Site icon Vistara News

Yakshagana Talamaddale : ಜು.22ರಂದು 1 ರೂಪಾಯಿ ಕೊಡಿ; ರಾತ್ರಿ ಪೂರ್ತಿ ತಾಳಮದ್ದಲೆ ನೋಡಿ

Yakshagana Talamaddale

ಬೆಂಗಳೂರು: ಬಣ್ಣ ಬಣ್ಣದ ವೇಷಗಳಿಲ್ಲದೆ, ಮಾತಿನ ವೈಖರಿಯ ಮೂಲಕವೇ ಕಥಾನಕವೊಂದನ್ನು ಕಟ್ಟಿಕೊಡುವ ತಾಳಮದ್ದಲೆ (Talamaddale) ಎಂಬ ಯಕ್ಷಗಾನದ ರಂಗ ಪ್ರಕಾರವೊಂದು (Yakshagana Talamaddale) ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ (Ravindra kalakshetra) ಇದೇ ಮೊದಲ ಬಾರಿಗೆ (First time) ರಾತ್ರಿ ಪೂರ್ತಿ ನಡೆಯಲಿದೆ.

ಚಿಂತಕರು, ಸಾಹಿತ್ಯಾಸಕ್ತರು ಹಾಗೂ ಜನ ಸಾಮಾನ್ಯ ಪ್ರೇಕ್ಷಕರಿಗೂ ರಂಜನೆ, ಮಾಹಿತಿ, ಪೌರಾಣಿಕ ಕಥೆಯ ಜ್ಞಾನವನ್ನು ಉಣಿಸುವ ಮಾತಿನ ಮಂಟಪದಲ್ಲೇ ಕಟ್ಟು ಹಾಕಲಿದ್ದಾರೆ. ಕೇಳುಗರನ್ನು ಪುರಾಣ ಪ್ರಪಂಚಕ್ಕೆ ಒಯ್ಯುವ ಕಲಾವಿದರ ವಾಕ್ಪಟುತ್ವ, ವಾದ ಮಂಡನೆ, ಖಂಡನೆ ಮುಂತಾದವು ರಂಜಿಸಲಿವೆ. ಕೃಷ್ಣ ಸಂಧಾನ ಹಾಗೂ ಕರ್ಣಾರ್ಜುನ ಯಕ್ಷಗಾನ ತಾಳಮದ್ದಲೆ ಪ್ರಸಂಗಗಳು ಜು.22ರ ರಾತ್ರಿ 10 ರಿಂದ ಯಕ್ಷ ಸಂಕ್ರಾಂತಿ ಹೆಸರಿನಲ್ಲಿ ನಡೆಯಲಿವೆ.

ಯಕ್ಷಗಾನ ಸಂಘಟಕ ನಾಗರಾಜ ಶೆಟ್ಟಿ ನೈಕಂಬ್ಳಿ ಅವರ ಸಂಯೋಜನೆಯಲ್ಲಿ ಮೂಡಿಬರುತ್ತಿದೆ. ಕೃಷ್ಣ ಸಂಧಾನ, ಕರ್ಣಾರ್ಜುನ ಕಥಾನಕಗಳು ರವಿಚಂದ್ರ ಕನ್ನಡಿಕಟ್ಟೆ, ಗಣೇಶ್ ಹೆಬ್ರಿ, ಚಂದ್ರಕಾಂತ ಮೂಡುಬೆಳ್ಳೆ ಅವರ ಭಾಗವತಿಕೆಯಲ್ಲಿ ನಿರೂಪಣೆಗೊಳ್ಳಲಿವೆ. ಅವಿನಾಶ್ ಬೈಪಾಡಿತ್ತಾಯ, ಅರ್ಜುನ್ ಕೊರ್ಡೇಲ್, ಕಾರ್ತಿಕ್ ಧಾರೇಶ್ವರ ಹಾಗೂ ಶಶಾಂಕ್ ಆಚಾರ್ಯ ಅವರು ಚೆಂಡೆ-ಮದ್ದಲೆಯಲ್ಲಿ ಸಹಕರಿಸಲಿದ್ದಾರೆ. ಈ ಕಾರ್ಯಕ್ರಮದ ಮತ್ತೊಂದು ವಿಶೇಷ ಎಂದರೆ ಆಸನ ಕಾದಿರಿಸಲು ಕೇವಲ 1 ರೂ. ಪ್ರವೇಶ ದರ ನಿಗದಿಪಡಿಸಲಾಗಿದೆ. ಈಗಾಗಲೇ ಕಲೆಯ ಪ್ರೋತ್ಸಾಹಕರು ಹೆಚ್ಚಿನ ಮೊತ್ತವನ್ನೂ ನೀಡಿ ಕೈಜೋಡಿಸುತ್ತಿದ್ದಾರೆ.

