ಶಿವಮೊಗ್ಗ: ಶಿವಮೊಗ್ಗದಲ್ಲಿ ಕೆಲವೇ ಕೆಲವು ವಿದ್ಯಾರ್ಥಿಗಳಿಂದ 1972ರಲ್ಲಿ ಆರಂಭವಾದ ಡಿವಿಎಸ್ ಪದವಿ ಪೂರ್ವ (ಸ್ವತಂತ್ರ) ಕಾಲೇಜು ಈಗ 50ರ ಸಂಭ್ರಮದಲ್ಲಿದ್ದು, ಸುವರ್ಣ ಮಹೋತ್ಸವದ (Golden Jubilee) ಆಚರಣೆಯು ಶೈಕ್ಷಣಿಕ ಚಟುವಟಿಕೆಯ ಮುನ್ನಡೆಗೆ ಮತ್ತೊಂದು ಹೊಸ ವೇದಿಕೆಯಾಗಲಿ ಎಂಬ ಮಹತ್ತರ ಉದ್ದೇಶದೊಂದಿಗೆ “ಡಿವಿಎಸ್ ಆವಿಷ್ಕಾರ್” ಎಂಬ ವಸ್ತು ಪ್ರದರ್ಶನವನ್ನು ಡಿ. 29, 30, 31 ರಂದು ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ದೇಶೀಯ ವಿದ್ಯಾಶಾಲಾ ಸಮಿತಿಯ (ಡಿವಿಎಸ್) ಅಧ್ಯಕ್ಷ ಕೆ.ಎನ್. ರುದ್ರಪ್ಪ ಕೊಳಲೆ ಹೇಳಿದರು.
ಅವರು ಬುಧವಾರ (ಡಿ.೨೮) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವಸ್ತು ಪ್ರದರ್ಶನದಲ್ಲಿ ಕಾಲೇಜಿನ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು 15 ವಿಷಯಗಳಲ್ಲಿ (ವಿಜ್ಞಾನ, ವಾಣಿಜ್ಯ, ಕಲಾ ಮತ್ತು ಭಾಷಾ ವಿಷಯಗಳಲ್ಲಿ) ಭಾಗವಹಿಸಲು ಅತ್ಯಂತ ಉತ್ಸುಕರಾಗಿ ಸುಮಾರು 275ಕ್ಕೂ ಹೆಚ್ಚು ಮಾಡೆಲ್‌ಗಳನ್ನು ತಯಾರಿಸಿ ಪ್ರದರ್ಶಿಸಲು ಸಿದ್ಧರಾಗಿದ್ದಾರೆ. ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಪ್ರಥಮ ಪದವಿ ಪಠ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮಾದರಿಗಳನ್ನು ರಚಿಸಲು ಪ್ರಾಮುಖ್ಯತೆ ನೀಡಲಾಗಿದೆ. ವಿಷಯ ಮತ್ತು ಜ್ಞಾನ ಕೌಶಲ್ಯದ ಅಗತ್ಯದ ಕುರಿತು ಪರಿಚಯಿಸುವ ಮೊದಲ ಪ್ರಯತ್ನ ಇದಾಗಬೇಕು. ಈ ಮೂಲಕ “ಹೊಸ ಶಿಕ್ಷಣ ನೀತಿ ಜಾರಿಗೆ ಮಾನಸಿಕವಾಗಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ವಸ್ತು ಪ್ರದರ್ಶನವನ್ನು ಆಕರ್ಷಣೀಯವಾಗಿಸಲು ಬೆಂಗಳೂರು ಮತ್ತು ಶಿವಮೊಗ್ಗದಲ್ಲಿನ ಪ್ರಮುಖವಾದ ಹತ್ತಾರು ಇಲಾಖೆಗಳು ಪಾಲ್ಗೊಳ್ಳಲು ಹಾಗೂ ಹಲವು ಮಹನೀಯರನ್ನು ಆಹ್ವಾನಿಸಿದ್ದೇವೆ ಎಂದರು.
ಡಿವಿಎಸ್ ಕಾರ್ಯದರ್ಶಿ ಎಸ್.ರಾಜಶೇಖರ್ ಮಾತನಾಡಿ, ಶಿವಮೊಗ್ಗದಲ್ಲಿ 1972ರಲ್ಲಿ ಕೆಲವೇ ಕೆಲವು ವಿದ್ಯಾರ್ಥಿಗಳಿಂದ ಆರಂಭವಾದ ಡಿವಿಎಸ್ ಪದವಿ ಪೂರ್ವ (ಸ್ವತಂತ್ರ) ಕಾಲೇಜು ಪ್ರಸ್ತುತ 1100 ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವುದರ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದೆ. ಯಾವುದೇ ಶಾಲೆಯ ಮುಖ್ಯವಾಗಿ 10ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರೊಂದಿಗೆ ಈ ವಸ್ತು ಪ್ರದರ್ಶನವನ್ನು ವೀಕ್ಷಿಸಲು ಅವಕಾಶ ನೀಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಾಚಾರ್ಯ ಎ.ಇ.ರಾಜಶೇಖರ, ಖಜಾಂಚಿ ಬಿ.ಗೋಪಿನಾಥ್, ಸಹ ಕಾರ್ಯದರ್ಶಿ ಡಾ.ಎ.ಸತೀಶ ಕುಮಾರ ಶೆಟ್ಟಿ, ನಿರ್ದೇಶಕರಾದ ಮಧುಸೂದನ್, ಎಂ.ರಾಜು ಮತ್ತಿತರರು ಇದ್ದರು.
ಇದನ್ನೂ ಓದಿ | IND VS SL | ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಪರ್ವ ಆರಂಭ; ಲಂಕಾ ಸರಣಿಯಿಂದ ಹಿರಿಯ ಆಟಗಾರರಿಗೆ ಕೊಕ್!