ಶಿರಸಿ: ನಾನು ಮಾಡಿರುವ ಸಮಾಜ ಕಾರ್ಯಗಳೆಲ್ಲವೂ ಜನರ ಸಹಕಾರದಿಂದ ಮತ್ತು ಮಾನವೀಯತೆಯಿಂದ ಆಗಿರುವುದು ಎಂದು ಕೆರೆ ಹೆಬ್ಬಾರ್ ಖ್ಯಾತಿಯ ಶ್ರೀನಿವಾಸ್ ಹೆಬ್ಬಾರ್ ತಿಳಿಸಿದರು. ಭಾನುವಾರ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಅಂಜನಾದ್ರಿಯ ಶ್ರೀ ಮಾರುತಿ ದೇವಸ್ಥಾನದಲ್ಲಿ ಶ್ರೀನಿವಾಸ್ ಹೆಬ್ಬಾರ್ ಅಭಿಮಾನಿಗಳ ಬಳಗ ಹಮ್ಮಿಕೊಂಡಿದ್ದ ರಕ್ತದಾನ (Blood Donation) ಹಾಗೂ ನೇತ್ರದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಯಾವುದೇ ಕಾರ್ಯವಿರಲಿ ಅಲ್ಲಿ ಜನರ ಸಹಭಾಗಿತ್ವ ಮುಖ್ಯ. ನನ್ನ ಕೆಲಸದಲ್ಲಿಯೂ ಜನರು ಸಹಭಾಗಿತ್ವ ನೀಡಿದ್ದರಿಂದ ಕೆರೆಗಳ ಅಭಿವೃದ್ದಿ ಸಾಧ್ಯವಾಯಿತು. ಹಣ ಎಲ್ಲರಲ್ಲಿಯೂ ಇರಬಹುದು. ಅದರೆ ಅದನ್ನು ಸಮಾಜಕ್ಕಾಗಿ ಕೊಂಚ ವಿನಿಯೋಗಿಸುವ ಗುಣ ಬೇಕು ಹಾಗೂ ಜನರ ಬೆಂಬಲ ಬೇಕು. ಇಲ್ಲಿ ನಾನೊಂದು ಗೊಂಬೆ ಮಾತ್ರ. ಈ ಗೊಂಬೆ ಆಡಿಸುವ ನಿಜವಾದ ಶಕ್ತಿಯೇ ನನ್ನ ಜನರು ಎಂದು ಹೇಳಿದರು.
ಅಂಜನಾದ್ರಿಯ ಶ್ರೀ ಮಾರುತಿ ದೇವಸ್ಥಾನ ಇದಿಯೋ ಇಲ್ಲ ಎನ್ನುವ ಸ್ಥಿತಿಯಲ್ಲಿತ್ತು. ಈ ದೇವಸ್ಥಾನವನ್ನು ಜನರ ಸಹಕಾರದಿಂದ ಜೀರ್ಣೋದ್ಧಾರ ಮಾಡಲಾಗಿದೆ. ಇನ್ನು ಮುಂದೆ ಈ ದೇವಸ್ಥಾನವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ ಭಕ್ತರ ದಂಡೇ ಹರಿದು ಬರುವಂತೆ ಮಾಡಲಾಗುವುದು ಎಂದರು. ನನ್ನ ಹುಟ್ಟು ಹಬ್ಬಕ್ಕೆ ನನ್ನ ಅಭಿಮಾನಿ ಬಳಗ ರಕ್ತದಾನದಂತಹ ಪವಿತ್ರವಾದ ಕಾರ್ಯವನ್ನು ಕೈಗೊಂಡಿದ್ದಾರೆ . ನನಗೆ ಗೊತ್ತಿಲ್ಲದೇ ಈ ಕಾರ್ಯಮಾಡಿದ್ದಾರೆ. ಅವರಿಗೆ ನಾನು ಋಣಿಯಾಗಿದ್ದೇನೆ ಎಂದು ಹೇಳಿದರು.
ಅವಕಾಶವಿದ್ದವರು ಯಾರು ಕೂಡ ರಕ್ತದಾನದಿಂದ ವಂಚಿತರಾಗಬಾರದೆಂದು ಅವರು ಇದೇ ಸಂದರ್ಭದಲ್ಲಿ ತಮ್ಮ ಹುಟ್ಟು ಹಬ್ಬದ ಸಂದೇಶ ನೀಡಿದರು.