ಇದನ್ನೂ ಓದಿ: Weather Report : ಇನ್ನೈದು ದಿನ ಮಳೆಮಯ; ಬೆಂಗಳೂರಲ್ಲಿ ಮಾಯ

ಯಾರ್ಯಾರಿಗೆ ಯಾವ್ಯಾವ ಪಾತ್ರ?

ದೇವಿದಾಸ ವಿರಚಿತ ಕೃಷ್ಣ ಸಂಧಾನ ಪ್ರಸಂಗದಲ್ಲಿ ಶ್ರೀಕೃಷ್ಣನಾಗಿ ವಿಶ್ವೇಶ್ವರ ಭಟ್ ಸುಣ್ಣಂಬಳ, ಕೌರವನಾಗಿ ವಾಸುದೇವ ರಂಗಭಟ್ ಹಾಗೂ ವಿದುರನಾಗಿ ಸತೀಶ್ ಶೆಟ್ಟಿ ಮೂಡುಬಗೆ ಅರ್ಥ ಹೇಳಲಿದ್ದಾರೆ. ಬಳಿಕ ಗೇರುಸೊಪ್ಪ ಶಾಂತಪಯ್ಯ ವಿರಚಿತ ಕರ್ಣಾರ್ಜುನ ಪ್ರಸಂಗದಲ್ಲಿ ಕರ್ಣನಾಗಿ ಸಂಕದಗುಂಡಿ ಗಣಪತಿ ಭಟ್, ಅರ್ಜುನನಾಗಿ ಜಬ್ಬಾರ್ ಸಮೊ ಸಂಪಾಜೆ, ಶಲ್ಯನಾಗಿ ವಾಸುದೇವ ರಂಗಭಟ್, ಕೃಷ್ಣನಾಗಿ ಅಶ್ವಥ್ ಹೆಗ್ಡೆ ಹಾಗೂ ಸರ್ಪಾಸ್ತ್ರವಾಗಿ ಸುಧಾಕರ ಜೈನ್ ಹೊಸಬೆಟ್ಟುಗುತ್ತು ಅವರು ವಾಗ್ವೈಖರಿ ಮೆರೆಯಲಿದ್ದಾರೆ.

ಇಂಗ್ಲೀಷ್‌ ಪದ ಬಳಕೆಯಿಲ್ಲ

ಇನ್ನು ಈ ಕಾರ್ಯಕ್ರಮದಲ್ಲಿ ಅಪ್ಪಿ ತಪ್ಪಿಯೂ ಇಂಗ್ಲಿಷ್ ಪದಗಳ ಬಳಕೆಯಾಗುವುದಿಲ್ಲ. ಕನ್ನಡದ ವಿಶೇಷ ರಂಗ ಕಲೆಯಾಗಿರುವ ಯಕ್ಷಗಾನದ ಕಂಪು ಈಗ ಕನ್ನಡ ಸಾಹಿತ್ಯ ಲೋಕದ ಪ್ರಧಾನ ವಾಹಿನಿಗೂ ಆಕರ್ಷಣೆಯ ಕೇಂದ್ರವಾಗಿದೆ. ತಾಳಮದ್ದಲೆಯ ಔನ್ನತ್ಯವನ್ನು ರಾಜಧಾನಿಯ ಹೊಸ ಪ್ರೇಕ್ಷಕರಿಗೂ ತಲುಪಿಸುವ ಇರಾದೆ ಸಂಘಟಕರದು. ಹೆಚ್ಚಿನ ವಿವರಕ್ಕೆ ನಾಗರಾಜ ಶೆಟ್ಟಿ ಅವರನ್ನು 9741474255 ಮೂಲಕ ಸಂಪರ್ಕಿಸಬಹುದು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version