Site icon Vistara News

Garbage Disposal Unit | ಉದ್ಘಾಟನೆಯಾಗದ ಬನವಾಸಿ ಗ್ರಾಪಂ ಕಸ ವಿಲೇವಾರಿ ಘಟಕ; ಸ್ವಚ್ಛತೆಗೆ ತಪ್ಪದ ಕಂಟಕ

Garbage Disposal Unit banavasi Grama Panchayat

ಸುಧೀರ ನಾಯರ್, ಬನವಾಸಿ
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಸ ವಿಲೇವಾರಿ ಘಟಕವನ್ನು (Garbage Disposal Unit) ಸ್ಥಾಪನೆ ಮಾಡಲಾಗಿದೆ. ಆದರೆ, ಬನವಾಸಿ ಗ್ರಾಮ ಪಂಚಾಯಿತಿಯಲ್ಲಿ ಎಲ್ಲವೂ ಸಿದ್ಧವಾಗಿದ್ದರೂ ಉದ್ಘಾಟನೆ ಮಾಡದೇ ಮೀನಮೇಷ ಎಣಿಸುತ್ತಿದ್ದು ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ.

ಒಂದು ಕಡೆ ಎಲ್ಲೆಂದರಲ್ಲಿ ಕಸವನ್ನು ಎಸೆದು ಹೋಗುತ್ತಿರುವ ಗ್ರಾಮಸ್ಥರು. ಮತ್ತೊಂದು ಕಡೆ ಕಸ ಸಂಗ್ರಹಿಸಲು ಸರಿಯಾಗಿ ಬರದೇ ಇರುವ ವಾಹನ. ಕಸ ವಿಲೇವಾರಿ ಘಟಕ ಸಿದ್ಧವಾಗಿದ್ರೂ ಉದ್ಘಾಟನೆ ಮಾಡದೇ ಬೀಗ ಹಾಕಿರುವ ಸಂಬಂಧಪಟ್ಟ ಅಧಿಕಾರಿಗಳು.

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಲ್ಲೇ ಹೆಚ್ಚು ಖ್ಯಾತಿ ಪಡೆದಿರುವ ಸ್ವಚ್ಛ ಭಾರತ್ ಮಿಷನ್ ಯೋಜನೆ ಸಹ ಒಂದೂ. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಸ್ವಚ್ಛ ಭಾರತ್ ಯೋಜನೆಯನ್ನು ಜಾರಿಗೆ ತರಬೇಕು ಅನ್ನೋ ಉದ್ದೇಶದಿಂದ ಕೇಂದ್ರ ಸರ್ಕಾರವೇ ಹಣ ಬಿಡುಗಡೆ ಮಾಡಿ ಕಸ ಸಂಗ್ರಹಿಸಲು ಒಂದು ವಾಹನ ಹಾಗೂ ಪಂಚಾಯಿತಿಗೆ ಒಂದು ವಿಲೇವಾರಿ ಘಟಕವನ್ನು ಸ್ಥಾಪನೆ ಮಾಡಿದೆ.

ಹೀಗಿರುವಾಗ ಬನವಾಸಿ ಗ್ರಾಮ ಪಂಚಾಯಿತಿಯಲ್ಲೂ ಅಂದಾಜು 15 ಲಕ್ಷ ರೂ. ಹಣವನ್ನು ಖರ್ಚು ಮಾಡಿ ಕಸ ವಿಲೇವಾರಿ ಘಟಕವನ್ನು ಸ್ಥಾಪನೆ ಮಾಡಲಾಗಿದೆ. ಉತ್ತಮ ಗುಣಮಟ್ಟದ ಘಟಕವನ್ನು ಸ್ಥಾಪನೆ ಮಾಡಿ ಒಂದು ವರ್ಷ ಕಳೆಯುತ್ತಾ ಬಂದರೂ ಸಂಬಂಧಪಟ್ಟ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಪಿಡಿಒ ಅಧಿಕಾರಿಗಳು ಉದ್ಘಾಟನೆ ಮಾಡದೇ ಕಾಲಾಹರಣ ಮಾಡುತ್ತಿದ್ದಾರೆ. ಇದು ಕೂಡ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ | ಬೆಳಗಾವಿ ಅಧಿವೇಶನ | ಹೊಸ ಆರ್‌ಟಿಒ ಕಚೇರಿಗಳ ಸ್ಥಾಪನೆ ಇಲ್ಲ ಎಂದ ಸಚಿವ ಬಿ. ಶ್ರೀರಾಮುಲು

ಘನ ಹಾಗೂ ದ್ರವ್ಯ ತ್ಯಾಜ್ಯವನ್ನು ವಿಂಗಡಣೆ ಮಾಡುವ ವಿಲೇವಾರಿ ಘಟಕ ಇದಾಗಿದ್ದು, ಬಳಕೆ ಆಗದೇ ಬೇರೆ ರೀತಿಯ ಚಟುವಟಿಕೆಯ ತಾಣವಾಗಲು ದಾರಿ ಮಾಡಿಕೊಡುವಂತಾಗಿದೆ. ಈಗಾಗಲೇ ಸ್ವಚ್ಛ ಭಾರತ್ ಯೋಜನೆಯ ಅಡಿಯಲ್ಲಿ ನೂತನವಾದ ಕಸ ಸಂಗ್ರಹಿಸುವ ವಾಹನವನ್ನು ಸಹ ಖರೀದಿ ಮಾಡಲಾಗಿದ್ದು, ಅದು ಸಹ ವಾರದಲ್ಲಿ ಒಂದು ಬಾರಿ ಗ್ಯಾರೇಜ್ ಕಾಣುವಂತಾಗಿದೆ. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕಸ ವಿಲೇವಾರಿ ಘಟಕದ ಚಾಲನೆಗೆ ಇನ್ನೂ ಉದ್ಘಾಟನಾ ಭಾಗ್ಯ ಸಿಕ್ಕಿಲ್ಲ.

ಕಸ ವಿಲೇವಾರಿ ಘಟಕದ ಕೆಲಸ ಪೂರ್ಣಗೊಂಡಿದೆ. ಕಾರಣಾಂತರದಿಂದ ಘಟಕ ಉದ್ಘಾಟನೆ ವಿಳಂಬವಾಗಿದೆ. ಅತಿ ಶೀಘ್ರವಾಗಿ ಉದ್ಘಾಟನೆ ಮಾಡಲಾಗುವುದು.
| ಮಂಜುನಾಥ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಬನವಾಸಿ

ಕಸ ವಿಲೇವಾರಿ ಘಟಕ ನಿರ್ಮಾಣವಾಗಿ ವರ್ಷಗಳೇ ಕಳೆಯಿತು. ಇನ್ನೂ ಉದ್ಘಾಟನಾ ಭಾಗ್ಯ ಕಂಡಿಲ್ಲ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ.
| ಮನೋಜ ಚನ್ನಯ್ಯ, ಅಂಬೇಡ್ಕರ್ ಯುವಕ ಸಂಘದ ಸದಸ್ಯ

ಇದನ್ನೂ ಓದಿ | Central University Recruitment | ಸೆಂಟ್ರಲ್‌ ವಿವಿಯಲ್ಲಿ 77 ಬೋಧಕೇತರ ಹುದ್ದೆ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Exit mobile version