Site icon Vistara News

Ganesh Hegde Dodmane: ಗಣೇಶ್ ಹೆಗಡೆ ದೊಡ್ಮನೆ ಸಾರ್ಥಕವಾಗಿ ಬದುಕಿದವರು: ಸಿಎಂ ಬಸವರಾಜ ಬೊಮ್ಮಾಯಿ

Ganesh Hegde Dodmane siddapura

#image_title

ಸಿದ್ದಾಪುರ: “ವಿಚಾರವಂತರಾಗಿದ್ದ ಗಣೇಶ್ ಹೆಗಡೆ ದೊಡ್ಮನೆಯವರು (Ganesh Hegde Dodmane) ಯಾವುದೇ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ಸಾರ್ಥಕತೆಯಿಂದ ಬದುಕಿದರು” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಮಂಗಳವಾರ (ಫೆ.28) ನಡೆದ ಶ್ರೀ ಗಣೇಶ ಹೆಗಡೆ ದೊಡ್ಮನೆಯವರ ಜನ್ಮಶತಮಾನೋತ್ಸವ 2023 -ಶತಸ್ಮೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಣೇಶ್ ಹೆಗಡೆಯವರು ಆತ್ಮಸಾಕ್ಷಿಯಾಗಿ ನಡೆದುಕೊಂಡಿದ್ದರು ಎನ್ನುವುದಕ್ಕೆ ಅವರು ಮಾಡಿರುವ ಕೆಲಸಗಳು ಸಾಕ್ಷಿ. ಶಿಕ್ಷಣ ಹಾಗೂ ಸಹಕಾರಿ ಸಂಸ್ಥೆಗಳನ್ನು ಕಟ್ಟಿದರು. ರಾಜ್ಯಮಟ್ಟದ ಸಂಸ್ಥೆಯನ್ನು ಪ್ರತಿನಿಧಿಸಿ, ಸಹಕಾರಿ ರಂಗದಲ್ಲಿ ದೊಡ್ಡ ಸಾಧನೆಯನ್ನು ಮಾಡಿದರು ಎಂದು ತಿಳಿಸಿದರು.

ರಾಮಕೃಷ್ಣ ಹೆಗಡೆ ಮತ್ತು ಗಣೇಶ ಹೆಗಡೆಯವರ ಸಂಬಂಧ ಎಲ್ಲರಿಗೂ ತಿಳಿದಿರುವುದೇ. ಅಂದು ಕುಟುಂಬದ ಒಬ್ಬರೇ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿದ್ದ ಕಾಲವದು. ತಮ್ಮ ತಂದೆಯೂ ಅವರ ಸಹೋದರನಿಂದಲೇ ಉನ್ನತ ಶಿಕ್ಷಣ ಪಡೆದಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಕೌಟುಂಬಿಕ ಸಂಬಂಧಗಳ ಮಹತ್ವವನ್ನು ಇದು ತೋರಿಸುತ್ತದೆ. ಸಂಬಂಧಗಳ ಮೌಲ್ಯಗಳು ಇಂದು ಕಾಣದಾಗಿದೆ. ಇಂದು ಎಲ್ಲವೂ ವ್ಯಾವಹಾರಿಕವಾಗಿದೆ. ಒಬ್ಬ ನಾಯಕ ಹಾಗೂ ಜನರ ಮಧ್ಯೆ ಭಾವನಾತ್ಮಕ ಸಂಬಂಧವಿತ್ತು. ಇಂದು ಅಂತಹ ಸಂಬಂಧಗಳು ಮರೆಯಾಗಿರುವ ಸಂದರ್ಭದಲ್ಲಿ ಗಣೇಶ್ ಹೆಗಡೆಯವರ ಬದುಕನ್ನು ಸ್ಮರಿಸುವುದು ಅವರ ಮೌಲ್ಯಗಳನ್ನು ಸ್ಮರಿಸಿದಂತೆ. ಅವರ ಸಾಧನೆಗಳು ಅಪಾರವಾಗಿತ್ತು” ಎಂದರು.

