Site icon Vistara News

ನನ್ನ ಸಂಪರ್ಕಿಸಲು ಅಮಿತ್ ಶಾ ಹಲವು ಬಾರಿ ಯತ್ನ; ಬಿಜೆಪಿಯನ್ನು ನಾನೇ ದೂರವಿಟ್ಟಿದ್ದೆ: ಜನಾರ್ದನ ರೆಡ್ಡಿ

MLA G Janardana Reddy

ಗಂಗಾವತಿ: ಚುನಾವಣೆಗೂ ಮುನ್ನ ನನ್ನ ಸಂಪರ್ಕಿಸಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಹಲವು ಬಾರಿ ಯತ್ನಿಸಿದ್ದರು. ಆದರೆ ನಾನೇ ಉದ್ದೇಶ ಪೂರ್ವಕವಾಗಿ ಬಿಜೆಪಿಯನ್ನು (BJP Party) ದೂರ ಇಟ್ಟಿದ್ದೆ ಎಂದು ಗಂಗಾವತಿಯ ಕೆಆರ್‌ಪಿಪಿಯ ಶಾಸಕ ಜಿ. ಜನಾರ್ದನ ರೆಡ್ಡಿ (Janardhana Reddy) ಹೇಳಿದ್ದಾರೆ.

ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ನಡೆಸಿದ್ದ ಅವರ ಪತ್ನಿ ಲಕ್ಷ್ಮಿ ಅರುಣಾ ಅವರು ಸೋಲು ಕಂಡ ಹಿನ್ನೆಲೆಯಲ್ಲಿ ನಗರದ ಕನಕಗಿರಿ ರಸ್ತೆಯಲ್ಲಿರುವ ಕೆಆರ್‌ಪಿಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಳ್ಳಾರಿ ಜಿಲ್ಲೆಯ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದರು.

ಇದನ್ನೂ ಓದಿ: Sharath Babu: ಅಮೃತವರ್ಷಿಣಿ ಖ್ಯಾತಿಯ ಬಹುಭಾಷಾ ನಟ ಶರತ್‌ ಬಾಬು ಇನ್ನಿಲ್ಲ

ನನ್ನನ್ನು ಪಕ್ಷಕ್ಕೆ ಬರಮಾಡಿಕೊಳ್ಳಿ ಎಂದು ನಾನು ಬಿಜೆಪಿ ಪಕ್ಷದ ಮುಖಂಡರ ಮನೆ ಬಾಗಿಲಿಗೆ ಎಂದೂ ಹೋಗಿರಲಿಲ್ಲ. ಕೇಂದ್ರ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬಳಿಯಂತೂ ನಾನು ಮೊದಲೇ ಹೋಗಿರಲಿಲ್ಲ. ಎಷ್ಟೋ ಬಾರಿ ಅಮಿತ್ ಶಾ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ ನಾನೇ ಅವರಿಗೆ ಉದ್ದೇಶಪೂರ್ವಕವಾಗಿ ಸಿಕ್ಕಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಪಕ್ಷವನ್ನು ನಾನೇ ದೂರ ಇಟ್ಟಿದೆ ಎಂದು ಜನಾರ್ದನ ರೆಡ್ಡಿ ಹೇಳಿದರು.

ಬಿಜೆಪಿಯ ನೂರು ಶಾಸಕರಿಗೆ ರೆಡ್ಡಿ ಸಮ

ಬಿಜೆಪಿ ಪಕ್ಷದ ಅಷ್ಟು ಶಾಸಕರಿಗೆ ನಾನೊಬ್ಬನೇ ಸಮ, ವಿಧಾನಸೌಧದಲ್ಲಿ ನೂರು ಜನ ಶಾಸಕರು ಮಾಡುವ ಕೆಲಸವನ್ನು ನಾನೊಬ್ಬನೇ ಮಾಡಿ ತೋರಿಸುತ್ತೇನೆ, ನೂರು ಜನ ಶಾಸಕರಿಗೆ ಈ ಗಾಲಿ ಜನಾರ್ದನ ರೆಡ್ಡಿ ಒಬ್ಬನೇ ಸಮ ಎಂದು ಜನ ಆಡಿಕೊಳ್ಳುವ ರೀತಿಯಲ್ಲಿ ಕೆಲಸ ಮಾಡಿ ತೋರಿಸುತ್ತೇನೆ ಎಂದರು.

