ಬೆಂಗಳೂರು: ಇಲ್ಲಿನ ಕೆ.ಆರ್. ಸರ್ಕಲ್ ಅಂಡರ್‌ಪಾಸ್‌ನಲ್ಲಿ (Kr circle) ಮಳೆಯ ನೀರಿನಲ್ಲಿ (Bangalore Rain) ಸಿಲುಕಿ ಯುವತಿಯೊಬ್ಬಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು (Lokayukta Judicial Wing) ಸುಮೊಟೊ ಕೇಸ್ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
ಕಳೆದ ಮೇ 21ರಂದು ಸುರಿದ ಭಾರಿ ಮಳೆಯ ನೀರಿನಲ್ಲಿ ಸಿಲುಕಿ ಕಾರಿನಲ್ಲಿ ತೆರಳುತ್ತಿದ್ದ ಆಂಧ್ರಪ್ರದೇಶ ಮೂಲದ ಟೆಕ್ಕಿ ಮೃತಪಟ್ಟಿದ್ದರು. ಈಗ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ಘಟನೆ ಸಂಬಂಧ ಸಂಪೂರ್ಣ ವರದಿ ನೀಡುವಂತೆ ಬಿಬಿಎಂಪಿಗೆ ಸೂಚಿಸಿದ್ದಾರೆ.
ಅಂಡರ್‌ಪಾಸ್‌ನಲ್ಲಿ ನೀರು ತುಂಬಿದ್ದು ಹೇಗೆ? ಮಳೆ ನೀರು ಹೊರ ಹೋಗಲು ಕೈಗೊಂಡ ಕ್ರಮಗಳೇನು ಎಂಬ ವರದಿಯನ್ನು ನೀಡಲು ಸೂಚನೆ ನೀಡಲಾಗಿದೆ. ಉಪಲೋಕಾಯುಕ್ತ -2 ಅವರ ಸೂಚನೆ ಮೇರೆಗೆ ಲೋಕಾಯುಕ್ತ ಜ್ಯುಡಿಷಿಯಲ್ ವಿಂಗ್ ಸುಮೊಟೊ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
ಏನಿದು ಘಟನೆ?
ಕಳೆದ 21ರಂದು ವಿಧಾನಸೌಧ ಸಮೀಪದ ಕೆ.ಆರ್. ಸರ್ಕಲ್ (KR Circle Underpass) ಬಳಿ ಇರುವ ಅಂಡರ್‌ಪಾಸ್‌ನಲ್ಲಿ ಮಳೆಗೆ ಕಾರೊಂದು ಸಿಕ್ಕಿ ಬಿದ್ದಿತ್ತು. ಅದರೊಳಗೆ ಸಿಲುಕಿ ಇನ್ಫೋಸಿಸ್ ಉದ್ಯೋಗಿ (Infosys employee) ಭಾನುರೇಖಾ (22) ಮೃತಪಟ್ಟಿದ್ದರು.
ಆಂಧ್ರ ಮೂಲದ ಭಾನುರೇಖಾ ಕುಟುಂಬಸ್ಥರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಒಂದೇ ಕುಟುಂಬದ ಒಟ್ಟು ಆರು ಜನ ಹಾಗೂ ಡ್ರೈವರ್ ಸೇರಿ ಏಳು ಜನರಿದ್ದರು. ಸಮಿತಾ (13), ಸೋಹಿತಾ (15), ಸಂಭ್ರಾಜ್ಯಂ (65), ಭಾನುರೇಖಾ (22) ಹರೀಶ್ ಸ್ವರೂಪ (47), ಸಂದೀಪ್ (35) ಕಾರಿನಲ್ಲಿದ್ದರು.
ಪ್ರವಾಸಕ್ಕೆಂದು ಆಂಧ್ರ ಪ್ರದೇಶದ ಆರು ಮಂದಿಯನ್ನೊಳಗೊಂಡ ಕುಟುಂಬದವರು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ನಗರದ ಹಲವು ಕಡೆ ಕಾರಿನಲ್ಲಿ ಪ್ರಯಾಣಿಸಿ, ಭಾರಿ ಮಳೆ ಕಾರಣಕ್ಕೆ ಮನೆ ಸೇರುವ ಧಾವಂತದಲ್ಲಿದ್ದರು. ಇತ್ತ ಕೆಆರ್ ಸರ್ಕಲ್ ಬಳಿಯ ಅಂಡರ್ ಪಾಸ್ನಲ್ಲಿ 7 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿತ್ತು. ಇದರ ಅರಿವು ಇರದೆ ಕಬ್ಬನ್ ಪಾರ್ಕ್ ಕಡೆಯಿಂದ ಬರುತ್ತಿದ್ದ ಕಾರು ಅಲ್ಲಿಗೆ ಹೋಗಿದ್ದರಿಂದ ಮಳೆ ನೀರಿನಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಕ್ಷಣ ಕ್ಷಣಕ್ಕೂ ಅಂಡರ್‌ಪಾಸ್ ಒಳಗೆ ನೀರು ಹೆಚ್ಚಾಗುತ್ತ ಹೋಯಿತು. ಎಂಜಿನ್‌ಗೆ ನೀರು ತುಂಬಿಕೊಂಡು ಬ್ಲಾಕ್ ಆಯಿತು. ನಂತರ ಕಾರು ರೀಸ್ಟಾರ್ಟ್ ಮಾಡಲು ಸಾಧ್ಯವಾಗಿರಲಿಲ್ಲ.
ಅಷ್ಟರಲ್ಲೇ ನೀರು ಕಾರಿನ ಡೋರ್‌ನ ಮಟ್ಟಕ್ಕೆ ಬಂದಿದ್ದು, ನಂತರ ಡೋರ್ ಬ್ಲಾಕ್ ಆಗಿ ತೆಗೆಯಲು ಕಷ್ಟವಾಯಿತು. ಈ ವೇಳೆ ಡ್ರೈವರ್ ಡೋರ್ ತೆಗೆದು ಒಬ್ಬೊಬ್ಬರನ್ನೇ ಕೆಳಗೆ ಇಳಿಸಲು ಪ್ರಯತ್ನಿಸಿದ್ದ. ಅಷ್ಟರಲ್ಲಾಗಲೇ ಒಳಗಡೆ ಇದ್ದ ಭಾನುರೇಖಾ ಸಾಕಷ್ಟು ನೀರು ಕುಡಿದಿದ್ದರು. ನೀರು ಕುಡಿದು ಪ್ರಜ್ಞೆ ಕಳೆದುಕೊಂಡಿದ್ದರು.
ಇದನ್ನೂ ಓದಿ: Rain News: ಮುಂದಿನ 3 ಗಂಟೆಯಲ್ಲಿ 12 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ
ನಂತರ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಒಬ್ಬೊಬ್ಬರನ್ನೇ ರಕ್ಷಣೆ ಮಾಡಿದ್ದರು. ನಂತರ ಎಲ್ಲರನ್ನೂ ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ಕರೆ ತಂದಿದ್ದರು. ಬಂದ ಕೂಡಲೇ ಭಾನುರೇಖಾ ಅವರನ್ನು ಪರೀಕ್ಷಿಸಿದ ಆಸ್ಪತ್ರೆ ವೈದ್ಯರು, ಅವರು ಮೃತಪಟ್ಟಿದ್ದನ್ನು ಖಚಿತಪಡಿಸಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