Site icon Vistara News

Gamaka Keshavamurthy | ಪಂಚಭೂತಗಳಲ್ಲಿ ಲೀನವಾದರು ಪದ್ಮಶ್ರೀ ಪುರಸ್ಕೃತ ಶ್ರೀ ಗಮಕ ಕೇಶವಮೂರ್ತಿ

H.R. Keshavamurthy gamaka artist

ಶಿವಮೊಗ್ಗ: ಖ್ಯಾತ ಗಮಕ ಕಲಾವಿದ, ಪದ್ಮಶ್ರೀ ಪುರಸ್ಕೃತ ಎಚ್‌.ಆರ್‌. ಕೇಶವಮೂರ್ತಿ (೮೮) (Gamaka Keshavamurthy) ಅವರ ಅಂತ್ಯ ಸಂಸ್ಕಾರ ಗುರುವಾರ (ಡಿ.೨೨) ಬೆಳಗ್ಗೆ ಸ್ವಗ್ರಾಮದಲ್ಲಿ ಧಾರ್ಮಿಕ ವಿಧಿ ವಿಧಾನಗಳಂತೆ ನಡೆಯಿತು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಚ್‌.ಆರ್.ಕೇಶಮೂರ್ತಿ ಅವರು ಶಿವಮೊಗ್ಗ ಸಮೀಪದ ಹೊಸಹಳ್ಳಿಯಲ್ಲಿ ಬುಧವಾರ (ಡಿ.21) ನಿಧನ ಹೊಂದಿದ್ದರು.


ಹೊಸಹಳ್ಳಿ ಕೇಶವಮೂರ್ತಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ರಾಜಕೀಯ ಮುಖಂಡರು ಸೇರಿದಂತೆ ಹಲವರು ಅಂತಿಮ‌ ದರ್ಶನ ಪಡೆದು, ಅಗಲಿದ ಅಪರೂಪದ ವ್ಯಕ್ತಿತ್ವಕ್ಕೆ ಗೌರವ ನಮನ ಸಲ್ಲಿಸಿದರು.

ಅವರ ಅಂತಿಮ ಸಂಸ್ಕಾರಕ್ಕೂ ಮುನ್ನ ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ಕುಶಾಲುತೋಪು ಮೂಲಕ ಸರ್ಕಾರಿ ಗೌರವ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಡಾ.ಆರ್‌.ಸೆಲ್ವಮಣಿ, ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಭಾಗಿಯಾಗಿದ್ದರು.

ಶತರಾಗಿ ಎಂಬ ಬಿರುದು

ಗಮಕ ಕಲಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಾಗಿ ಇವರು ಭಾರತ ಸರಕಾರದ 2022 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. 16ನೇ ವಯಸ್ಸಿನಲ್ಲೇ ಗ್ರಾಮದ ವೆಂಕಟೇಶಯ್ಯ ಅವರ ಬಳಿ ಗಮಕ ವಾಚನ ಅಧ್ಯಯನ ಆರಂಭಿಸಿದ್ದ ಇವರು ರಾಮಾಯಣ, ಮಹಾಭಾರತ, ಕನ್ನಡ ಹಾಗೂ ಸಂಸ್ಕೃತ ಕಾವ್ಯಗಳನ್ನು ಹಲವು ರಾಗಗಳಲ್ಲಿ ವಾಚನ ಮಾಡುವುದನ್ನು ರೂಢಿಸಿಕೊಂಡರು. 100 ಕ್ಕೂ ಹೆಚ್ಚುವಿಭಿನ್ನ ರಾಗಗಳಲ್ಲಿ ವಾಚನ ಮಾಡುವ ಮೂಲಕ ʼಶತರಾಗಿʼ ಎಂಬ ಬಿರುದಿಗೂ ಪಾತ್ರರಾಗಿದ್ದರು.

ರಾಜ್ಯ, ದೇಶದ ಹಲವೆಡೆ ನಡೆದ ಕಾರ್ಯಕ್ರಮಗಳಲ್ಲಿ ಗಮಕ ವಾಚನದ ಮೂಲಕ ಗಮನ ಸೆಳೆದಿರುವ ಅವರ ಸಾಧನೆಗೆ ಪ್ರತಿಷ್ಠಿತ ಪದ್ಮಶ್ರೀ, ಕುಮಾರವ್ಯಾಸ, ರಾಜ್ಯೋತ್ಸವ ಸೇರಿ ಹಲವು ಪ್ರಶಸ್ತಿಗಳು ಸಂದಿವೆ. ಎಚ್‌.ಆರ್‌.ಕೇಶವಮೂರ್ತಿ ಅವರು ಗಮಕ ಕಲೆಗೆ ತಮ್ಮ ಜೀವನವನ್ನೇ ಮುಡಿಪಾಗಿರಿಸಿದ್ದು, ನೂರಾರು ವಿದ್ಯಾರ್ಥಿಗಳಿಗೆ ಗಮಕ ಕಲೆಯನ್ನು ಉಚಿತವಾಗಿ ಕಲಿಸುವ ಮೂಲಕ ಮಾದರಿಯಾಗಿದ್ದಾರೆ. ಅವರ ಶೈಲಿಯು ಕೇಶವಮೂರ್ತಿ ಘರಾನಾ ಎಂದೇ ಖ್ಯಾತವಾಗಿದೆ.

ಇದನ್ನೂ ಓದಿ | H R Keshavamurthy | ಖ್ಯಾತ ಗಮಕ ಕಲಾವಿದ, ಪದ್ಮಶ್ರೀ ಎಚ್.ಆರ್.ಕೇಶವಮೂರ್ತಿ ಇನ್ನಿಲ್ಲ

Exit mobile version