ಶಿವಮೊಗ್ಗ: ದೊಡ್ಡ ಕನಸುಗಳನ್ನು ಕಾಣುವ ಸ್ವಭಾವ ನಿಮ್ಮದಾಗಲಿ. ನಾವೀನ್ಯತೆ ಎಂಬುದು ಪ್ರತಿ ಹಂತದಲ್ಲಿ ರೂಢಿಗತವಾಗಲಿ. ವಿದ್ಯಾರ್ಥಿಗಳು ನಾವೀನ್ಯತೆ ಎಂಬ ಕನಸುಗಳ ಬೆನ್ನೇರಿ ಹೊರಡಬೇಕಿದೆ. ನಿದ್ದೆಯಲ್ಲಿಯೂ ಆ ಕನಸುಗಳು ನಮ್ಮನ್ನು ಜಾಗೃತಗೊಳಿಸುತ್ತಿರಬೇಕು ಎಂದು ಐಇಇಇ ಬೆಂಗಳೂರು ವಿಭಾಗದ ಸಹ ಮುಖ್ಯಸ್ಥ ಡಾ.ಡಿ.ಎನ್ ಸುಜಾತ ಅಭಿಪ್ರಾಯಪಟ್ಟರು.
ಸೋಮವಾರ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ (JNNCE Shivamogga) ಐಇಇಇ ಮಂಗಳೂರು ಉಪವಿಭಾಗ ಹಾಗೂ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಏರ್ಪಡಿಸಿದ್ದ ನಾವೀನ್ಯ ಯೋಜನೆಗಳ ಪ್ರದರ್ಶನ – ‘ಐ ಸ್ಕ್ವೇರ್ ಕನೆಕ್ಟ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ | ರಾಜ ಮಾರ್ಗ ಅಂಕಣ: ಆಧುನಿಕ ಅಂಗನವಾಡಿಗಳ ನಿರ್ಮಾಪಕ ಆದಿತ್ಯರಂಜನ್ IAS
ಜೀವನವೆಂಬುದು ಅನುಭವ ಆಧಾರಿತ ಹೂರಣ. ಸೋಲು ಗೆಲುವುಗಳ ನಿರಂತರತೆಯಲ್ಲಿ ಸೋಲು ನಿಮ್ಮನ್ನು ಕಾಡದಿರಲಿ. ಅನುಭವಗಳು ಹೊಸತನದ ಕಲಿಕೆಗೆ ಹೆಚ್ಚು ಪ್ರೋತ್ಸಾಹ ನೀಡಲಿದೆ. ಸ್ಪರ್ಧಾತ್ಮಕ ಯುಗದಲ್ಲಿ ನಿಮ್ಮ ತನದೊಂದಿಗೆ ನೀವು ಹೋರಾಡಿ, ಇತರರ ಯಶಸ್ಸು ಪ್ರೇರಣೆಯಾಗಿ ಪಡೆಯಿರಿ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್. ನಾಗರಾಜ ಮಾತನಾಡಿ, ತಂತ್ರಜ್ಞಾನದ ಕ್ಷೇತ್ರದಲ್ಲಿ ಕಲಿಕೆಯೊಂದಿಗೆ ಪ್ರಯೋಗಗಳ ಅವಶ್ಯಕತೆಯಿದೆ. ಯಾವುದೇ ನಾವೀನ್ಯ ಪ್ರಯೋಗಗಳು ನಮ್ಮಲ್ಲಿರುವ ಕಲಿಕೆಯ ಗುಣಮಟ್ಟದ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಪ್ರಾಯೋಗಿಕ ಕಲಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಿ. ನೀವು ರೂಪಿಸುವ ಪ್ರಯೋಗಗಳು ಕೇವಲ ಶಿಕ್ಷಣಕ್ಕೆ ಸೀಮಿತವಾಗದೆ ಪೇಟೆಂಟ್ ಫೈಲಿಂಗ್, ಸ್ಟಾರ್ಟಪ್‌ಗಳಿಗೆ ಬಡ್ತಿ ಪಡೆಯಲಿ ಎಂದು ಹೇಳಿದರು.
ಇದನ್ನೂ ಓದಿ | School Reopen: ಇಂದಿನಿಂದ ರಾಜ್ಯಾದ್ಯಂತ ಪ್ರಾಥಮಿಕ, ಪ್ರೌಢಶಾಲೆ ಆರಂಭ
ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 40 ನಾವೀನ್ಯ ಯೋಜನೆಗಳ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಪಿ. ಮಂಜುನಾಥ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಪೂರ್ಣಿಮಾ, ಕೆ.ಎಂ, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ವಿ.ಸತ್ಯನಾರಾಯಣ, ಕಾರ್ಯಕ್ರಮ ಸಂಯೋಜಕರಾದ ಡಾ.ಜಲೇಶ್ ಕುಮಾರ್, ಡಾ.ಮಂಜುಳಾ ಜಿ.ಆರ್, ಡಾ.ಬೆನಕಪ್ಪ ಎಸ್.ಎಂ, ಸುಷ್ಮಾ ಆರ್. ಉಪಸ್ಥಿತರಿದ್ದರು.