ಬೆಂಗಳೂರು : ರಾಜ್ಯಾದ್ಯಂತ ಅಕ್ಟೋಬರ್ 28 ಶುಕ್ರವಾರ ʻಗಂಧದ ಗುಡಿʼ (Gandhada Gudi) ಸಿನಿಮಾ ಪ್ರದರ್ಶನ ಕಾಣುತ್ತಿದೆ. ಅಪ್ಪು ಅಭಿಮಾನಿಗಳ ಸಂಭ್ರಮ ಮುಗಿಲಿಗೇರಿದೆ. ತುಮಕೂರಿನ ಜೈ ಭಾರತ್ ಚಿತ್ರಮಂದಿರದಲ್ಲಿ ಗಜರಾಜನ ಜತೆ ಅಪ್ಪು ಫ್ಯಾನ್ಸ್ ಸ್ಟೆಪ್ ಹಾಕಿದ್ದಾರೆ. ಶಿವಮೊಗ್ಗದಲ್ಲಿ ಬಾಳೆ ದಿಂಡಿನ ಮಂಟಪ ಮಾಡಿ, ಆ ಮಂಟಪದಲ್ಲಿ ಪುನೀತ್ ರಾಜಕುಮಾರ್ ಭಾವಚಿತ್ರ ಇಟ್ಟು ವಿಶೇಷವಾಗಿ ಪೂಜೆ ಸಲ್ಲಿಸಿದ್ದಾರೆ. ಸಕ್ಕರೆ ನಾಡು ಮಂಡ್ಯದಲ್ಲಿ ಅಪ್ಪು ವಿಜಯೋತ್ಸವಕ್ಕೆ ಸಜ್ಜಾಗಿದೆ.
ಬಿಡುಗಡೆಯ ಶುಭಾರಂಭಕ್ಕೆ ಕುಣಿದು ಕುಪ್ಪಳಿಸಿದ ಫ್ಯಾನ್ಸ್
ತುಮಕೂರಿನ ಜೈ ಭಾರತ್ ಚಿತ್ರಮಂದಿರದಲ್ಲಿ ಅಪ್ಪು ಅಭಿಮಾನಿಗಳ ಸಂತಸ ಮುಗಿಲು ಮುಟ್ಟಿದೆ. ಅಪ್ಪು ಕಟೌಟ್‌ಗೆ ಹಾರ ತುರಾಯಿ ಹಾಕಿ ಸಂಭ್ರಮಿಸಿದ್ದಾರೆ. ಬಿಡುಗಡೆಯ ಶುಭಾರಂಭಕ್ಕೆ ಅಭಿಮಾನಿಗಳು ಆನೆ ತಂದು ಚಿತ್ರ ಮಂದಿರ ಆವರಣದಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ಮಂಡ್ಯದ ಮಹಾವೀರ ಚಿತ್ರ ಮಂದಿರದಕ್ಕೆ ಬಾಳೆಕಂದು, ಮಾವಿನ ತೋರಣಕಟ್ಟಿ ಅಪ್ಪು ಫ್ಯಾನ್ಸ್ ಸಂಭ್ರಮ ಪಟ್ಟಿದ್ದಾರೆ. ಥಿಯೇಟರ್ ಮುಂದೆ ಅಪ್ಪು ಬ್ಯಾನರ್ ಅಳವಡಿಸಲಾಗಿದೆ. ಅಭಿಮಾನಿಗಳಿಗಾಗಿಯೇ ಅನ್ನ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಮೂಲಕ ವಿಜೃಂಭಿಸಲಿದ್ದಾರೆ ಅಭಿಮಾನಿಗಳು.
ಇದನ್ನೂ ಓದಿ | Gandhada Gudi | 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ʻಗಂಧದ ಗುಡಿʼ ಸಿನಿಮಾ!
ಬಾಳೆ ದಿಂಡಿನ ಮಂಟಪದಲ್ಲಿ ಅಪ್ಪುವಿಗೆ ನಮನ
ಶಿವಮೊಗ್ಗದ ವೀರಭದ್ರೇಶ್ವರ ಚಿತ್ರಮಂದಿರ ಹಾಗು ಶಿವಪ್ಪನಾಯಕ ಮಾಲ್‌ನ ಭಾರತ್ ಸಿನಿಮಾಸ್‌ನಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ. ವೀರಭದ್ರೇಶ್ವರ ಟಾಕೀಸ್‌ನಲ್ಲಿ ರಕ್ತದಾನ ಆಯೋಜನೆ ಮಾಡಲಾಗಿದೆ. ಪುನೀತ್ ಅಭಿಮಾನಿಗಳಿಂದ ತಿಂಡಿ, ಮಧ್ಯಾಹ್ನ ಬಿರಿಯಾನಿ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಪುನೀತ್ ಸಾವಿನ ನೋವಿನಿಂದ ಇಡೀ ಕರ್ನಾಟಕದ ಜನತೆ ಇನ್ನೂ ಹೊರಬಂದಿಲ್ಲ. ಅವರ ಹೆಸರಿನಲ್ಲಿ ಹಲವು ಸಮಾಜ ಸೇವಾ ಕಾರ್ಯಗಳು ಮುಂದುವರೆದಿವೆ.
ಇದರ ನಡುವೆ ದೀಪಾವಳಿ ಹಬ್ಬದ ಪ್ರಯುಕ್ತ ಸಾಗರದ ಎಸ್ ಎನ್ ನಗರದ ರಾಮೇಶ್ವರ ವೃತ್ತ ಬಳಿ ಶರತ್ ರಾಜ್, ಜಿಷಾನ್, ವೆಂಕಟೇಶ್, ಪವನ್ ಎಂಬ ಸ್ನೇಹಿತರು, ಬಾಳೆ ದಿಂಡಿನ ಮಂಟಪ ಮಾಡಿ, ಆ ಮಂಟಪದಲ್ಲಿ ಪುನೀತ್ ರಾಜ್ ಕುಮಾರ್ ಭಾವಚಿತ್ರ ಇಟ್ಟು ವಿಶೇಷವಾಗಿ ಪೂಜೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅಪ್ಪು ಅವರ ಫೋಟೋಗೆ ಪೂಜೆ ಮಾಡುವ ಮೂಲಕ, ಅಗಲಿದ ಅಪ್ಪುವಿಗೆ ಪ್ರೀತಿಯ ನಮನ ಸಲ್ಲಿಸಿದ್ದಾರೆ.
ಇದನ್ನೂ ಓದಿ | Gandhada Gudi | ಇದು ಯಾರ ತಪಸಿನ ಫಲವೋ, ಈ ಕಂಗಳು ಮಾಡಿದ ಪುಣ್ಯವೋ ಅಂದ್ರು ಫ್ಯಾನ್ಸ್!