Site icon Vistara News

Goa Kannadigas : ಗೋವಾದಲ್ಲಿ ಮತ್ತೆ ಕನ್ನಡಿಗರಿಗೆ ಹಿಂಸೆ, 50ಕ್ಕೂ ಅಧಿಕ ಮನೆಗಳ ಧ್ವಂಸ, ಹಕ್ಕುಪತ್ರ ಕಿತ್ತುಕೊಂಡರು

ಮನೆ ಕಳೆದುಕೊಂಡ ಗೋವಾ ಕನ್ನಡಿಗರು

#image_title

ಬೆಂಗಳೂರು: ಗೋವಾದಲ್ಲಿ ಕನ್ನಡಿಗರ (Goa Kannadigas) ಮೇಲೆ ಮತ್ತೆ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ೧೫ ದಿನಗಳ ಹಿಂದೆ ೫೦ಕ್ಕೂ ಅಧಿಕ ಕನ್ನಡಿಗರ ಮನೆಯನ್ನು ಧ್ವಂಸ ಮಾಡಿರುವ ಗೋವಾ ಸರ್ಕಾರ ಅವರ ಹಕ್ಕುಪತ್ರಗಳನ್ನು ಕಿತ್ತುಗೊಂಡಿದೆ. ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರೆ ಎಂಬ ಕಾರಣಕ್ಕಾಗಿ ಮನೆಗಳನ್ನು ಧ್ವಂಸಗೊಳಿಸಲಾಗಿದೆ ಎನ್ನಲಾಗಿದೆ.

ಗೋವಾದಲ್ಲಿರುವ ಕನ್ನಡಿಗರು ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವುದು ನಿಜವಾದರೂ ಅವರು ಹಕ್ಕುಪತ್ರಗಳನ್ನು ಹೊಂದಿದ್ದಾರೆ. ಈಗ ಅವರ ಹಕ್ಕು ಪತ್ರಗಳನ್ನು ಕಿತ್ತುಕೊಂಡು ಹೊರಗಟ್ಟಲಾಗಿದೆ. ಕನ್ನಡಿಗರು ಅನ್ನೋ ಒಂದೇ ಒಂದು ಕಾರಣಕ್ಕೆ ರಾಜ್ಯ ಬಿಟ್ಟು ಹೋಗುವಂತೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಈಗ ಹೊರದಬ್ಬಲ್ಪಟ್ಟವರು ಕಳೆದ ೨೫ ವರ್ಷಗಳಿಂದ ಗೋವಾದಲ್ಲಿದ್ದವರು. ಅವರನ್ನು ಹೊರದಬ್ಬುವ ಹುನ್ನಾರ ಮಾಡುತ್ತಿದೆ ಎನ್ನಲಾಗುತ್ತಿದೆ. ಗೋವಾದ ವಾಸ್ಕೋದಲ್ಲಿರುವ ಬೈನಾ ಬೀಚ್‌ ಪ್ರದೇಶದಲ್ಲಿ ವಾಸವಿದ್ದ ೧೧೭೯ ಕನ್ನಡಿಗರ ಮನೆಗಳನ್ನು ಈ ಹಿಂದೆ ಗೋವಾ ಸರ್ಕಾರ ಧ್ವಂಸ ಮಾಡಿತ್ತು.

ಈಗಲೂ ಗರ್ಭಿಣಿ, ಮಕ್ಕಳು, ವಯಸ್ಸಾದವರು ಎನ್ನದೆ ಎಲ್ಲರನ್ನೂ ಹೊರದಬ್ಬಿ ಮನೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇವರೆಲ್ಲರೂ ಕರ್ನಾಟಕದ ಹಾವೇರಿ, ಶಿಗ್ಗಾಂವಿ, ಗುಲ್ಬರ್ಗ, ಬಾಗಲಕೋಟೆ, ಬಿಜಾಪುರ, ಬೆಳಗಾವಿ, ಕೊಪ್ಪಳ, ರಾಯಚೂರು , ಹುಬ್ಬಳ್ಳಿ ದಾರವಾಡ, ಬಳ್ಳಾರಿಯಿಂದ ಹೋಗಿ ಗೋವಾದಲ್ಲಿ ನೆಲೆಸಿದವರು.

ಗೋವಾ ಸರ್ಕಾರದ ಕ್ರೌರ್ಯದಿಂದ ಬೀದಿಗೆ ಬಿದ್ದಿರುವ ಕನ್ನಡಿಗರು ಈಗ ಕರ್ನಾಟಕ ಸರ್ಕಾರದ ಮೊರೆ ಹೊಕ್ಕಿದ್ದಾರೆ. ರಾಜ್ಯ ಸರ್ಕಾರ ಈ ಕೂಡಲೇ ತಮ್ಮ ಸಹಾಯಕ್ಕೆ ಬರುವಂತೆ ಮನವಿ ಮಾಡಿದ್ದಾರೆ.

ಗಡಿ ಅಭಿವೃದ್ಧಿ ಪ್ರಾಧಿಕಾರದ ಸೋಮಶೇಖರ್ ಜೊತೆ ಮಾತುಕತೆ ನಡೆಸಿರುವ ಕನ್ನಡಿಗರು ಈ ಕೂಡಲೇ ಕರ್ನಾಟಕದ ಮುಖ್ಯಮಂತ್ರಿಗಳು ಮಧ್ಯೆ ಪ್ರವೇಶಿಸಬೇಕು, ಗೋವಾದಲ್ಲಿ ನಮಗೆ ಆಗುತ್ತಿರುವ ಅನ್ಯಾಯವನ್ನು ತಡೆದು ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ಗೋವಾದ ಆಸುಪಾಸಿನಲ್ಲಿ ತಮಗೆ ಮನೆ ಕಟ್ಟಿಕೊಡುವಂತೆ ಅಂಗಲಾಚಿದ್ದಾರೆ.

ಇದನ್ನೂ ಓದಿ : Mahadayi Dispute | ಮಹದಾಯಿ ಡಿಪಿಆರ್‌ಗೆ ಕೇಂದ್ರದ ಸಮ್ಮತಿ ವಿರೋಧಿಸಿ ಶೀಘ್ರವೇ ಮೋದಿ ಬಳಿ ನಿಯೋಗ ಎಂದ ಗೋವಾ

Exit mobile version