ಬೆಂಗಳೂರು: ಸೇವೆಯನ್ನು ಕಾಯಂಗೊಳಿಸಲಾಗವುದೆಂದು ಸರ್ಕಾರದ ಲಿಖಿತ ಭರವಸೆಗೆ ಒತ್ತಾಯಿಸಿ ರಾಜ್ಯದ ವಿವಿಧೆಡೆ ನಗರ ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಸೋಮವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ನೂರಾರು ಪೌರ ಕಾರ್ಮಿಕರು ಅರೆಬೆತ್ತಲೆ ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು. ರಾಜಧಾನಿ ಬೆಂಗಳೂರಿನಲ್ಲಿ ಕಸದ ಸಮಸ್ಯೆ ದಿನೇದಿನೆ ಹೆಚ್ಚಾಗುತ್ತಿದೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಜ್ಯದಲ್ಲಿ ಬಿಬಿಎಂಪಿ ಹಾಗೂ ಇತರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಸರ್ಕಾರದ ತಾತ್ವಿಕ ಒಪ್ಪಿಗೆ ಇದೆ ಎಂದಿದ್ದರು. ಇದನ್ನು ಕಾನೂನುಬದ್ಧವಾಗಿ ಜಾರಿಗೊಳಿಸಲು ಸಮಿತಿ ರಚಿಸಲಾಗುವುದು. ಸಮಿತಿಯು ಮೂರು ತಿಂಗಳೊಳಗೆ ವರದಿ ಸಲ್ಲಿಸಲಿದೆ ಎಂದು ತಿಳಿಸಿದ್ದರು.
ಆದರೆ ಮುಖ್ಯಮಂತ್ರಿಗಳ ಮೌಖಿಕ ಭರವಸೆಯನ್ನು ನಾವು ಒಪ್ಪುವುದಿಲ್ಲ, ಲಿಖಿತ ಭರವಸೆ ನೀಡಬೇಕು ಎಂದು ಪೌರಕಾರ್ಮಿಕರ ಸಂಘದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರಿಸಲಾಗಿದೆ. ಮತ್ತೊಮ್ಮೆ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಲು ಪೌರ ಕಾರ್ಮಿಕರು ನಿರ್ಧಾರ ಮಾಡಿದ್ದಾರೆ. ನಗರದ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಪೌರಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜ್ಯದ ವಿವಿಧೆಡೆ ಅರೆಬೆತ್ತಲೆ ಪ್ರತಿಭಟನೆ
ಶಿವಮೊಗ್ಗದ ಮಹಾವೀರ ವೃತ್ತದಿಂದ ಫ್ರೀಡಂ ಪಾರ್ಕ್‌ವರೆಗೆ ಜಿಟಿಜಿಟಿ ಮಳೆ ನಡುವೆಯೂ ಪೌರಕಾರ್ಮಿಕರು ಅರೆಬೆತ್ತಲೆಯಾಗಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೂಡಲೇ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು. ಪೌರ ಕಾರ್ಮಿಕರ ಮುಷ್ಕರ ಬೆಂಬಲಿಸಿ ನಗರದಲ್ಲಿ ಯುವ ಕಾಂಗ್ರೆಸ್‌ನಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಡಿಸಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ರವಾನಿಸಲಾಯಿತು.
ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ರಾಮನಗರದಲ್ಲೂ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು. ಹಾಸನದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನೂರಾರು ಪೌರಕಾರ್ಮಿಕರು ಅರೆಬೆತ್ತಲೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಶಾಸಕ ಪ್ರೀತಂಗೌಡ ಅವರು ಪ್ರತಿಭಟನಾಕಾರರ ಮನವೊಲಿಕೆಗೆ ಯತ್ನಿಸಿದರಾದರೂ ಸಫಲವಾಗಲಿಲ್ಲ. ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಧರಣಿ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ
ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಉಂಟಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೊಂದಿಗೆ (ಬಿಬಿಎಂಪಿ) ನೇರ ಪಾವತಿ ಒಪ್ಪಂದ ಮಾಡಿಕೊಂಡಿರುವ ಪೌರಕಾರ್ಮಿಕರಲ್ಲಿ ಹೆಚ್ಚಿನವರು ಕೆಲಸದಿಂದ ದೂರ ಉಳಿದಿದ್ದು, ಮನೆ-ಮನೆ ಕಸ ಸಂಗ್ರಹಣೆ ಹಾಗೂ ರಸ್ತೆಗಳ ಸ್ವಚ್ಛತೆಗೆ ಭಾಗಶಃ ತೊಂದರೆಯಾಗಿದೆ.
ಖಾಸಗಿ ಸ್ವೀಪಿಂಗ್ ಯಂತ್ರಗಳನ್ನು ಅಲ್ಪಾವಧಿಗೆ ಟೆಂಡರ್ ಮೂಲಕ ಪಡೆಯಲಾಗುತ್ತದೆ. ಟ್ರಕ್ ಮೌಂಟೆಡ್ ಯಂತ್ರಗಳನ್ನು ಎಲ್ಲ ರಸ್ತೆಗಳಿಗೆ ಬಳಕೆ ಮಾಡಲು ಆಗುವುದಿಲ್ಲ. ಹೀಗಾಗಿ ಬೀದಿ ಸ್ವಚ್ಛತೆಯಲ್ಲಿ ತೊಂದರೆ ಆಗಿರುವುದು ನಿಜ. ಸಮಸ್ಯೆಯನ್ನು ಶೀಘ್ರ ಸರಿಪಡಿಸುತ್ತೇವೆ ಎಂದು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ವಿಭಾಗದ ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್ ಹೇಳಿದ್ದಾರೆ.
ಪೌರ ಕಾರ್ಮಿಕರ ಮುಷ್ಕರದಿಂದ ಜನರಿಗೆ ಕೊಂಚ ಪ್ರಮಾಣದಲ್ಲಿ ತೊಂದರೆ ಆಗಿದೆ. ಬಿಬಿಎಂಪಿಯ 16,000 ಪೌರ ಕಾರ್ಮಿಕರ ಪೈಕಿ ೧,೬೦೦ ಕಾಯಂ ಸಿಬ್ಬಂದಿ ಇದ್ದಾರೆ. ಸದ್ಯ 27 ಸ್ವಚ್ಛತಾ ಯಂತ್ರಗಳು ನಮ್ಮಲ್ಲಿದ್ದು, 3 ದಿನಗಳ ಅವಧಿಗೆ ಶಾರ್ಟ್ ಟರ್ಮ್ ಟೆಂಡರ್ ಕರೆಯುತ್ತೇವೆ. ತಾತ್ಕಾಲಿಕವಾಗಿ 4,000 ಜನರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತೇವೆ. ಅವರು 15 ದಿನಗಳವರೆಗೆ ಸೇವೆ ಸಲ್ಲಿಸಲಿದ್ದಾರೆ. ಕಾರ್ಮಿಕ ಇಲಾಖೆಯ ನಿಯಮದ ಅನ್ವಯ ಸಂಬಳ ನೀಡಲಾಗುತ್ತದೆ ಎಂದು ಹರೀಶ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ | ವಿಫಲವಾದ ಸಿಎಂ ಬೊಮ್ಮಾಯಿ ಸಭೆ: ಪೌರಕಾರ್ಮಿಕರ ಪ್ರತಿಭಟನೆ ಮುಂದುವರಿಕೆ