ಇದನ್ನೂ ಓದಿ: Murder Case: ಜೈಲಿನಿಂದ ಹೊರಬಂದಿದ್ದ ರೌಡಿಶೀಟರ್‌ ಬರ್ಬರ ಹತ್ಯೆ; ಇದು ಕೊಲೆಗೆ ಪ್ರತೀಕಾರ?

ಬಳ್ಳಾರಿ ಹಾಗೂ ಗಂಗಾವತಿ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ವಿಧಾನಸೌಧದಲ್ಲಿ ಧ್ವನಿ ಎತ್ತಿ ನಾನು ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇನೆ. ಬಿಜೆಪಿ ಶಾಸಕರು ತಮ್ಮ ಕ್ಷೇತ್ರದಲ್ಲಿ ಮಾಡಲಾಗದ ಕೆಲಸಗಳನ್ನು ನಾನು ನನ್ನ ಕ್ಷೇತ್ರದಲ್ಲಿ ಮಾಡಿ ತೋರಿಸುತ್ತೇನೆ ಎಂದು ಹೇಳಿದರು.

ಲೋಕಸಭಾ ಚುನಾವಣೆ ಟಾರ್ಗೆಟ್

ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ 2023ರ ವಿಧಾನಸಭಾ ಚುನಾವಣೆ ಕೇವಲ ಪ್ರಾಯೋಗಿಕ ಪರೀಕ್ಷೆ ಇದ್ದಂತೆ. ನಮ್ಮ ಪಕ್ಷದ ಮುಂದಿರುವ ಗುರಿ 2024ರ ಲೋಕಸಭೆ ಹಾಗೂ 2028ರ ಕರ್ನಾಟಕದ ವಿಧಾನನಸಭೆ ಎಂಬುವುದು ಪಕ್ಷದ ಎಲ್ಲಾ ನಾಯಕರ ಗಮನದಲ್ಲಿರಬೇಕು.

ಮುಂದಿನ ದಿನಗಳಲ್ಲಿ ಎದುರಾಗಲಿರುವ ಜಿಲ್ಲಾ, ತಾಲೂಕು ಪಂಚಾಯಿತಿ, ಬಳ್ಳಾರಿ ಮಹಾನಗರ ಪಾಲಿಕೆ, ಗಂಗಾವತಿ ನಗರಸಭೆಯಲ್ಲಿ ಕೆಆರ್‌ಪಿಪಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಗುರಿ ಇರಿಸಿಕೊಳ್ಳಲಾಗಿದ್ದು, ಪಕ್ಷದ ಎಲ್ಲ ಕಾರ್ಯಕರ್ತರು ಕೆಲಸ ಮಾಡಬೇಕು.

ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಎಲ್ಲ ವಾರ್ಡ್‌ಗಳಲ್ಲಿ ಕೆಆರ್‌ಪಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡಿ ತೋರಿಸುತ್ತೇನೆ. ಬಳ್ಳಾರಿಯಲ್ಲಿ ಆದ ಸೋಲಿನಿಂದ ಕಾರ್ಯಕರ್ತರು ಎದೆಗುಂದದೆ ಸಂಘಟನೆಗೆ ಮುನ್ನುಗ್ಗಿ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಭದ್ರತೆಗೆ ಸೇನೆ, ಅರೆಸೇನಾ ಪಡೆ ನಿಯೋಜನೆ, ಮರಳಿದ ಕರ್ಫ್ಯೂ

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಇತರರು ಪಾಲ್ಗೊಂಡಿದ್ದರು.

Exit mobile version