ಬೆಂಗಳೂರು: ಭಾರಿ ಮಳೆಯಿಂದ ತತ್ತರಿಸುತ್ತಿರುವ ನಡುವೆಯೇ ಕಾವೇರಿ ನೀರು ಕೂಡಾ ಸರಬರಾಜಾಗದೆ ಸಂಕಷ್ಟದಲ್ಲಿರುವ ಬೆಂಗಳೂರಿನ ನಾಗರಿಕರಿಗೆ ಇದೀಗ ಗುಡ್ ನ್ಯೂಸ್ ಬಂದಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತೊರೆಕಾಡಿನಲ್ಲಿ ಬೆಂಗಳೂರಿಗೆ ನೀರು ಶುದ್ಧೀಕರಣ ಮಾಡಿ ಸರಬರಾಜು ಮಾಡುವ ಯಂತ್ರಾಗಾರಗಳಿದ್ದು, ನೆರೆ ನೀರು ನುಗ್ಗಿ ಅವೆರಡೂ ಹಾನಿಗೆ ಒಳಗಾಗಿದ್ದವು. ಹೀಗಾಗಿ ಸೋಮವಾರದಿಂದಲೇ ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಸ್ಥಗಿತಗೊಂಡಿತ್ತು. ಸ್ವತಃ ಜಲಮಂಡಳಿಯೇ ಇನ್ನು ಎರಡು ದಿನ ಕಾವೇರಿ ನೀರು ಸರಬರಾಜು ಆಗುವುದಿಲ್ಲ. ಹಾಗಾಗಿ ನೀರನ್ನು ಮಿತವಾಗಿ ಬಳಸಿ ಎಂದು ಸೂಚನೆ ನೀಡಿತ್ತು. ಇದೀಗ ಗುಡ್ ನ್ಯೂಸ್ ಬಂದಿದೆ.. ಅದೇನೆಂದರೆ, ಬುಧವಾರ ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿಗೆ ನೀರು ಸರಬರಾಜು ಮರು ಆರಂಭವಾಗಲಿದೆ.
ನಾಳೆಯಿಂದ ತೊರೆಕಾಡಿನಿಂದ ಬೆಂಗಳೂರಿಗೆ ಕಾವೇರಿ ನೀರು ಪೂರೈಕೆ ಯಥಾಸ್ಥಿತಿಗೆ ಬರಲಿದೆ. ಮಧ್ಯಾಹ್ನದಿಂದ ಬೆಂಗಳೂರಿನಲ್ಲಿ ಸರಬರಾಜು ಆರಂಭವಾಗಲಿದೆ ಎಂದು ಜಲಮಂಡಳಿಯ ಪ್ರಧಾನ ಮುಖ್ಯ ಅಭಿಯಂತರ ಬಿ.ಸುರೇಶ್ ಹೇಳಿಕೆ ನೀಡಿದ್ದಾರೆ.
ತೊರೆಕಾಡಿನಲ್ಲಿರುವ ೫೫೦ ಎಂಎಲ್‌ಡಿ ಮತ್ತು ೩೩೦ ಎಂಎಲ್‌ಡಿ ನೀರು ಸರಬರಾಜು ಮಾಡುವ ಯಂತ್ರಗಳು ಹಾನಿಗೊಂಡಿದ್ದವು. ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಯಂತ್ರಗಳ ದುರಸ್ತಿ ಕಾರ್ಯ ಶೇ.60ರಷ್ಟು ಮುಗಿದಿದೆ. ಒಂದು ಯಂತ್ರ ಈಗಾಗಲೇ ರಿಪೇರಿ ಆಗಿದೆ, ಇನ್ನೊಂದು ರಾತ್ರಿ ಮುಕ್ತಾಯವಾಗಲಿದೆ. ನಾಳೆಯಿಂದ 1450 MLD ನೀರು ಸರಬರಾಜು ಆಗಲಿದೆ ಎಂದು ಬಿ. ಸುರೇಶ್ ತಿಳಿಸಿದ್ದಾರೆ. ಇದರೊಂದಿಗೆ ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂದಿದ್ದಾರೆ.
ಹಿಂದಿನ ಸುದ್ದಿ | BWSSB Helpline | 2 ದಿನ ಕಾವೇರಿ ನೀರಿಲ್ಲ, ನಿಮಗೇನಾದರೂ ತುರ್ತಾಗಿ ನೀರಿನ ಅವಶ್ಯಕತೆ ಬಿದ್ದರೆ ಈ ಸಂಖ್ಯೆಗೆ ಕರೆ ಮಾಡಿ