ಗಂಗಾವತಿ: ಪೊಲೀಸ್ ಪೇದೆಯೋರ್ವ ಹೃದಯಾಘಾತಕ್ಕೀಡಾಗಿ (Heart attack) ಮಲಗಿದ ಸಂದರ್ಭದಲ್ಲಿಯೇ ಸಾವನ್ನಪ್ಪಿದ ಘಟನೆ ಗಂಗಾವತಿ (Gangavathi) ತಾಲೂಕಿನ ಆಗೋಲಿ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಬಸವನಗೌಡ ಮಾಲಿಪಾಟೀಲ್ ಆಗೋಲಿ (34) ಎಂದು ಗುರುತಿಸಲಾಗಿದೆ. ರಾಯಚೂರು ಜಿಲ್ಲೆಯ ಮಸ್ಕಿ ಪೊಲೀಸ್ ಠಾಣೆಯಲ್ಲಿ ಬಸವನಗೌಡ ರೈಟರ್ ಆಗಿ ಕೆಲಸ ಮಾಡುತ್ತಿದ್ದರು.
ಗುರುವಾರ ಕರ್ತವ್ಯ ಮುಗಿಸಿ ಮನೆಗೆ ಬಂದು ರಾತ್ರಿ ಮಲಗಿದ್ದ ಸಂದರ್ಭದಲ್ಲಿಯೇ ಹೃದಯಾಘಾತವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಬಸವನಗೌಡಗೆ ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಹೃದಯ ಸಂಬಂಧಿತ ಯಾವುದೇ ಕಾಯಿಲೆ ಇರಲಿಲ್ಲ ಎನ್ನಲಾಗಿದೆ.
ಮೃತ ಪೇದೆ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಆಗಲಿದ್ದಾರೆ. ಶುಕ್ರವಾರ ಸಕಲ ಪೊಲೀಸ್ ಗೌರವದೊಂದಿಗೆ ಮೃತರಿಗೆ ಅಂತಿಮ ಗೌರವ ಸಲ್ಲಿಸಲಾಯಿತು. ತೆರೆದ ವಾಹನದಲ್ಲಿ ಪಾರ್ಥಿವ ಶರೀರ ಇಟ್ಟು ಮೆರವಣಿಗೆ ಮೂಲಕ ಕೊಂಡೊಯ್ದು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.