ಗಟ್ಟಿ ನಿಲುವು

“ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಿದ್ದಾಗ ಗಣೇಶ್ ಹೆಗಡೆಯವರ ಮೇಲೆ ಅಕ್ಕಿ ವ್ಯವಹಾರದ ಬಗ್ಗೆ ಆಪಾದನೆ ಬಂದಿತ್ತು. ಆ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಮತ್ತು ಗಣೇಶ್ ಹೆಗಡೆಯವರು ಬಹಳ ಗಟ್ಟಿ ನಿಲುವು ತೆಗೆದುಕೊಂಡು ಸಮಿತಿ ರಚಿಸಿ ತನಿಖೆಯಾಯಿತು. ಗಣೇಶ್ ಹೆಗಡೆಯವರು ನಿರಪರಾಧಿಯಾಗಿ ಹೊರಬಂದರು. ನೇರ ನುಡಿ, ವಿಚಾರಗಳನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದರು. ಬಹಳ ಗಟ್ಟಿ ಮನುಷ್ಯರಾಗಿದ್ದ ಅವರು ಕಷ್ಟಗಳಿದ್ದರೂ ಅದನ್ನು ಮೆಟ್ಟಿ ನಿಂತವರು. ನೆನಪಿನ ಅಂಗಳದಲ್ಲಿ ಅವರ ನೆನಪು ಚಿರಸ್ಥಾಯಿ” ಎಂದು ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: KS Eshwarappa : ನಮಗೆ ಮೋದಿ, ಶಾ ಇದಾರೆ, ನಿಮಗೆ ಯಾರೂ ಗತಿಯೇ ಇಲ್ವಲ್ಲಾ?: ಕಾಂಗ್ರೆಸ್‌ಗೆ ಈಶ್ವರಪ್ಪ ಗೇಲಿ

ತತ್ವಾಧಾರಿತ ನಿರ್ಣಯ

“ರಾಮಕೃಷ್ಣ ಹೆಗಡೆ ಅವರ ಕೊಡುಗೆ ದೇಶ ಹಾಗೂ ರಾಜ್ಯಕ್ಕೆ ಅಪಾರವಾದುದು. ಪ್ರತಿ ವಿಚಾರದಲ್ಲಿಯೂ ತತ್ವಾಧಾರಿತ ನಿರ್ಣಯಗಳನ್ನು ತೆಗೆದುಕೊಳ್ಳುವ ಜೀವಂತಿಕೆ ಅವರಲ್ಲಿತ್ತು. ರಾಷ್ಟ್ರಮಟ್ಟದ ಶ್ರೇಷ್ಠ ನಾಯಕತ್ವ ಅವರಲ್ಲಿತ್ತು. ಅವರನ್ನು ಹತ್ತಿರದಿಂದ ಬಲ್ಲವರೇ ಅದನ್ನು ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ. ರಾಮಕೃಷ್ಣ ಹೆಗಡೆಯವರೊಂದಿಗೆ ಹತ್ತು ನಿಮಿಷಗಳನ್ನು ಕಳೆದರೂ ಅವರ ಅಭಿಮಾನಿಯಾಗುವುದು ನಿಶ್ಚಿತ. ಅವರ ಜತೆಗೆ ಹತ್ತಿರದಿಂದ ಕೆಲಸ ಮಾಡುವ ಅವಕಾಶ ಕಲ್ಪಿಸಿದ್ದರು. ಅವರಿಂದ ಬಹಳಷ್ಟು ಕಲಿತಿದ್ದೇನೆ” ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ನಮ್ಮ ನಡುವೆ ಇನ್ನೂ ಜೀವಂತ

“ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವವರು ಸಾಧಕ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಗಣೇಶ್ ಹೆಗಡೆ ಅವರ ಸ್ಮರಣೆ ಮಾಡುತ್ತಿರುವುದು ಅವರು ನಮ್ಮ ನಡುವೆ ಇನ್ನೂ ಜೀವಂತವಾಗಿದ್ದಾರೆ ಎನ್ನುವುದಕ್ಕೆ ಸಾಕ್ಷಿ. ಸಾಧನೆ ಸದಾ ಜೀವಂತವಾಗಿರುತ್ತದೆ. ಅಧಿಕಾರ ಇಲ್ಲದೆ ಜನರ ಹೃದಯ ಗೆದ್ದಿರುವುದು ಸಾಧಕನಿಗೆ ಕಿರೀಟಪ್ರಾಯ. ಗಣೇಶ್ ಹೆಗಡೆ ಹಾಗೂ ರಾಮಕೃಷ್ಣ ಹೆಗಡೆಯವರ ಮಾರ್ಗದರ್ಶನದಲ್ಲಿ ನಡೆಯೋಣ” ಎಂದರು.

ಇದನ್ನೂ ಓದಿ: Karnataka Politics : ಕಾಂಗ್ರೆಸ್‌ ಮೋದಿ ಸಾವಿನ ಜಪ ಮಾಡ್ತಿದೆ ಎನ್ನುವುದು ದೊಡ್ಡ ಸುಳ್ಳು, ಹಾಗೆ ಹೇಳಿದವರ ಹೆಸರು ಹೇಳಿ: ಸಿದ್ದು ಸವಾಲು

ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಉತ್ತರ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಷ್ಟ್ರೀಯ ನವ ನಿರ್ಮಾಣ ವೇದಿಕೆಯ ಅಧ್ಯಕ್ಷರು ಹಾಗೂ ರಾಮಕೃಷ್ಣ ಹೆಗಡೆಯವರ ಪುತ್ರಿ ಮಮತಾ ನಿಚ್ಛಾನಿ ಮೊದಲಾದವರು ಉಪಸ್ಥಿತರಿದ್ದರು.

Exit mobile version