ಬೆಂಗಳೂರು: ಚಾಮರಾಜಪೇಟೆ ಮೈದಾನದ ಬಳಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಶನಿವಾರ (ಸೆ.೧೦) ವಿಸರ್ಜನೆ (Ganeshotsav) ಮಾಡಲು ಉತ್ಸವ ಸಮಿತಿ ತೀರ್ಮಾನಿಸಿದ್ದು, ಸಕಲ ಸಿದ್ಧತೆಗಳು ನಡೆಯುತ್ತಿವೆ. ಪಾದರಾಯನಪುರದಿಂದ ಮೆರವಣಿಗೆ ಆರಂಭಿಸಲು ಸಮಿತಿ ನಿರ್ಧಾರ ಕೈಗೊಂಡಿದೆ. ಗಣೇಶ ಮೂರ್ತಿ ವಿಸರ್ಜನೆಗೆ ಗೃಹ ಸಚಿವರ ಅನುಮತಿ ಸಿಕ್ಕಿದೆ ಎಂದು ಬೆಂಗಳೂರು ಗಣೇಶೋತ್ಸವ ಸಮಿತಿ ಹೇಳಿಕೊಂಡಿದೆ.
ಪ್ರತಿಷ್ಠಾಪನೆಗೊಂಡು ಏಳು ದಿನಗಳ ನಂತರ ಗಣೇಶ ಮೂರ್ತಿ ವಿಸರ್ಜನೆಗೆ ತೀರ್ಮಾನಿಸಲಾಗಿದೆ. ಸ್ಥಳೀಯ ಪೊಲೀಸರ ವಿರೋಧದ ನಡುವೆಯೂ ಮೆರವಣಿಗೆ ಆಗಲಿದ್ದು, ಭಾರಿ ಕಟ್ಟೆಚ್ಚರವನ್ನು ವಹಿಸಲಾಗಿದೆ. ಪಾದರಾಯನಪುರದಿಂದ 40ಕ್ಕೂ ಹೆಚ್ಚು ಹಲವು ಗಣೇಶ ಮೂರ್ತಿಗಳ ಮೆರವಣಿಗೆಗೆ ಪ್ಲ್ಯಾನ್ ಮಾಡಲಾಗಿದೆ. ಚಾಮರಾಜಪೇಟೆ ಮತ್ತು ಪಾದರಾಯನಪುರದಿಂದ ಏಕಕಾಲಕ್ಕೆ ಮೆರವಣಿಗೆ ಆಗುತ್ತಿದ್ದು, ಮಧ್ಯಾಹ್ನ 12 ಗಂಟೆಯಿಂದ ಮೆರವಣಿಗೆ ಪ್ರಾರಂಭಗೊಳ್ಳಲಿದೆ.
ಇದನ್ನೂ ಓದಿ | ಈದ್ಗಾ ಮೈದಾನದಲ್ಲಿ ಗಣೇಶ | ಹುಬ್ಬಳ್ಳಿಯಲ್ಲಿ ಬೃಹತ್ ಮೆರವಣಿಗೆ; ಮೂರು ದಿನಗಳ ಉತ್ಸವಕ್ಕೆ ಭವ್ಯ ತೆರೆ
ಮೆರವಣಿಗೆ ಯಾವ ಮಾರ್ಗದಲ್ಲಿ ಸಾಗಲಿದೆ?
ಚಾಮರಾಜಪೇಟೆಯಲ್ಲಿ ಪ್ರತಿಷ್ಠಾಪನೆ ಮಾಡಿದ ಎಲ್ಲ ಗಣೇಶ ಮೂರ್ತಿಗಳು ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಆಗಲಿದೆ. ನಂತರ ಚಾಮರಾಜಪೇಟೆಯ ಗಣೇಶ ಮೂರ್ತಿಗಳು ಮೈಸೂರು ಸರ್ಕಲ್ ಬಳಿ ಸೇರಲಿದೆ. ಪಾದರಾಯನಪುರದಿಂದ ಮಧ್ಯಾಹ್ನ 2 ಗಂಟೆಗೆ ಮೈಸೂರು ಬ್ಯಾಂಕ್ ವೃತ್ತದ ಬಳಿ ಸೇರುತ್ತದೆ. ಬಿನ್ನಿಪೇಟೆಯ ಮೂರ್ತಿಗಳು ಸಹ ಮೈಸೂರು ಸರ್ಕಲ್‌ಗೆ ಸೇರಿ ಮತ್ತೆ ಅಲ್ಲಿಂದ ಮಧ್ಯಾಹ್ನ 2.30ಕ್ಕೆ ಮೆರವಣಿಗೆ ಆರಂಭಗೊಳ್ಳಲಿದೆ. ಬಳಿಕ ಮೈಸೂರು ರಸ್ತೆಯಲ್ಲಿ ಎಲ್ಲ ಒಗ್ಗೂಡಿ ಬೃಹತ್ ಮೆರವಣಿಗೆ ಆಗಲಿದೆ. ನಂತರ 40ಕ್ಕೂ ಹೆಚ್ಚು ಗಣೇಶ ಮೆರವಣಿಗೆಯು ಟೌನ್ ಹಾಲ್ ಮುಂದೆ ಜಮಾವಣೆಗೆ ಭರದ ಸಿದ್ಧತೆ ಆಗುತ್ತಿದೆ.
ಪೊಲೀಸ್ ಇಲಾಖೆ ನಿರಾಕರಣೆ!
ಪಾದರಾಯನಪುರದಿಂದ ಮೆರವಣಿಗೆ ನಡೆಸಲು ಬೆಂಗಳೂರು ಗಣೇಶೋತ್ಸವ ನಿರ್ಧರಿಸಿರುವ ವಿಚಾರಕ್ಕೆ ಅನುಮತಿ ಕೊಡಲು ಪೊಲೀಸ್ ಇಲಾಖೆ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ (ಸೆ.9) ನಗರದ ಫ್ರೀಡಂ ಪಾರ್ಕ್‌ನಲ್ಲಿ ಸರ್ಕಾರದ ವಿರುದ್ಧ ಬೆಂಗಳೂರು ಗಣೇಶೋತ್ಸವ ಸಮಿತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಉಪವಾಸ ಸತ್ಯಾಗ್ರಹದ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಲಾಗಿತ್ತು. ಪಾದರಾಯನಪುರದಿಂದ ಮೈಸೂರು ರಸ್ತೆ, ಟೌನ್‌ಹಾಲ್‌ವರೆಗೆ ಮೆರವಣಿಗೆ ಪೊಲೀಸರಿಂದ ಅಡ್ಡಿ ಮಾಡುತ್ತಿದ್ದಾರೆಂದು ಇಲಾಖೆಯ ವಿರುದ್ಧ ಕಿಡಿಕಾರಿದ್ದರು. ಅಷ್ಟೇ ಅಲ್ಲದೆ ಸತ್ಯಾಗ್ರಹದ ಸ್ಥಳದಲ್ಲೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ವಿಘ್ನ ವಿನಾಯಕನಿಗೆ ಜೈಕಾರ ಕೂಗಿದ್ದರು.
ಇದನ್ನೂ ಓದಿ | ಚಾಮರಾಜಪೇಟೆ ಮೈದಾನದ ಬಳಿ ಗಣೇಶೋತ್ಸವ ಫೈಟ್; ಹಿಂದು ಸಂಘಟನೆ ಜತೆಗೆ ಜಮೀರ್ ಅಹ್ಮದ್ ಗಣೇಶ ಪೂಜೆ