ಬೇಗೂರು: ಬೆಂಗಳೂರು ಗ್ರಾಮಾಂತರ ಪ್ರದೇಶದ ಬೊಮ್ಮನಹಳ್ಳಿಯಲ್ಲಿ ನಡೆದ ಗ್ಯಾಸ್ ಸಿಲಿಂಡರ್ ಸ್ಫೋಟ (Gas Cylinder Blast) ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಐವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಮಂಗಳವಾರ ಬೇಗೂರು ಬಳಿಯ ಬೊಮ್ಮನಹಳ್ಳಿಯ ಗಾರ್ವೇಬಾವಿಪಾಳ್ಯದ ಲಕ್ಷ್ಮಿ ಬಡಾವಣೆಯಲ್ಲಿ ಈ ದುರ್ಘಟನೆ ನಡೆದಿತ್ತು. ಐವರಿಗೆ ತೀವ್ರ ಸುಟ್ಟ ಗಾಯಗಳಾಗಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿತ್ತು. ಇವರಲ್ಲಿ ಒಂದು ಮಗು ಸೇರಿದಂತೆ ಇಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೃತರನ್ನು ಸಂದೇಶ್ (30), ರೋಹನ್ (2.5) ಎಂದು ಗುರುತಿಸಲಾಗಿದೆ.
ಸುಬ್ರಮಣಿ ಎಂಬವರಿಗೆ ಸೇರಿದ ಬಿಲ್ಡಿಂಗ್‌ನಲ್ಲಿ ವಾಸವಿದ್ದ ನೇಪಾಳ ಮೂಲದ ಸಂದೇಶ್ ಎಂಬವರ ಕುಟುಂಬಕ್ಕೆ ಈ ದುರಂತ ಸಂಭವಿಸಿದೆ. ಮನೆಯಲ್ಲಿ ಐದು ಮಂದಿ ವಾಸ ಮಾಡುತ್ತಿದ್ದರು. ರಾತ್ರಿ ಸಿಲಿಂಡರ್ ಗ್ಯಾಸ್ ಲೀಕ್ ಆಗಿತ್ತು. ಇದನ್ನು ಗಮನಿಸದೆ ಬೆಳಿಗ್ಗೆ ಲೈಟ್ ಆನ್ ಮಾಡುತ್ತಿದ್ದಂತೆ ಸ್ಫೋಟ ನಡೆದಿದೆ. ಬೆಳಿಗ್ಗೆ 6.30ರ ಸುಮಾರಿಗೆ ಸ್ಫೋಟ ಸಂಭವಿಸಿತ್ತು.
ಗಾಯಾಳುಗಳನ್ನು ಮೊದಲು ಸೇಂಟ್ ಜೋಸೆಫ್ ಆಸ್ಪತ್ರೆಯಲ್ಲಿ ಮೊದಲು ಚಿಕಿತ್ಸೆ ಪಡೆಯುತ್ತಿದ್ದರು. ನಂತರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನುಳಿದ ಮೂವರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ರೈಲ್ವೆ ಹಳಿಯಲ್ಲಿ ವ್ಯಕ್ತಿ ಶವ ಪತ್ತೆ
ಚಿತ್ರದುರ್ಗ: ಚಿತ್ರದುರ್ಗದ ವಿದ್ಯಾನಗರ ರೈಲ್ವೇ ಬ್ರಿಡ್ಜ್ ಬಳಿ ರೈಲ್ವೆ ಹಳಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಚಲಿಸುವ ರೈಲಿನಿಂದ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಎಚ್. ನಾಗರಾಜ್ (32) ಮೃತ ದುರ್ದೈವಿ. ಫೋನ್‌ನಲ್ಲಿ ಮಾತನಾಡುತ್ತ ರೈಲಿನಿಂದ ಕೆಳಗೆ ಬಿದ್ದಿರಬಹುದು ಎನ್ನಲಾಗಿದೆ. ಎಚ್. ನಾಗರಾಜ್ ಬಳ್ಳಾರಿ ಮೂಲದ ನಾರಾಯಣಪುರ ನಿವಾಸಿ ಎಂಬ ಮಾಹಿತಿ ದೊರೆತಿದೆ. ಮೃತರ ಬಳಿ ಪಾನ್ ಕಾರ್ಡ್, ಎಟಿಎಂ ಕಾರ್ಡ್, ಓಟರ್ ಐಡಿ ಲಭ್ಯವಾಗಿದೆ. ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹೆಚ್ವಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
ಇದನ್ನೂ ಓದಿ: ಅಡುಗೆ ಮಾಡುವಾಗ ಸ್ಫೋಟಗೊಂಡ ಸಿಲಿಂಡರ್; ಬಾಲಕಿಗೆ ಗಾಯ, ಮತ್ತೊಬ್ಬ ಗಂಭೀರ