ಖ್ಯಾತ ಕಣ್ಣಿನ ತಜ್ಷ ಡಾ.ಕೆ ವಿ ಶಿವರಾಮ್ ಮಾತನಾಡಿ ರಾಜ್ಯದಲ್ಕಿಯೇ ಅತ್ಯಂತ ಚಟುವಟಿಕೆಯಲ್ಕಿರುವ ಆರು ಕಣ್ಣಿನ ಬ್ಯಾಂಕ್ಗಳಲ್ಲಿ ಉತ್ತರಕನ್ನಡ ಜಿಲ್ಲೆಯ ಕಣ್ಣಿನ ಬ್ಯಾಂಕು ಕೂಡ ಒಂದು. ಈ ಬ್ಯಾಂಕು ಶಿರಸಿಯ ಗಣೇಶ ನೇತ್ರಾಲಯದಲ್ಲಿ ಮಾತ್ರವಿದೆ ಎನ್ನುವುದು ನಮಗೆ ಹೆಮ್ಮೆಯ ವಿಷಯ. ಕಣ್ಣಿನ ಬ್ಯಾಂಕಿನ ಮುಖ್ಯ ಕಾರ್ಯವೆಂದರೆ ಕಣ್ಣಿನ ದಾನದ ಬಗ್ಗೆ ಜಾಗೃತಿ ಮೂಡಿಸುಸುದಾಗಿದೆ ಎಂದರು.
ನಮ್ಮಲ್ಲಿ ನಾಲ್ಕು ವರ್ಷದ ಮಗುವಿನಿಂದ ಹಿಡಿದು 101 ವರ್ಷದ ವ್ಯಕ್ತಿಯವರೆಗೂ ಕಣ್ಣು ದಾನಮಾಡಿ ಕಣ್ಣಿಲ್ಲದವರಿಗೆ ಕಣ್ಣಾಗಿ ಹೋಗಿದ್ದಾರೆ. ಕಣ್ಣಿನ ದಾನ ಕೂಡಾ ಶ್ರೇಷ್ಠ ದಾನವಾಗಿದ್ದು ಆರೋಗ್ಯವಂತ ಎಲ್ಲಾ ಮನುಷ್ಯರೂ ಕಣ್ಣಿನ ದಾನಮಾಡಬಹುದು. ಬಿಪಿ ಶುಗರ್ ಇದ್ದವರೂ ಕೂಡಾ ಮಾಡಬಹುದು. ಆದರೆ ದಾನಮಾಡಿದ ಕಣ್ಣು ಯಾರಿಗೆ ಜೋಡಿಸಿದ್ದೇವೆ ಎನ್ನುವ ವಿಷಯ ಮಾತ್ರ ಗುಪ್ತವಾಗಿರುತ್ತದೆ. ಇದು ಕಾನೂನು ಬದ್ಧವಾಗಿದೆ ಎಂದರು.
ಇದನ್ನೂ ಓದಿ : Benefits Of Donating Blood: ರಕ್ತದಾನ ಮಾಡುವುದರ ಲಾಭ ಒಂದೆರಡಲ್ಲ!
ವೈದ್ಯೆ ಡಾ.ಸುಮನ ಹೆಗಡೆ ಮಾತನಾಡಿ, ರಕ್ತದಾನ ಮಾಡಿದಂತೆ ಮನುಷ್ಯನ ಆರೋಗ್ಯದಲ್ಲಿ ಇನ್ನಷ್ಟು ಸುಧಾರಣೆ ಉಂಟಾಗುತ್ತದೆ. ನೆನಪಿನ ಶಕ್ತಿ ಹೆಚ್ಚುತ್ತದೆ. ದೇಹದಲ್ಲಿ ಹೆಚ್ಚೆಚ್ಚು ರಕ್ತ ಉತ್ಪಾದನೆಯಾಗುತ್ತದೆ ಎಂದರು.
ಚಿಂತಕರಾದ ವಿ ಪಿ ಹೆಗಡೆ ಮಾತನಾಡಿ, ಹೆಬ್ಬಾರ್ ಅವರ ಬಗ್ಗೆ ನಾವೇನೂ ಹೇಳಬೇಕಿಲ್ಲ. ಅವರು ಮಾಡಿದ ಪುಣ್ಯದ ಕೆಲಸಗಳನ್ನು ನೋಡುತ್ತಿರುವ ಜನರೇ ಹೇಳುತ್ತಿದ್ದಾರೆ. ಅವರ ಹುಟ್ಟು ಹಬ್ಬವನ್ನು ಕೆಲವರು ನೆಮ್ಮದಿ ರುದ್ರ ಭೂಮಿಯನ್ನು ಗುಡಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಇದು ಹೆಬ್ಬಾರ ಅವರ ಹಿರಿಮೆ ಎಂದರು.
ವೇದಿಕೆಯಲ್ಲಿ ಶ್ರೀ ಮಾರುತಿ ದೇವಸ್ಥಾನದ ಅಧ್ಯಕ್ಷ ಕಿರಣ ಚಿತ್ರಗಾರ, ಡಾ.ಕಾರಂತ ಉಪಸ್ಥಿತರಿದ್ದರು. ವೆಂಕಟೇಶ ಹೆಗಡೆ ಕಾರ್ಯಕ್ರಮ ನಿರೂಪಿಸದರು.