಾಹಿತಿಗಳೂ ಪ್ರವಚನಕಾರರೂ ಆದ ಶಾಂತಗಂಗಾಧರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಶಿವಮೊಗ್ಗದಲ್ಲಿ ಸಹಾಯಕ ನಿರ್ದೇಶಕ ಎಚ್. ಉಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಎಚ್.ಎಸ್. ಸತ್ಯನಾರಾಯಣ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ” ಎಂದರು.
“ಮಾ.12 ರಂದು ಮಧ್ಯಾಹ್ನ 12.30ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಭಾನುಪ್ರಕಾಶ್ ವಹಿಸಲಿದ್ದಾರೆ. ಕರ್ನಾಟಕ ಗಮಕ ಪರಿಷತ್ತು ಗೌರವಾಧ್ಯಕ್ಷ ಅಶ್ವತ್ಥನಾರಾಯಣ ಶ್ರೇಷ್ಠಿ, ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಶೆಟ್ಟಿ, ಇದೇ ಕಾಲೇಜಿನ ಮಾಜಿ ಪ್ರಾಂಶುಪಾಲ ಪ್ರೊ ಎಸ್. ನಾರಾಯಣ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಧಾನ ಪರಿಷತ್ತಿನ ಸದಸ್ಯ ಡಿ.ಎಸ್. ಅರುಣ್ ಸಮಾರೋಪ ಭಾಷಣ ಮಾಡುವರು. ಇದೇ ಸಂದರ್ಭದಲ್ಲಿ ಪರಿಷತ್ತಿನ ವತಿಯಿಂದ ಡಾ. ಎಚ್. ಶಾಂತಾರಾಮ್ ಗಮಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದರು.
ಈವರೆಗೆ ಕುಂದಾಪುರದ ಭಂಡಾರ್ಕರ್ಸ್ ಕಾಲೇಜು ಪ್ರದಾನ ಮಾಡುತ್ತಿದ್ದ ಈ ಪ್ರಶಸ್ತಿಗಳ ಜವಾಬ್ದಾರಿಯನ್ನು ಡಾ. ಶಾಂತಾರಾಮ್ ಅವರು ಹೊಸಹಳ್ಳಿಯ ಗಮಕ ಕಲಾ ಪರಿಷತ್ತಿಗೆ ವಹಿಸಿಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಈ ಪ್ರಶಸ್ತಿಗಳನ್ನು ನಮ್ಮ ಪರಿಷತ್ತು ಪ್ರದಾನ ಮಾಡುತ್ತಿದೆ. ಚಿತ್ರದುರ್ಗದ ಗಮಕಿ ಚಂಪಕಾ ಶ್ರೀಧರ ಅವರು ಡಾ. ಎಚ್. ಶಾಂತಾರಾಮ್ ಗಮಕ ವಾಚನ ಪ್ರಶಸ್ತಿ’ಗೆ ಪಾತ್ರರಾಗುತ್ತಿದ್ದರೆ, ಸಾಗರದ ಹಿರಿಯ ವ್ಯಾಖ್ಯಾನಕಾರ ಕೆ.ಆರ್. ಕೃಷ್ಣಯ್ಯ ಅವರು ಡಾ. ಎಚ್. ಶಾಂತಾರಾಮ್ ಗಮಕ ವ್ಯಾಖ್ಯಾನ ಪ್ರಶಸ್ತಿಗೆ ಪಾತ್ರರಾಗುತ್ತಿದ್ದಾರೆ ಎಂದು ವಿವರಿಸಿದರು.
ಇದನ್ನೂ ಓದಿ: ಸಾವಿನ ರಹದಾರಿಯಾಗುತ್ತಿದೆಯೇ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ?; 6 ತಿಂಗಳಲ್ಲಿ ಹಾರಿತು 84 ಜನರ ಪ್ರಾಣಪಕ್ಷಿ!
ಗಮಕ ಕಲಾ ಪರಿಷತ್ ಪ್ರತಿ ವರ್ಷ ಗಮಕ ಸಪ್ತಾಹ ನಡೆಸಿ ನಾಡಿನ ಬೇರೆ ಬೇರೆ ಭಾಗಗಳ ಕಲಾವಿದರ ಗಮಕ ವಾಚನ – ವ್ಯಾಖ್ಯಾನ ಕಾರ್ಯಕ್ರಮಗಳನ್ನು ಏರ್ಪಡಿಸುತ್ತದೆ. ಹಿರಿಯ ಗಮಕ ಕಲಾವಿದರೊಬ್ಬರನ್ನು ಪ್ರತಿ ವರ್ಷ ಸನ್ಮಾನಿಸುತ್ತಿದೆ. ಇದಲ್ಲದೆ ಕುಮಾರವ್ಯಾಸ ಭಾರತ ಮತ್ತು ಜೈಮಿನಿ ಭಾರತಗಳ ಸಮಗ್ರ ವಾಚನ- ವ್ಯಾಖ್ಯಾನಗಳ ಧ್ವನಿ ಮುದ್ರಣ ಮಾಡಿ ಗಮಕ ಕಲಾಭಿಮಾನಿಗಳಿಗೆ ದೊರಕುವಂತೆ ಮಾಡಿದೆ. ನಾಲ್ವರು ಹಿರಿಯ ಗಮಕಿಗಳಿಗೆ ಅಭಿನಂದನಾ ಗ್ರಂಥಗಳನ್ನು ಸಮರ್ಪಿಸಿದೆ. ಗಮಕ ಕಲೆಗೆ ಮೀಸಲಾದ ಮಾಸಪತ್ರಿಕೆ “ಗಮಕ ಸಂಪದ”ವನ್ನು ಕಳೆದ 19 ವರ್ಷಗಳಿಂದ ಪ್ರಕಟಿಸುತ್ತಿದೆ ಎಂದು ಎಸ್.ನಾಗರಾಜ್ ಹೇಳಿದರು. ಗಮಕ ಕಲಾ ಪರಿಷತ್ ಖಜಾಂಚಿ ಎಚ್.ಕೆ. ಕೇಶವಮೂರ್ತಿ ಸುದ್ದಿಗೋಷ್ಠಿಯಲ್ಲಿ ಇದ್ದರು.